ಅಮೆರಿಕಕ್ಕೆ ಬಿಗ್ ಬ್ಯೂಟಿಫುಲ್​! ಬೇರೆ ದೇಶಗಳಿಗೆ?

blank

ಅಮೆರಿಕದ ಸಂಸತ್ತು ‘ಒನ್ ಬಿಗ್ ಬ್ಯೂಟಿಫುಲ್ ಕಾಯ್ದೆ’ಗೆ ಅನುಮೋದನೆ ನೀಡಿದೆ. ಅಲ್ಲಿನ ಕಾರ್ವಿುಕರು, ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಇದರಿಂದ ಸಾಕಷ್ಟು ಸಹಾಯವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಬಣ್ಣಿಸಿದೆ. ತೆರಿಗೆ ಸುಧಾರಣೆಗಳು, ಗಡಿ ಭದ್ರತೆಯ ಬಲವರ್ಧನೆ, ವಲಸೆ ನೀತಿ ಸುಧಾರಣೆ, ಇಂಧನ ಉತ್ಪಾದನೆಯ ಹೊಸ ಉಪಕ್ರಮಗಳು ಮತ್ತು ನಿಯಂತ್ರಣಗಳನ್ನು ಈ ಸಮಗ್ರ ಕಾಯ್ದೆ ಒಳಗೊಂಡಿದೆ. ಅಮೆರಿಕದ ಮೇಲೆ, ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಮತ್ತು ವಿಶೇಷವಾಗಿ ಭಾರತದ ಮೇಲೆ ಈ ಹೊಸ ಕಾಯ್ದೆಯಿಂದ ಆಗುವ ಪರಿಣಾಮಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಕಾಯ್ದೆಯ ಪ್ರಮುಖ ಅಂಶಗಳು

ತೆರಿಗೆ ಸುಧಾರಣೆ: ಕೈಗಾರಿಕೋದ್ಯಮಗಳಲ್ಲಿ ಮತ್ತು ಸೇವಾ ವಲಯದಲ್ಲಿ ಕೆಲಸ ಮಾಡುವವರು ಓವರ್​ಟೈಮ್ ಮಾಡಿ ಗಳಿಸುತ್ತಿದ್ದ ಆದಾಯದ ಮೇಲೆ ಮತ್ತು ಟಿಪ್ಸ್ ರೂಪದಲ್ಲಿ ಪಡೆಯುತ್ತಿದ್ದ ಮೊತ್ತದ ಮೇಲೆ ಈವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು ಈ ಹೊಸ ಕಾಯ್ದೆ ರದ್ದುಪಡಿಸುತ್ತದೆ. ಇದರಿಂದ ಆ ಕಾರ್ವಿುಕ ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸಿದಂತಾಗುತ್ತದೆ.

ರೆಮಿಟನ್ಸ್ ತೆರಿಗೆ ಕಡಿತ: ಅಮೆರಿಕದಲ್ಲಿ ಕೆಲಸ ಮಾಡುವ ವಿದೇಶೀಯರು ತಾಯ್ನಾಡಿನಲ್ಲಿರುವ ತಮ್ಮ ಕುಟುಂಬಗಳಿಗೆ ಕಳಿಸುವ ಹಣಕ್ಕೆ (ರೆಮಿಟನ್ಸ್) ಮೊದಲು ಶೇ. 5ರಷ್ಟು ತೆರಿಗೆ ಹಾಕಲು ಉದ್ದೇಶಿಸಲಾಗಿತ್ತು. ನಂತರ ಅದನ್ನು ಶೇ. 3.5ಕ್ಕೆ ಇಳಿಸುವ ಪ್ರಸ್ತಾವನೆ ಬಂತು. ಅದಕ್ಕೂ ವಿರೋಧ ಎದುರಾದ ಕಾರಣ ಅದನ್ನೀಗ ಈ ಕಾಯ್ದೆಯ ಮೂಲಕ ಶೇ. 1ಕ್ಕೆ ಇಳಿಸಲಾಗಿದೆ. ನಗದು, ಮನಿ ಆರ್ಡರ್, ಕ್ಯಾಶಿಯರ್ ಚೆಕ್ ಅಥವಾ ಇದೇ ರೀತಿಯ ಭೌತಿಕ ವಿಧಾನಗಳ ಮೂಲಕ ಮಾಡುವ ಹಣ ವರ್ಗಾವಣೆಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಬ್ಯಾಂಕ್ ಖಾತೆ ಮೂಲಕ ಮಾಡಿದ ಹಣ ವರ್ಗಾವಣೆಗಳು ಅಥವಾ ಅಮೆರಿಕದಲ್ಲಿ ಪಡೆದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್​ಗಳಿಂದ ಮಾಡಿದ ಪಾವತಿಗಳಿಗೆ ಈ ತೆರಿಗೆಯಿಂದ ವಿನಾಯಿತಿ ಇದೆ.

