ನಿರ್ವಹಣೆ ಕೊರತೆಯಿಂದ ಬಿಜೈ ಮ್ಯೂಸಿಯಂ ಕಳಾಹೀನ

ಪಿ.ಬಿ.ಹರೀಶ್ ರೈ ಮಂಗಳೂರು
ಹೂ ತೋಟದಲ್ಲಿ ಒಣಗಿದ ಹುಲ್ಲು, ಬಾಡಿದ ಗಿಡಗಳು, ಬರಿದಾದ ಕಾರಂಜಿ ಕೊಳ, ಕಟ್ಟಡಕ್ಕೆ ನಿರ್ವಹಣೆ ಕೊರತೆ, ಬೆರಳೆಣಿಕೆಯ ಸಂದರ್ಶಕರು. ಇದು ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ ಸೇರಿದ ಏಕೈಕ ಸರ್ಕಾರಿ ವಸ್ತು ಸಂಗ್ರಹಾಲಯದ ಸ್ಥಿತಿ!
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸ್ವಾಮ್ಯದಲ್ಲಿರುವ ನಗರದ ಬಿಜೈನಲ್ಲಿರುವ ಸೀಮಂತಿಬಾಯಿ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ(ಮ್ಯೂಸಿಯಂ) ನಿರ್ವಹಣೆ ಕೊರತೆಯಿಂದ ಈಗ ಕಳಾಹೀನವಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು ವೇದಿಕೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಬಿಜೈ ವಸ್ತು ಸಂಗ್ರಹಾಲಯವನ್ನು ಪ್ರವಾಸಿಗರ ಆಕಷಣೆಯ ತಾಣವಾಗಿ ಪರಿವರ್ತಿಸುವ ಯಾವುದೇ ಪ್ರಯತ್ನ ಇದುವರೆಗೆ ನಡೆದಿಲ್ಲ. ದಶಕದಿಂದ ಬಿಜೈ ಮ್ಯೂಸಿಯಂ ನಿರ್ಲಕ್ಷಿತವಾಗಿದೆ.

ದಾನಿಯ ಕೊಡುಗೆ: ಕರ್ನಲ್ ಮಿರಾಜ್‌ಕರ್ ಅವರು 2ನೇ ಮಹಾಯುದ್ದ ಸಂದರ್ಭ ಲಾಹೋರ್‌ನಲ್ಲಿ ವೈದ್ಯರಾಗಿದ್ದಾಗ ಅಲ್ಲಿನ ಹಡಗಿನ ಆಕಾರದ ಕಟ್ಟಡಗಳಿಂದ ಪ್ರೇರಿತರಾಗಿ ಮಂಗಳೂರಿನ ಬಿಜೈ ಬಟ್ರಗುಡ್ಡದಲ್ಲಿ 1939ರಲ್ಲಿ ಹಡಗಿನ ಆಕಾರದ ಈ ಕಟ್ಟಡ ನಿರ್ಮಿಸಿದ್ದರು. ಮಂಗಳೂರಿನ ಕಾಂಕ್ರೀಟ್ ಕಟ್ಟಡಗಳಲ್ಲಿ ಇದು ಎರಡನೆಯದ್ದು ಮತ್ತು ವಿದ್ಯುತ್ ಸಂಪರ್ಕ ಪಡೆದ ಮೊದಲ ಕಟ್ಟಡ ಎನ್ನಲಾಗಿದೆ. ಮಿರಾಜ್‌ಕರ್ ತಮ್ಮ ನಿವಾಸವನ್ನು ತಾಯಿ ಸೀಮಂತಿಬಾಯಿ ಸ್ಮರಣಾರ್ಥ 1957ರಲ್ಲಿ ಸರ್ಕಾರಕ್ಕೆ ದಾನವಾಗಿ ನೀಡಿದ್ದರು. ಸರ್ಕಾರ 1960ರಲ್ಲಿ ಈ ಕಟ್ಟಡದಲ್ಲಿ ಪ್ರಾಚೀನ ವಸ್ತುಗಳ ಅಪರೂಪದ ವಸ್ತುಸಂಗ್ರಹಾಲಯ ಆರಂಭಿಸಿತ್ತು.

