ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿ ಹತ್ಯೆ!

ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಬಿಹಾರದ ರೋಹ್ಟಾಸ್‌ನಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಅಲ್ಲಿನ ನಿವಾಸಿಗಳೇ ಹೊಡೆದು ಸಾಯಿಸಿರುವ ಘಟನೆ ನಡೆದಿದೆ.

40 ವರ್ಷದ ಮಹಿಳೆ ಮೇಲೆ ನಿವಾಸಿಗಳು ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಸ್ಥಳೀಯರ ಪ್ರಕಾರ, ದೆಹ್ರಿ ಪ್ರದೇಶದ ಅಂಬೇಡ್ಕರ್‌ ಚೌಕ್‌ನಲ್ಲಿ ಶುಕ್ರವಾರ ರಾಮ್‌ಮೋಹನ್‌ ಎಂಬ ಯುವಕ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಕೋಲಿನಿಂದ ಮಹಿಳೆಯನ್ನು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೆ ಎರಡು ದಿನಗಳ ಬಳಿಕ ಮೃತಪಟ್ಟಿದ್ದಾಳೆ.

ಇನ್ನು ಘಟನೆ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಕಣ್ಮರೆಯಾಗಿದ್ದಾನೆ.

ಮಕ್ಕಳ ನಡುವಿನ ಸಣ್ಣ ವಿಚಾರಕ್ಕೆ ಶುರುವಾದ ಜಗಳದಿಂದಾಗಿ ಮಹಿಳೆ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆಗೆ ಕಾರಣವಾಗಿದ್ದಾರೆ. (ಏಜೆನ್ಸೀಸ್)