ವಲಸೆ ಮತ್ತು ಗಡಿ ಭದ್ರತೆ: ಇತರ ದೇಶಗಳ ನಾಗರಿಕರು ಅಕ್ರಮವಾಗಿ ವಲಸೆ ಬರುತ್ತಿರುವುದು ಅಮೆರಿಕಕ್ಕೆ ಹಲವು ದಶಕ ಗಳಿಂದ ತೀವ್ರ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ, ಗಡಿ ಭದ್ರತೆಗೆ ಹೆಚ್ಚಿನ ಅನುದಾನ ಒದಗಿಸಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಅಕ್ರಮ ವಲಸಿಗರನ್ನು ಬಂಧಿಸಿ ಇಡುವುದಕ್ಕೆ ಬೇಕಾದ ಡಿಟೆನ್ಷನ್ ಸೌಲಭ್ಯಗಳಿಗೆ, ಗಡಿಪಾರು ಪ್ರಕ್ರಿಯೆಯ ಬಲವರ್ಧನೆಗೆ ಈ ಹೆಚ್ಚುವರಿ ಹಣ ವಿನಿಯೋಗವಾಗಲಿದೆ.

ವೀಸಾ ನಿರ್ಬಂಧಗಳು: ‘ಬುದ್ಧಿವಂತರಿಗೆ ಮಾತ್ರ ವೀಸಾ’ ಎಂಬ ಅಮೆರಿಕದ ಪ್ರಸ್ತಾವಿತ ನೀತಿ ಮುಂದಿನ ವರ್ಷಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರುವುದರ ಮುನ್ಸೂಚನೆಯನ್ನೂ ಈ ಕಾಯ್ದೆ ನೀಡುತ್ತದೆ. ಎಚ್-1ಬಿ ವೀಸಾ ಪಡೆಯುವುದಕ್ಕೆ ಇರುವ ಅರ್ಹತೆಗಳನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆ ಇದೆ.

ಇಂಧನ ಉತ್ಪಾದನೆ, ನಿಯಂತ್ರಣ: ಇಂಧನ ಉತ್ಪಾದನಾ ವಲಯದಲ್ಲಿ ಈಗ ಸಾಕಷ್ಟು ಅಧಿಕಾರಶಾಹಿ ನಿಯಂತ್ರಣ ಪ್ರಕ್ರಿಯೆಗಳು ಜಾರಿಯಲ್ಲಿವೆ. ಅವುಗಳನ್ನು ಕಡಿಮೆ ಮಾಡಿ, ಅಮೆರಿಕವನ್ನು ಇಂಧನ ವಲಯದಲ್ಲಿ ‘ಸ್ವತಂತ್ರ ರಾಷ್ಟ್ರ’ವನ್ನಾಗಿಸುವ ಉದ್ದೇಶವೂ ಈ ಕಾಯ್ದೆಯಲ್ಲಿ ಅಡಕವಾಗಿದೆ. ತೈಲ, ಅನಿಲ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಿಸಿ ಆ ಮೂಲಕ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶ ಟ್ರಂಪ್ ಆಡಳಿತಕ್ಕಿದೆ.

