ಬೈಕ್​ಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವು

ತರೀಕೆರೆ: ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೈದುಖಾನ್ ಗ್ರಾಮದಲ್ಲಿ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದಾನೆ.

ಬಳ್ಳಾವರ ಗ್ರಾಮದ ಲೋಕೇಶ್ (30), ಸೈದುಖಾನ್​ನ ಚಿನ್ನ ಆಂಡಿ (35) ಮೃತಪಟ್ಟವರು. ಭಾನುವಾರ ಸಂಜೆ 6.30ಕ್ಕೆ ಬೈಕ್ ಸವಾರ ಲೋಕೇಶ್ ಬಳ್ಳಾವರ ಗ್ರಾಮದಿಂದ ಸೈದುಖಾನ್​ಗೆ ತೆರಳುತ್ತಿದ್ದ ಎನ್ನಲಾಗುತ್ತಿದೆ. ಈ ವೇಳೆ ಎದುರಿನಿಂದ ಬಂದ ಸೈದುಖಾನ್ ನಿವಾಸಿಗಳಾದ ಚಿನ್ನ ಆಂಡಿ ಹಾಗೂ ಮುರುಗೇಶ್ ಎಂಬುವವರು ಬಳ್ಳಾವರ ಗ್ರಾಮಕ್ಕೆ ಬೈಕ್​ನಲ್ಲಿ ಹೊರಟಿದ್ದರು. ಇಬ್ಬರು ಸವಾರರು ವೇಗವಾಗಿ ಬೈಕ್ ಚಲಾಯಿಸುತ್ತಿದ್ದರಿಂದ ನಿಯಂತ್ರಕ್ಕೆ ಬಾರದ ಬೈಕ್​ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ.

ತೀವ್ರ ಗಾಯಗೊಂಡಿದ್ದ ಲೋಕೇಶ್ ಭಾನುವಾರ ರಾತ್ರಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರೆ, ಮತ್ತೊಂದು ಬೈಕ್​ನ ಹಿಂಬದಿ ಸವಾರ ಚಿನ್ನ ಆಂಡಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅಸುನೀಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ಮುರುಗೇಶ್ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.