ಸರ್ಕಾರದ ನಿರ್ಲಕ್ಷೃ:  ಸಂಗ್ರಹಾಲಯದಲ್ಲಿ ಅಪರೂಪದ ಪ್ರಾಚ್ಯ ವಸ್ತುಗಳು, ಕಂಚಿನ ಮೂರ್ತಿಗಳು, ಹೊರಗೆ ಫಿರಂಗಿ, ವಿಗ್ರಹಗಳು, ಮಹಾಸತಿ ಕಲ್ಲು, ಕನ್ನಡ ಶಾಸನ ಮುಂತಾದ ಸಂಗ್ರಹವಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಪಾರಂಪರಿಕ ಕಟ್ಟಡ/ ಸ್ಥಳ ಗುರುತಿಸಿ ಸಂರಕ್ಷಿಸುವ ಅಭಿಯಾನದಡಿ ಬಿಜೈ ರಸ್ತೆ ಬದಿಯಲ್ಲಿ ಒಂದು ಬೋರ್ಡ್ ಹಾಕಿದೆ. ಇದನ್ನು ಹೊರತುಪಡಿಸಿ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

ಸಂದರ್ಶಕರ ಸಂಖ್ಯೆ ಕಡಿಮೆ:  ಮ್ಯೂಸಿಯಂ ವೀಕ್ಷಿಸಲು ಬರುವ ಸಂದರ್ಶಕರ ಸಂಖ್ಯೆ ತೀರ ಕಡಿಮೆಯಾಗಿದೆ. ಪ್ರವೇಶ ದರ ಹಿರಿಯರಿಗೆ 2 ರೂ. ಮತ್ತು ಮಕ್ಕಳಿಗೆ 1 ರೂ. ಇದೆ. 2018-19 ಸಾಲಿನಲ್ಲಿ ಒಟ್ಟು 4,385 ಸಂದರ್ಶಕರು ಆಗಮಿಸಿದ್ದಾರೆ. ಪ್ರವೇಶ ದರವನ್ನು ಹಿರಿಯರಿಗೆ 10ರೂ. ಮತ್ತು ಕಿರಿಯರಿಗೆ 5ರೂ. ಏರಿಕೆ ಮಾಡುವಂತೆ ಇಲ್ಲಿನ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ. ಮ್ಯೂಸಿಯಂನ ಗಾರ್ಡನ್ ನಿರ್ವಹಣೆಯನ್ನು ಈ ಹಿಂದೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿ ಮುಗಿದ ಬಳಿಕ ಉದ್ಯಾನವನವನ್ನು ಕೇಳುವವರಿಲ್ಲದ ಸ್ಥಿತಿ. ಈಗ ನೀರಿನ ಕೊರತೆಯೂ ಎದುರಾಗಿದ್ದು ಮ್ಯೂಸಿಯಂ ಮುಂಭಾಗದ ಗಾರ್ಡನ್ ಪಾಳು ಬಿದ್ದ ಸ್ಥಿತಿಯಲ್ಲಿದೆ.

ಬಿಜೈ ಮ್ಯೂಸಿಯಂ ಈಗ ಪುರಾತತ್ವ ಮತ್ತು ಪರಂಪರೆ ಇಲಾಖೆ ಅಧೀನದಲ್ಲಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷೃದಿಂದ ಮ್ಯೂಸಿಯಂ ಹೆಚ್ಚಿನ ಅಭಿವೃದ್ಧಿ ಕಂಡಿಲ್ಲ. ಮಂಗಳೂರಿನ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಮ್ಯೂಸಿಯಂಗೆ ಕಾಯಕಲ್ಪ ನೀಡಬೇಕಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧಿಸಿ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಿದ್ದು, ಇದರಲ್ಲಿ ಮ್ಯೂಸಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗುವುದು.
ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ

ರಜಾ ದಿನಗಳಲ್ಲಿ ಮ್ಯೂಸಿಯಂಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ. ಶಾಲೆ ಆರಂಭವಾದ ವಿದ್ಯಾರ್ಥಿಗಳು ಬರುತ್ತಾರೆ. ಈಗ ನೀರಿನ ಕೊರತೆ ಇದೆ. ಹಾಗಾಗಿ ಗಾರ್ಡನ್ ನಿರ್ವಹಣೆಗೆ ತೊಡಕಾಗಿದೆ. ಮ್ಯೂಸಿಯಂ ಕಟ್ಟಡದ ನಿರ್ವಹಣೆ ಉತ್ತಮ ರೀತಿಯಲ್ಲಿದೆ. ಮ್ಯೂಸಿಯಂಗೆ ಬರುವ ರಸ್ತೆಯನ್ನು ಇಲಾಖೆ ವತಿಯಿಂದಲೇ ಇಂಟರ್‌ಲಾಕ್ ಅಳವಡಿಸಿ ಅಭಿವೃದ್ಧಿಪಡಿಸಲಾಗಿದೆ.
ಎಂ.ಕೆ.ಗೌಡ ಸೀನಿಯರ್ ಡಿವಿಜನಲ್ ಅಸಿಸ್ಟೆಂಟ್, ಬಿಜೈ ಮ್ಯೂಸಿಯಂ

Leave a Reply

Your email address will not be published. Required fields are marked *