ಅಮೆರಿಕಕ್ಕೇನು ಪ್ರಯೋಜನ?

ಟಿಪ್ಸ್ ಮತ್ತು ಓವರ್​ಟೈಮ್ ಆದಾಯದ ಮೇಲಿನ ತೆರಿಗೆ ರದ್ದತಿಯಿಂದ ಕಡಿಮೆ ಮತ್ತು ಮಧ್ಯಮ ಆದಾಯದ ಕಾರ್ವಿುಕರ, ಅದರಲ್ಲೂ ವಿಶೇಷವಾಗಿ ಆತಿಥ್ಯ ಮತ್ತು ಉತ್ಪಾದನಾ ಕ್ಷೇತ್ರಗಳ ಲಕ್ಷಾಂತರ ನೌಕರರ ಆರ್ಥಿಕ ಬಲವನ್ನು ಹೆಚ್ಚಿಸಿದಂತಾಗುತ್ತದೆ. ಖರ್ಚು ಮಾಡುವ ಅವರ ಶಕ್ತಿ ಹೆಚ್ಚಾದರೆ, ಅದರಿಂದ ದೇಶದ ಆರ್ಥಿಕ ಬೆಳವಣಿಗೆಯೂ ವೃದ್ಧಿಸುತ್ತದೆ ಎಂಬುದು ಟ್ರಂಪ್ ಲೆಕ್ಕಾಚಾರ. ಗಡಿ ಭದ್ರತೆಗೆ ಹೆಚ್ಚಿನ ಅನುದಾನ ಒದಗಿಸುವುದರಿಂದ ಕಾನೂನು-ಸುವ್ಯವಸ್ಥೆ ಕಾಪಾಡುವ ಇಲಾಖೆಯಲ್ಲಿ ಮತ್ತು ಸಂಬಂಧಿಸಿದ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ಇಂಧನ ಉತ್ಪಾದನೆಗೆ ಒತ್ತು ನೀಡುವುದರಿಂದ ವಿದೇಶೀ ತೈಲ ಮತ್ತು ಅನಿಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆಯಾಗುತ್ತದೆ. ದೇಶೀಯ ಇಂಧನ ವೆಚ್ಚವೂ ತಗ್ಗುತ್ತದೆ. ಗಡಿ ಭದ್ರತೆ ಹೆಚ್ಚಿಸುವುದರಿಂದ ಅಕ್ರಮ ವಲಸೆ ಕಡಿಮೆ ಆಗುವುದಲ್ಲದೆ, ದೇಶದೊಳಕ್ಕೆ ಬರುತ್ತಿದ್ದ ಮಾದಕದ್ರವ್ಯ ಪ್ರಮಾಣ ಇಳಿಮುಖವಾಗುತ್ತದೆ.

ಕಾರ್ವಿುಕರ ಕೊರತೆ

ಅಮೆರಿಕದ ತಂತ್ರಜ್ಞಾನ ಉದ್ಯಮ ಈಗ ಪ್ರತಿಭಾವಂತ ವಿದೇಶಿ ಯುವಜನತೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಅವಲಂಬಿತವಾಗಿದೆ. ವೀಸಾ ನೀತಿ ಕಠಿಣಗೊಳಿಸಿದರೆ ಟೆಕ್ ಕಂಪನಿಗಳಿಗೆ ಅಗತ್ಯ ಸಿಬ್ಬಂದಿ ಸಿಗದೇ ಹೋಗಬಹುದು.

ರಾಜಕೀಯ ಪರಿಣಾಮ

ಈ ಮಸೂದೆಯ ಅಂಗೀಕಾರ ರಿಪಬ್ಲಿಕನ್ ನೇತೃತ್ವದ ಆಡಳಿತಕ್ಕೆ ಗೆಲುವು ತಂದುಕೊಟ್ಟಿದೆಯಾದರೂ ಡೆಮಾಕ್ರಾಟ್​ಗಳಿಂದ ತೀವ್ರ ವಿರೋಧ ಎದುರಾಗಿದ್ದನ್ನು ನಿರ್ಲಕ್ಷಿಸುವಂತಿಲ್ಲ. ಸ್ವತಃ ಟ್ರಂಪ್ ಪಕ್ಷದಲ್ಲಿರುವ ಕೆಲವರೂ ಇದನ್ನು ವಿರೋಧಿಸಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಗಿಂತ ಮೊದಲು ಅಮೆರಿಕದಲ್ಲಿ ರಾಜಕೀಯ ಧ್ರುವೀಕರಣಕ್ಕೂ ಈ ಕಾಯ್ದೆ ಕಾರಣವಾಗಬಹುದು.

