ಬೆಂಗಳೂರು: ಸಾಲಬಾಧೆ ಮತ್ತಿತರ ಸಮಸ್ಯೆಗಳಿಂದ ದುರಂತ ಸಾವು ಕಂಡಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಡೆ ಅವರ ಅಗಲಿಕೆ ಬಳಿಕ ಡೋಲಾಯಮಾನ ಸ್ಥಿತಿಗೆ ತಲುಪಿದ್ದ ಸಂಸ್ಥೆ ಇದೀಗ ಒಂದು ಹಂತಕ್ಕೆ ಚೇತರಿಕೆ ಕಂಡಿದೆ. ಹಿನ್ನಡೆ ಅನುಭವಿಸಿದ್ದ ಕಾಫಿ ಡೇ ಈ ಮೂಲಕ ಒಂದಷ್ಟು ಮುನ್ನಡೆ ಕಂಡಿದೆ.
ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿ.ಜಿ.ಸಿದ್ದಾರ್ಥ ಹೆಗ್ಡೆ ಅಗಲಿಕೆ ಬಳಿಕ ಕಂಪನಿಯ ನೊಗ ಹೊತ್ತ ಅವರ ಪತ್ನಿ ಇದೀಗ ಕಂಪನಿ ಮೇಲಿದ್ದ ದೊಡ್ಡ ಪ್ರಮಾಣದ ಸಾಲದ ಹೊರೆಯನ್ನು ತಗ್ಗಿಸಿದ್ದಾರೆ. ಇದರಿಂದಾಗಿ ಅವರ ಬಗ್ಗೆ ಹಲವರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
ಸಿದ್ಧಾರ್ಥ 2019ರ ಆಗಸ್ಟ್ನಲ್ಲಿ ಮಂಗಳೂರು ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ದೊಡ್ಡ ಪ್ರಮಾಣದ ಸಾಲ, ಸಾಲಗಾರರ ಕಿರುಕುಳ, ಉದ್ಯಮದಲ್ಲಿನ ಹಿನ್ನಡೆ ಇತ್ಯಾದಿ ಸಮಸ್ಯೆಗಳು ಕಾರಣ ಎನ್ನಲಾಗಿತ್ತು. ನಂತರ ಅಂದರೆ 2020ರ ಡಿ.7ರಂದು ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ನ ಸಿಇಒ ಹುದ್ದೆ ವಹಿಸಿಕೊಂಡ ಮಾಳವಿಕಾ, ಸಾಲದ ಹೊರೆ ತಗ್ಗಿಸಿ, ಕಂಪನಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಮಗ್ನರಾದರು.
2020ರ ಹಣಕಾಸು ವರ್ಷದಲ್ಲಿ ಕಂಪನಿಯು 2909 ಕೋಟಿ ರೂ. ಸಾಲ ಹೊಂದಿತ್ತು. ಇನ್ನು ಕಂಪನಿಯ 2021 ಮಾರ್ಚ್ 31ರ ವಾರ್ಷಿಕ ವರದಿ ಪ್ರಕಾರ ಕಂಪನಿ ಸಾಲದ ಮೊತ್ತ 1,779 ಕೋಟಿ ರೂಪಾಯಿಗೆ ಇಳಿದಿದೆ. ಇದರಲ್ಲಿ ದೀರ್ಘಾವಧಿ ಸಾಲ 1,263 ಕೋಟಿ ರೂ. ಮತ್ತು ಅಲ್ಪಾವಧಿ ಸಾಲ 516 ಕೋಟಿ ರೂಪಾಯಿ.
ಅಂದಹಾಗೆ ಕಂಪನಿಯ ಆಸ್ತಿಗಳಲ್ಲಿ ಹಲವಷ್ಟನ್ನು ಈಗಾಗಲೇ ಮಾರಲಾಗಿದ್ದು, ಇನ್ನು ಕೆಲವನ್ನು ಮಾರಾಟಕ್ಕೆ ಇಡಲಾಗಿದೆ. ಸಾಲದ ಹೊರೆ ತಗ್ಗಿದ್ದರಿಂದ ಕಂಪನಿಗೆ ಬೀಗ ಬೀಳುವುದು ತಪ್ಪಿದ್ದು, ನೌಕರರು ಉದ್ಯೋಗ ಕಳೆದುಕೊಳ್ಳುವುದು ಕೂಡ ತಪ್ಪಿದೆ. ಮಾತ್ರವಲ್ಲ ಕೆಫೆ ಕಾಫಿ ಡೇ ಷೇರುಗಳು 23 ರೂಪಾಯಿಯಿಂದ 51 ರೂಪಾಯಿಗೆ ಏರಿವೆ.
ಇಲ್ಲಿ ಪೊಲೀಸರೇ ಕಳ್ಳರು!: ಕಳ್ಳಸಾಗಣೆದಾರರಿಂದಲೇ ರಕ್ತಚಂದನ ದೋಚುತ್ತಿದ್ದ ಪೊಲೀಸರಿಬ್ಬರ ಬಂಧನ