ರಸ್ತೆಗುರುಳಿದ ಬೃಹತ್ ಬಂಡೆಗಳು

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ತಳಕೆಬೈಲ್-ಕಳಚೆ ರಸ್ತೆ ಪಕ್ಕದ ಗುಡ್ಡ ಕುಸಿದು ಎರಡು ಬೃಹತ್ ಗಾತ್ರದ ಬಂಡೆಗಳು ರಸ್ತೆಗುರುಳಿವೆ. ಪರಿಣಾಮ 4-5 ತಾಸು ಸಂಚಾರಕ್ಕೆ ತೊಂದರೆ ಉಂಟಾಯಿತು.

ತಾಲೂಕಿನಲ್ಲಿ ಕಳೆದ 4-5 ದಿನದಿಂದ ಸತತ ಮಳೆ ಸುರಿಯುತ್ತಿದ್ದು, ಬಂಡೆ ಉರುಳುವ ವೇಳೆ ವಾಹನ ಸಂಚಾರವಿಲ್ಲದ್ದರಿಂದ ಭಾರಿ ಅನಾಹುತ ತಪ್ಪಿದೆ. ಕಳಚೆ ರಸ್ತೆ ಪಕ್ಕ ಇರುವ ಗುಡ್ಡ ಪ್ರತಿ ಮಳೆಗಾಲದಲ್ಲಿ ಅಲ್ಪ ಪ್ರಮಾಣದ ಕುಸಿತ ಕಾಣುವುದು ಹೊಸದೇನಲ್ಲ. ಆದರೆ, ಕಲ್ಲು ಬಂಡೆಗಳು ಉರುಳಿರುವುದು ಮಾತ್ರ ಅಪಾಯಕಾರಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಶಿವಾನಂದ ಉಳ್ಳಾಗಡ್ಡಿ ಅವಘಡ ಪರಿಶೀಲಿಸಿದರು. ಬಂಡೆ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು. ಮಧ್ಯಾಹ್ನದ ನಂತರ ಬಂಡೆಗಳನ್ನು ತೆರವುಗೊಳಿಸಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಯಿತು.

ವಿದ್ಯುತ್ ವ್ಯತ್ಯಯ

ಗ್ರಾಮೀಣ ಭಾಗದ ಜನತೆ ವಿದ್ಯುತ್ ವ್ಯತ್ಯಯದಿಂದ ಕತ್ತಲೆಯಲ್ಲಿಯೇ ಕಳೆಯುವಂತಾಗಿದ್ದು, ಹೆಸ್ಕಾಂ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕಳೆದ ವಾರದಿಂದ ವಿದ್ಯುತ್ ವ್ಯತ್ಯಯ ನಡೆಯುತ್ತಲ್ಲಿದ್ದು, ನಂದೊಳ್ಳಿ, ಮಾಗೋಡ ಭಾಗದ ಜನತೆ ನಂದೊಳ್ಳಿ ಗ್ರಾಪಂ ನೇತೃತ್ವದಲ್ಲಿ ಜೂ. 13ರಂದು ಬೆಳಗ್ಗೆ 10.30ಕ್ಕೆ ಹೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. \

ತಗ್ಗಿದ ಮಳೆ

ತಾಲೂಕಿನಾದ್ಯಂತ 3-4 ದಿನದಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮಂಗಳವಾರ ತಗ್ಗಿದೆ. ಸೋಮವಾರ ರಾತ್ರಿ ಗಾಳಿ-ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಇಡಗುಂದಿ ಗ್ರಾಪಂ ವ್ಯಾಪ್ತಿಯ ಅರಬೈಲಿನಲ್ಲಿ ಶಾಂತಿ ಎಂಬವರ ಮನೆ ಮೇಲೆ ಹಾಗೂ ಪಪಂ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದ ನಿತ್ಯಾನಂದ ಮೇಸ್ತ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ಬಿಡುವ ನೀಡಿದ ಮಳೆರಾಯ

