ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್: ಖೇರ್​, ಖನ್ನಾ ವಿರುದ್ಧ ಎಫ್​ಐಆರ್​ಗೆ ಕೋರ್ಟ್​ ಆದೇಶ

ಮುಜಫರ್​ಪುರ್​ (ಬಿಹಾರ): ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಅವರ ಕುರಿತು ನಿರ್ಮಿಸಲಾಗಿರುವ ‘ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಚಿತ್ರದ ಅಭಿನಯಿಸಿರುವ ಅನುಪಮ್​ ಖೇರ್​, ಅಕ್ಷಯ್​ ಖನ್ನಾ ಮತ್ತು ಚಿತ್ರದ ಭಾಗವಾಗಿರುವ 15 ಜನರ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಬಿಹಾರ ಕೋರ್ಟ್​ ಆದೇಶಿಸಿದೆ.

ಚಿತ್ರದಲ್ಲಿ ಮಾಜಿ ಪ್ರಧಾನಿ ಮತ್ತು ಇತರ ಗಣ್ಯ ವ್ಯಕ್ತಿಗಳ ಕುರಿತು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ವಕೀಲರಾದ ಸುಧೀರ್​ ಕುಮಾರ್​ ಓಜಾ ಐಪಿಸಿ ಸೆಕ್ಷನ್​ 295, 153, 153ಎ, 293, 504 ಮತ್ತು 120 ಬಿ ಅಡಿಯಲ್ಲಿ ಕೋರ್ಟ್​ಗೆ ದೂರು ಸಲ್ಲಿಸಿದ್ದರು.

ಇವರ ದೂರಿನ ವಿಚಾರಣೆ ನಡೆಸಿದ ಮುಜಫರ್​ಪುರ್​ನ ಸಬ್​ ಡಿವಿಷನಲ್​ ಕೋರ್ಟ್​ನ ನ್ಯಾಯಾಧೀಶ ಗೌರಬ್​ ಕಮಲ್​ ಚಿತ್ರದಲ್ಲಿ ಮನಮೋಹನ್​ ಸಿಂಗ್​ ಪಾತ್ರ ಮಾಡಿರುವ ಅನುಪಮ್​ ಖೇರ್​, ಪ್ರಧಾನಿಯ ಮಾಧ್ಯಮ ಸಲಹೆಗಾರ ಸಂಜಯ ಬಾರು ಅವರ ಪಾತ್ರ ಮಾಡಿರುವ ಅಕ್ಷಯ್​ ಖನ್ನಾ, ಚಿತ್ರದ ಇತರ ಪ್ರಮುಖ ಪಾತ್ರಧಾರಿಗಳು, ನಿರ್ದೇಶಕ, ನಿರ್ಮಾಪಕರ ವಿರುದ್ದ ಎಫ್​ಐಆರ್​ ದಾಖಲಿಸಲು ಆದೇಶಿಸಿದ್ದಾರೆ. (ಏಜೆನ್ಸೀಸ್​)