ಗ್ಯಾಂಗ್​ಸ್ಟರ್​ ನಡೆಸಿದ ಶೂಟೌಟ್​ನಲ್ಲಿ ಪೊಲೀಸ್​ ಅಧಿಕಾರಿ ಸಾವು

ಖಗಾರಿಯಾ: ಗ್ಯಾಂಗ್​ಸ್ಟರ್​ಗಳು ನಡೆಸಿದ ಶೂಟೌಟ್​ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಪಸ್ರಾಹ ಪೊಲೀಸ್​ ಠಾಣೆಯ ಸ್ಟೇಷನ್​ ಹೌಸ್​ ಆಫೀಸರ್​ ಆಗಿದ್ದ ಆಶಿಶ್​ ಕುಮಾರ್​ ಮೃತಪಟ್ಟಿದ್ದು, ಘಟನೆಯಲ್ಲಿ ಮತ್ತೊಬ್ಬ ಪೊಲೀಸ್​ ಅಧಿಕಾರಿ ಗಾಯಗೊಂಡಿದ್ದಾರೆ.

ಖಗಾರಿಯಾದ ಹೊರಭಾಗದಲ್ಲಿ ಗಂಗಾ ನದಿಯ ಹತ್ತಿರ ದಿನೇಶ್​ ಮುನಿ ಗ್ಯಾಂಗ್​ ಅಡಗಿರುವುದನ್ನು ತಿಳಿದ 32 ವರ್ಷದ ಆಶಿಶ್​ ನೇತೃತ್ವದ ತಂಡ ನಾಲ್ವರು ಅಧಿಕಾರಿಗಳೊಂದಿಗೆ ಶುಕ್ರವಾರ ತಡರಾತ್ರಿ 2 ಗಂಟೆ ಸುಮಾರಿಗೆ ಗ್ಯಾಂಗ್​ಸ್ಟರ್​ಗಳ ಎನ್​ಕೌಂಟರ್​ಗೆ ತೆರಳಿದ್ದರು. ಈ ವೇಳೆ ಅಪರಾಧಿಗಳು ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಗುಂಡಿನ ಚಕಮಕಿ ನಡುವೆ ಆಶಿಶ್​ ಎದೆಗೆ ಗುಂಡು ತಗುಲಿ ಮೃತಪಟ್ಟರು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಘಟನೆ ವೇಳೆ ದಿನೇಶ್​ ಮುನಿ ತಂಡವೂ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಮೂಲಗಳು ತಿಳಿದು ಬಂದಿದ್ದು, ಪೊಲೀಸ್​ ಇಲಾಖೆ ಇನ್ನೂ ಅವರ ಸಾವಿನ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಹಿರಿಯ ಪೊಲೀಸ್​ ಅಧಿಕಾರಿಗಳಾದ ಮೀನು ಕುಮಾರಿ ಗೊರ್ಗಿ ಮತ್ತು ಪ್ರಮೋದ್​ ಕುಮಾರ್​ ಝಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಇದೇ ಮೃತ ಅಧಿಕಾರಿ ಆಶಿಶ್​ಗೆ ಸ್ಥಳೀಯ ಗ್ಯಾಂಗ್​ಸ್ಟರ್​ನ ಎನ್​ಕೌಂಟರ್​ ವೇಳೆ ಗುಂಡು ತಗುಲಿತ್ತು. ಆಶಿಶ್​ ಉತ್ತಮ ಕಾರ್ಯವೈಖರಿಯ ಅಧಿಕಾರಿ ಎಂಬ ಹೆಸರು ಪಡೆದಿದ್ದು, ಇವರ ತಾಯಿ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಇವರ ಸೋದರರೊಬ್ಬರು ಬಿಎಸ್​ಎಫ್​ನಲ್ಲಿ ಕಾರ್ಯನಿರ್ಹಿಸುತ್ತಿದ್ದರೆ, ಮತ್ತೊಬ್ಬ ಸಿವಿಲ್​ ಇಂಜಿನಿಯರಿಂಗ್​ ಪದವೀಧರ. (ಏಜೆನ್ಸೀಸ್​)