ಶಿರಸಿ: ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಎಡೆಬಿಡದೇ ಸುರಿದ ಮಳೆ ಮಂಗಳವಾರ ತುಸು ಬಿಡುವು ನೀಡಿದೆ. ತಾಲೂಕಿನಾದ್ಯಾಂತ ಇದುವರೆಗೂ ಸುರಿದ ಮಳೆಯಿಂದಾಗಿ 22 ಮನೆಗಳು ಹಾನಿಗೊಳಗಾಗಿವೆ. 7 ಕಡೆಗಳಲ್ಲಿ ಅಡಕೆ ಮತ್ತು ಬಾಳೆ ತೋಟಗಳು ಹಾಳಾಗಿವೆ. ಪ್ರಾಥಮಿಕ ಅಂದಾಜಿನಂತೆ ಇದುವರೆಗೆ 35.61 ಲಕ್ಷ ರೂ.ನಷ್ಟು ಹಾನಿ ಸಂಭವಿಸಿದೆ. 12 ಮನೆಗಳ ಸಂತ್ರಸ್ತರಿಗೆ ಕಂದಾಯ ಇಲಾಖೆಯಿಂದ ಒಟ್ಟು 40,400 ರೂ. ಪರಿಹಾರ ನೀಡಲಾಗಿದೆ. ಬೆಳೆ ಹಾನಿಗೆ ಸಂಬಂಧಿಸಿದಂತೆ 11 ಘಟನೆಗಳಲ್ಲಿ 7 ಸಂತ್ರಸ್ತರಿಗೆ ಒಟ್ಟು 18.53 ಲಕ್ಷ ರೂ. ಪರಿಹಾರ ನೀಡಬೇಕಿದ್ದು, ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಳೆ ಗಾಳಿಯ ಅಬ್ಬರಕ್ಕೆ ತಾರಗೋಡ ಹಾಗೂ ವಾನಳ್ಳಿ ಸಮೀಪದ ಬ್ರಿಜ್ ಹಾನಿಯಾಗಿ 10 ಲಕ್ಷ ರೂ.ನಷ್ಟು ಹಾನಿ ಸಂಭವಿಸಿದರೆ, ರಸ್ತೆ ಗಟಾರ ಹಾನಿಯಿಂದ 2.7 ಲಕ್ಷ ರೂ. ನಷ್ಟವಾಗಿದೆ ಎಂದು ತಹಸೀಲ್ದಾರ್ ಎಂ. ಆರ್. ಕುಲಕರ್ಣಿ ತಿಳಿಸಿದ್ದಾರೆ. ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ದೇವಿಕೆರೆಯಲ್ಲಿ ಏರಿಯ ಮಣ್ಣು ಕುಸಿದಿದೆ. ಇದರಿಂದಾಗಿ ನೂತನವಾಗಿ ನಿರ್ವಿುಸಿದ ಪಿಚಿಂಗ್ ಕುಸಿದು ಕಲ್ಲುಗಳು ಕೆರೆಯ ಪಾಲಾಗಿವೆ. ತಾಲೂಕಿನ ಬನವಾಸಿ ಭಾಗದಲ್ಲಿ ಸಂಪೂರ್ಣ ಬರಿದಾಗಿ ಹರಿವು ನಿಲ್ಲಿಸಿದ್ದ ವರದಾ ನದಿಯಲ್ಲಿ ಈಗ ನೀರಿನ ಪ್ರಮಾಣ ಏರತೊಡಗಿದೆ. ಈ ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ.

ಅಬ್ಬರದ ಅಲೆಯಿಂದ ಕಡಲ್ಕೊರೆತ

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮಳೆ ಕಡಿಮೆಯಾಗಿದ್ದರೂ ಸಮುದ್ರದ ದಿಕ್ಕಿನಿಂದ ಭಾರಿ ಗಾಳಿ ಬೀಸುತ್ತಿದ್ದು, ಅರಬ್ಬಿ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಪರಿಣಾಮ ಸಮುದ್ರ ಕೊರೆತ ಹೆಚ್ಚಿದೆ. ಕಾರವಾರದ ನಾಖುದಾ ಮೊಹಲ್ಲಾ, ದೇವಬಾಗ, ಮಾಜಾಳಿ, ಅಂಕೋಲಾದ ಬೇಲೆಕೇರಿ, ಹಾರವಾಡ, ಮಂಜಗುಣಿ ಭಾಗದಲ್ಲಿ ಸಮುದ್ರ ಕೊರೆತ ಹೆಚ್ಚಿದೆ. ಅಬ್ಬರದ ಅಲೆಗಳಿಗೆ ಮಣ್ಣು ಕೊಚ್ಚಿ ಹೋಗುತ್ತಿದ್ದು, ವಿದ್ಯುತ್ ಕಂಬ, ರಸ್ತೆ, ಮನೆಗಳಿಗೆ ಹಾನಿಯಾಗುತ್ತಿದೆ. ಇದರಿಂದ ಕಡಲ ತೀರದ ನಿವಾಸಿಗಳು ಆತಂಕದಲ್ಲಿದ್ದಾರೆ. ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಭಟ್ಕಳದಲ್ಲಿ ಕಡಿಮೆ

ಭಟ್ಕಳ ಮಾವಿನಕುರ್ವಾ ಬಂದರು ಮತ್ತು ಕರಿಕಲ್ ಭಾಗದಲ್ಲಿ ತಡೆಗೋಡೆ ಕಾಮಗಾರಿ ನಡೆದಿದ್ದರಿಂದ ಸಮುದ್ರ ಕೊರೆತ ಈ ಬಾರಿ ಕಡಿಮೆಯಾಗಿದೆ.

Leave a Reply

Your email address will not be published. Required fields are marked *