ಭಾರತ್​ ಬಂದ್​ನಿಂದ ಎರಡು ವರ್ಷದ ಮಗು ಬಲಿ: ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​

<<ಮಗು ಸಾವಿಗೆ ಬಂದ್​ ಕಾರಣವಲ್ಲ: ಉಪ ವಿಭಾಗೀಯ ಅಧಿಕಾರಿ>>

ನವದೆಹಲಿ: ಎರಡು ವರ್ಷದ ಮಗುವಿಗೆ ಸರಿಯಾದ ಸಮಯದಲ್ಲಿ ಆಂಬುಲೆನ್ಸ್​ ವ್ಯವಸ್ಥೆ ಸಿಗದೆ ಮೃತಪಟ್ಟಿದ್ದು ಇದಕ್ಕೆ ಕಾಂಗ್ರೆಸ್​ ಆಯೋಜಿಸಿರುವ ಭಾರತ್​ ಬಂದ್​ ಕಾರಣ ಎಂದು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ರವಿಶಂಕರ್​ ಪ್ರಸಾದ್​ ಆಪಾದಿಸಿದ್ದಾರೆ.

ಇಂಧನ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಇಂದು ಭಾರತ್​ ಬಂದ್​ ಪ್ರತಿಭಟನೆ ನಡೆಸುತ್ತಿದ್ದು, ಎರಡು ವರ್ಷದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಹೋಗುತ್ತಿದ್ದ ಆಂಬುಲೆನ್ಸ್​ ಅನ್ನು ಪ್ರತಿಭಟನಾಕಾರರು ತಡೆದಿದ್ದರಿಂದ ಮಗು ಮಾರ್ಗ ಮಧ್ಯೆ ಮೃತಪಟ್ಟಿದೆ ಎಂಬ ಪ್ರಕರಣಕ್ಕೆ ರವಿಶಂಕರ್​ ಅವರು ಕಾಂಗ್ರೆಸ್​ ಅನ್ನು ಹೊಣೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಜನರು ಆಂಬುಲೆನ್ಸ್​ನ್ನು ತಡೆದು ಮಗುವಿನ ಸಾವಿಗೆ ಕಾರಣರಾಗಿದ್ದಾರೆ. ಮೃತ ಮಗು ನಮ್ಮ ದೇಶದ ಮಗಳು. ಅವಳ ಸಾವಿನ ಹೊಣೆಗಾರಿಕೆಯನ್ನು ನೀವು ತೆಗೆದುಕೊಳ್ಳುತ್ತೀರಾ? ಎಂದು ಕಾಂಗ್ರೆಸ್​ನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್​ ಬೆಂಬಲಿಗರು ರೈಲು, ಬಸ್​ಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಪೆಟ್ರೋಲ್​ ಪಂಪ್​ಗಳನ್ನು ಸುಟ್ಟು ಹಾಕಲು ಮುಂದಾಗುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದರು.

ಕೇಂದ್ರದ ಪಾತ್ರ ಇಲ್ಲ
ಇಂಧನ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ. ಇದೆಲದಲ್ಲದರ ನಡುವೆ ಜನರು ಸಹ ಭಾರತ್​ ಬಂದ್​ಗೆ ಬೆಂಬಲ ಸೂಚಿಸಿಲ್ಲ. ಇದರಿಂದ ಕಾಂಗ್ರೆಸ್​ಗೆ ಆಘಾತವಾಗಿದೆ ಎಂದ ಅವರು ಭಾರತ್​ ಬಂದ್​ ವಿಫಲವಾಗಿದೆ ಎಂದರು.

ಮಗು ಸಾವಿಗೆ ಬಂದ್​ ಕಾರಣವಲ್ಲ
ಬಂದ್​ ಅಥವಾ ಟ್ರಾಫಿಕ್​ ಜಾಂ ಮಗುವಿನ ಸಾವಿಗೆ ಕಾರಣವಲ್ಲ. ಬದಲಿಗೆ ಸಂಬಂಧಿಸಿದವರು ತಡವಾಗಿ ಮನೆಯಿಂದ ಹೊರಟಿರುವುದು ಮಗುವಿನ ಸಾವಿಗೆ ಕಾರಣ ಎಂದು ಜೆಹಾನಾಬಾದ್​ ಉಪ ವಿಭಾಗೀಯ ಅಧಿಕಾರಿ ಪಾರಿತೋಷ್​ ಕುಮಾರ್​ ತಿಳಿಸಿದ್ದಾರೆ. (ಏಜೆನ್ಸೀಸ್)