ಇತರ ದೇಶಗಳ ಮೇಲೇನು ಎಫೆಕ್ಟ್?

ರೆಮಿಟನ್ಸ್ ತೆರಿಗೆ: ಇದನ್ನು ಶೇ. 1ಕ್ಕೆ ಇಳಿಸಿರುವುದರಿಂದ ಈ ಹಣದ ಮೇಲೆ ತೀವ್ರವಾಗಿ ಅವಲಂಬಿತವಾದ ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಂತಹ ದೇಶಗಳ ಆರ್ಥಿಕ ಒತ್ತಡ ಕಡಿಮೆಯಾಗಲಿದೆ. ಆದರೆ ಇಷ್ಟು ಮಾತ್ರದ ತೆರಿಗೆಯೂ ಕಡಿಮೆ ಆದಾಯದ ವಲಸಿಗ ಕಾರ್ವಿುಕರಿಗೆ ಹಾಗೂ ಇನ್ನೂ ನಗದು ಆಧಾರಿತ ವರ್ಗಾವಣೆಗಳ ಮೇಲೆ ಅವಲಂಬಿತ ಆಗಿರುವವರಿಗೆ ಹೊರೆಯಾಗುತ್ತದೆ. ಮೆಕ್ಸಿಕೋ, ಫಿಲಿಪೈನ್ಸ್ ಮತ್ತು ಭಾರತದಂತಹ ದೇಶಗಳಿಗೆ ಅಮೆರಿಕದಿಂದ ಬರುವ ರೆಮಿಟನ್ಸ್ ಹಣ ದೊಡ್ಡ ಮಟ್ಟದಲ್ಲಿದೆ. ಆರಂಭದಲ್ಲಿ ಪ್ರಸ್ತಾಪಿಸಿದ್ದ ಶೇ. 5ಕ್ಕೆ ಹೋಲಿಸಿದರೆ ಇದು ಕಡಿಮೆ ಎಂಬುದಷ್ಟೇ ಸಮಾಧಾನ.

ವೀಸಾ ಮತ್ತು ವಲಸೆ ನೀತಿ: ಭಾರತ, ಚೀನಾ ಮತ್ತು ಮೆಕ್ಸಿಕೋದಂತಹ ದೇಶಗಳಿಂದ ಕೌಶಲ್ಯಪೂರ್ಣ ಉದ್ಯೋಗಿಗಳು ಅಮೆರಿಕಕ್ಕೆ ಭಾರಿ ಸಂಖ್ಯೆಯಲ್ಲಿ ಹೋಗುತ್ತಾರೆ. ಈ ಕಾಯ್ದೆಯಲ್ಲಿ ಪ್ರಸ್ತಾಪಿಸಿರುವ ಕಠಿಣ ವೀಸಾ ನೀತಿಗಳಿಂದಾಗಿ ಅವರ ಸಂಖ್ಯೆ ಕಡಿಮೆ ಆಗಬಹುದು. ಇದರಿಂದ ಆ ರಾಷ್ಟ್ರಗಳ ಆರ್ಥಿಕತೆ ಮೇಲೆ ಸ್ವಲ್ಪಮಟ್ಟಿನ ಪರಿಣಾಮ ಬೀರಬಹುದು. ಗಡಿ ಭದ್ರತೆ ಮತ್ತು ಕಠಿಣ ಗಡಿಪಾರು ಕ್ರಮಗಳಿಂದ ವಿಶೇಷವಾಗಿ ಲ್ಯಾಟಿನ್ ಅಮೆರಿಕದ ದೇಶಗಳ ನಾಗರಿಕರ ಮೇಲೆ ಪರಿಣಾಮವಾಗಲಿದೆ. ಜೊತೆಗೆ, ರಾಜತಾಂತ್ರಿಕ ಸಂಬಂಧಗಳ ಮೇಲೂ ಇದು ಒತ್ತಡವನ್ನು ಸೃಷ್ಟಿಸಲಿದೆ.

