ಉಡುಪಿ ಜಿಲ್ಲೆಯ 21 ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್
28.26 ಕೋಟಿ ಪರಿಹಾರ ಘೋಷಣೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರಿನ ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲೆಯಲ್ಲಿರುವ 21 ನ್ಯಾಯಾಲಯಗಳಲ್ಲಿ ಜುಲೈ 13ರಂದು ಬೃಹತ್ ಲೋಕ ಅದಾಲತ್ ನಡೆಸಲಾಯಿತು.
ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ ವಿವಿಧ ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳ ವಾದ ಆಲಿಸಿ, ಒಂದೇ ದಿನ ಒಟ್ಟು 88,925 ಪ್ರಕರಣ ಇತ್ಯರ್ಥಪಡಿಸಲಾಯಿತು.
ಪ್ರಕರಣಗಳ ಮಾಹಿತಿ
ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ -37, ಚೆಕ್ ಅಮಾನ್ಯ ಪ್ರಕರಣ-304, ಬ್ಯಾಂಕ್/ ಹಣ ವಸೂಲಾತಿ ಪ್ರಕರಣ- 22, ಎಂವಿಸಿ ಪ್ರಕರಣ -173, ವೈವಾಹಿಕ ಪ್ರಕರಣ- 9, ಸಿವಿಲ್ ಪ್ರಕರಣ- 197, ಇತರ ಕ್ರಿಮಿನಲ್ ಪ್ರಕರಣ -3,270 ಹಾಗೂ ವ್ಯಾಜ್ಯ ಪೂರ್ವ ದಾವೆ- 84,913 ಹಾಗೂ ರಾಜಿ ಮುಖಾಂತರ ಇತ್ಯರ್ಥಪಡಿಸಿ 28,26,24,091 ರೂ. ಪರಿಹಾರದ ಮೊತ್ತ ಘೋಷಿಸಲಾಯಿತು.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಗಳ ಸಹಕಾರದೊಂದಿಗೆ ಲೋಕ್ ಅದಾಲತ್ ನಡೆಸಲಾಗಿತ್ತು.
ಉಡುಪಿಯಲ್ಲಿ ಜಿಲ್ಲಾ ನ್ಯಾಯಾಧೀಶರ ನೇತೃತ್ವ
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎ.ಸಮೀವುಲ್ಲಾ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ಪುರುಷೋತ್ತಮ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಎಸಿಜೆಎಂ ಪಿ.ಆರ್. ಯೋಗೀಶ್, ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಸಂತೋಷ್ ಶ್ರೀವಾತ್ಸವ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನಿರ್ಮಲಾ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿನಯಾ ವಾಂಖಂಡೆ, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಜೀತು ಆರ್.ಜೆ., 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಶ್ವೇತಾಕ್ಷಿ ಉಪಸ್ಥಿತರಿದ್ದರು.