ಬಿಗ್ ಬಾಸ್ ಆರನೇ ಸೀಸನ್ ಇಂದು ಆರಂಭ

ಬೆಂಗಳೂರು: ಈವರೆಗೆ ಐದು ಸರಣಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿರುವ ‘ಬಿಗ್​ಬಾಸ್’ ರಿಯಾಲಿಟಿ ಶೋ 6ನೇ ಸೀಸನ್ ಇಂದು (ಅ.21) ಆರಂಭವಾಗಲಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಈ ವರ್ಣಮಯ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಳೆದ ಸೀಸನ್​ನಲ್ಲಿ ಜನಸಾಮಾನ್ಯರಿಗೆ ಅವಕಾಶ ನೀಡುವ ಪರಿಪಾಠ ಶುರುವಾಗಿತ್ತು. ಈ ಬಾರಿಯೂ ಅದು ಮುಂದುವರಿಯಲಿದ್ದು, ಸೆಲೆಬ್ರಿಟಿಗಳ ಜತೆ ಜನಸಾಮಾನ್ಯರು ಮತ್ತು ಸೆಮಿ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಒಟ್ಟು 18 ಸ್ಪರ್ಧಿಗಳ ಹೆಸರು ಇಂದು ಬಹಿರಂಗ ಆಗಲಿದ್ದು, ಈ ಬಾರಿಯೂ ‘ಕಿಚ್ಚ’ ಸುದೀಪ್ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಅನೇಕರ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆ ಎಲ್ಲ ಕುತೂಹಲಗಳಿಗೆ ಇಂದು ತೆರೆ ಬೀಳಲಿದೆ.

‘ನಾವು ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವಾಗ ನಮ್ಮ ವೀಕ್ಷಕರ ಬೇಕು ಬೇಡ ಮತ್ತು ಅವರ ಆಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡಿರುತ್ತೇವೆ. ಬಿಗ್​ಬಾಸ್ ನಡೆಯುವ ಪ್ರತಿ ದಿನವೂ ಜನರನ್ನು ಟೆಲಿವಿಷನ್ ಸೆಟ್​ಗೆ ಅಂಟಿ ಕೂರುವಂತೆ ಮಾಡಲಿದೆ’ ಎನ್ನುತ್ತಾರೆ ವಯಾಕಾಮ್ 18ರ ರೀಜನಲ್ ಚಾನೆಲ್​ಗಳ ಹೆಡ್ ರವೀಶ್ ಕುಮಾರ್. ‘ನಾವು ಈ ಶೋಗೆ ಸ್ಪರ್ಧಿಗಳನ್ನು ಹುಡುಕುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಕ್ಯಾರೆಕ್ಟರ್​ಗಳನ್ನು ಹುಡುಕುತ್ತಿರುತ್ತೇವೆ. ಆ ಕ್ಯಾರೆಕ್ಟರ್​ಗಳು ಸೆಲೆಬ್ರಿಟಿಗಳಲ್ಲಿಯೂ ಇರಬಹುದು, ಜನ ಸಾಮಾನ್ಯರಲ್ಲೂ ಇರಬಹುದು. ಈ ಬಾರಿಯ ಹದಿನೆಂಟೂ ಜನರು ಬಹಳ ಇಂಟರೆಸ್ಟಿಂಗ್ ಕ್ಯಾರೆಕ್ಟರ್​ಗಳಾಗಿರುತ್ತಾರೆ’ ಎಂಬುದು ವಯಾಕಾಮ್ 18 ಸಂಸ್ಥೆಯ ಕನ್ನಡ ಮಾರುಕಟ್ಟೆಯ ಬಿಜಿನೆಸ್ ಹೆಡ್ ಹಾಗೂ ಬಿಗ್​ಬಾಸ್​ನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಮಾತು. ಈವರೆಗೂ ಬಳಸಲಾಗುತ್ತಿದ್ದ ‘ಬಿಗ್​ಬಾಸ್’ ಮನೆ ಕೆಲ ತಿಂಗಳ ಹಿಂದೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಭಸ್ಮ ಆಗಿತ್ತು. ಈಗ ಸಂಪೂರ್ಣ ಹೊಸದಾಗಿ ಮನೆ ನಿರ್ವಿುಸಲಾಗಿದೆ. ಮೊದಲಿಗಿಂತಲೂ ಈ ಮನೆ ಇನ್ನಷ್ಟು ಆಕರ್ಷಕವಾಗಿದೆ ಎಂಬುದು ವಾಹಿನಿ ಅಭಿಪ್ರಾಯ. ಸೋಮವಾರದಿಂದ ಪ್ರತಿ ರಾತ್ರಿ 8 ಗಂಟೆಗೆ ಈ ಜನಪ್ರಿಯ ಶೋ ಪ್ರಸಾರ ಆಗಲಿದೆ.