ಇಂಧನ ಮಾರುಕಟ್ಟೆ: ಅಮೆರಿಕದಲ್ಲಿ ಇಂಧನ ಉತ್ಪಾದನೆ ಹೆಚ್ಚಾದರೆ ಅದರಿಂದ ಜಾಗತಿಕ ತೈಲ ಮತ್ತು ಅನಿಲ ಬೆಲೆಗಳು ಕಡಿಮೆಯಾಗಬಹುದು. ಇಂಧನವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ ಇದರಿಂದ ಲಾಭವಾಗುತ್ತದೆ. ತೈಲ ರಫ್ತು ಮಾಡುವ ಸೌದಿ ಅರೇಬಿಯಾ ಮತ್ತು ರಷ್ಯಾದಂತಹ ದೇಶಗಳಿಗೆ ಇದೊಂದು ಸವಾಲಾಗಿ ಪರಿಣಮಿಸಲಿದೆ.

ಭಾರತದ ಮೇಲೆ ಏನು ಪರಿಣಾಮ?

ಹಲವು ಪ್ರಯೋಜನ: ಅತಿ ಹೆಚ್ಚು ರೆಮಿಟನ್ಸ್ ಸ್ವೀಕರಿಸುವ ದೇಶಗಳಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆ. 2023ರಲ್ಲಿ ಸುಮಾರು 100 ಶತಕೋಟಿ ಡಾಲರ್ ಹಣವನ್ನು ಭಾರತ ಸ್ವೀಕರಿಸಿದ್ದು, ಇದರಲ್ಲಿ ಸುಮಾರು 32 ಶತಕೋಟಿ ಡಾಲರ್ ಹಣ (ಶೇ. 28) ಅಮೆರಿಕದಿಂದಲೇ ಬಂದಿದೆ. ರೆಮಿಟನ್ಸ್ ತೆರಿಗೆಯನ್ನು ಶೇ. 1ಕ್ಕೆ ಇಳಿಸುವುದರಿಂದ ಅಮೆರಿಕದಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಸಹಾಯವಾಗಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ಕಡಿಮೆ ವೇತನದ ಉದ್ಯಮಗಳಲ್ಲಿ ದುಡಿಯುತ್ತ ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ಹಣ ಕಳಿಸುತ್ತಿರುವವರಿಗೆ ಆರ್ಥಿಕ ಒತ್ತಡ ಕಡಿಮೆಯಾಗಲಿದೆ. ಬ್ಯಾಂಕ್ ವರ್ಗಾವಣೆಗಳು ಮತ್ತು ಕಾರ್ಡ್ ಆಧಾರಿತ ಹಣಪಾವತಿಗೆ ಈ ತೆರಿಗೆಯಿಂದ ವಿನಾಯಿತಿ ನೀಡಿರುವ ಕಾರಣ, ಎನ್​ಆರ್​ಐಗಳಿಗೆ ಇನ್ನಷ್ಟು ಲಾಭವಾಗಲಿದೆ.

