ಇಬ್ಬರು ಬೈಕ್ ಕಳ್ಳರ ಬಂಧನ

ಕೆರೂರ: ಬಾರ್, ಅಂಗಡಿಗಳ ಮುಂಭಾಗ ರ್ಪಾಂಗ್ ಮಾಡಿದ ಬೈಕ್ ಕಳ್ಳತನ ಮಾಡಿದ ಇಬ್ಬರನ್ನು ಬಂಧಿಸಿ, 1.5 ಲಕ್ಷ ರೂ. ಮೌಲ್ಯದ 6 ಬೈಕ್​ಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾದಾಮಿ ತಾಲೂಕಿನ ಕೈನಕಟ್ಟಿಯ ರಮೇಶ ಪಾಟೀಲ (21), ನಂದ್ಯಾಳದ ಗೋಪಾಲ ಪಾಟೀಲ (24) ಬಂಧಿತರು. ಪಿಎಸ್​ಐ ಚಂದ್ರಶೇಖರ ಹೆರಕಲ್ ನೇತೃತ್ವದ ತಂಡ ಗುರುವಾರ ಬೆಳಗಿನ ಜಾವ ಗಸ್ತು ನಡೆಸುತ್ತಿದ್ದ ವೇಳೆ ಬಸ್ ನಿಲ್ದಾಣ ಮುಂಭಾಗ ಬೈಕ್ ಮೇಲೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಸಂಶಯ ಬಂದು ವಿಚಾರಿಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಮಹಾಲಿಂಗಪುರ ಮತ್ತು ಕೆರೂರಿನ ಬಾರ್, ಅಂಗಡಿಗಳ ಮುಂದೆ ನಿಲ್ಲಿಸಿದ ಆರು ಬೈಕ್ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಮಾರಾಟ ಮಾಡಲು ತಿಳಿಯದೆ ಕೈನಕಟ್ಟಿ ಗ್ರಾಮದ ಹೊಲವೊಂದರಲ್ಲಿ ಮುಚ್ಚಿಟ್ಟ ಮಾಹಿತಿ ಪಡೆದ ಪೊಲೀಸರು ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.