ಏಕೆಂದರೆ ಅಮೆರಿಕದಿಂದ ಭಾರತಕ್ಕೆ ಹೆಚ್ಚಿನ ರೆಮಿಟನ್ಸ್​ಗಳು ಡಿಜಿಟಲ್ ಬ್ಯಾಂಕಿಂಗ್ ಮೂಲಕ ನಡೆಯುತ್ತವೆ. ಭಾರತದ ವಿವಿಧ ರಾಜ್ಯಗಳಲ್ಲಿನ ಲಕ್ಷಾಂತರ ಕುಟುಂಬಗಳ ಆರ್ಥಿಕ ಸ್ಥಿರತೆಗೆ ಇದು ಕಾರಣವಾಗಲಿದೆ. ಶೇ. 5ರಷ್ಟು ರೆಮಿಟನ್ಸ್ ತೆರಿಗೆ ವಿಧಿಸಿದರೆ ಡಾಲರ್ ಎದುರು ಭಾರತೀಯ ರೂಪಾಯಿಯ ಬೆಲೆ 1ರಿಂದ ಒಂದೂವರೆ ರೂಪಾಯಿಯಷ್ಟು ದುರ್ಬಲ ಆಗಬಹುದೆಂದು ಅಂದಾಜಿಸಲಾಗಿತ್ತು. ಶೇ. 1 ತೆರಿಗೆ ದರದಿಂದ ಈ ಅಪಾಯ ಕಡಿಮೆಯಾಗುತ್ತದೆ. ರೂಪಾಯಿಯ ಸ್ಥಿರತೆ ಕಾಪಾಡಲು ಮತ್ತು ಭಾರತದ ವಿದೇಶಿ ವಿನಿಮಯ ಮೀಸಲನ್ನು ಬಲಪಡಿಸಲು ಸಹಾಯವಾಗುತ್ತದೆ.

ಎಚ್1ಬಿ ವೀಸಾ, ವಲಸೆ ನೀತಿ: ಬುದ್ಧಿವಂತರಿಗೆ ಮಾತ್ರ ವೀಸಾ ಎಂಬ ಅಮೆರಿಕದ ಪ್ರಸ್ತಾವಿತ ನೀತಿಯಿಂದಾಗಿ ಎಚ್1ಬಿ ವೀಸಾ ಮೇಲೆ ಕಠಿಣ ಮಾನದಂಡಗಳು ಅನ್ವಯವಾಗಲಿವೆ. ಭಾರತೀಯ ಐಟಿ ವೃತ್ತಿಪರರೇ ಹೆಚ್ಚಾಗಿ ಬಳಸುವ ವೀಸಾ ಇದು. 2023ರಲ್ಲಿ ಎಚ್1ಬಿ ವೀಸಾ ಪಡೆದವರ ಪೈಕಿ ಭಾರತೀಯರ ಸಂಖ್ಯೆ ಶೇ. 70ಕ್ಕಿಂತ ಅಧಿಕ. ಕಠಿಣ ನಿರ್ಬಂಧಗಳು ಜಾರಿಗೆ ಬಂದರೆ ಭಾರತೀಯ ಐಟಿ ಉದ್ಯೋಗಿಗಳಿಗೆ ಅವಕಾಶಗಳು ಕಡಿಮೆಯಾಗಬಹುದು. ಟಿಸಿಎಸ್, ಇನ್ಪೋಸಿಸ್, ವಿಪ್ರೊ ಸೇರಿದಂತೆ ಅನೇಕ ಐಟಿ ಕಂಪನಿಗಳ ಮೇಲೆ ಪರಿಣಾಮ ಆಗಬಹುದು. ಈ ಕಂಪನಿಗಳು ಈಗ ತಮ್ಮ ಆದಾಯದ ಗಣನೀಯ ಭಾಗವನ್ನು ಅಮೆರಿಕದ ಮಾರುಕಟ್ಟೆಯಿಂದ ಗಳಿಸುತ್ತಿವೆ. ಆಗ ಈ ಕಂಪನಿಗಳು ದೇಶೀಯ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಬೇಕಾಗಬಹುದು. ಕೆನಡಾ ಅಥವಾ ಯುರೋಪ್​ನಂತಹ ಪರ್ಯಾಯ ತಾಣಗಳನ್ನು ಹುಡುಕುವುದು ಅನಿವಾರ್ಯವಾಗಬಹುದು. ಆದರೆ ಇದೆಲ್ಲವೂ ಅಲ್ಪಾವಧಿಯ ಸವಾಲು ಎಂದೇ ವಿಶ್ಲೇಷಿಸಲಾಗುತ್ತಿದೆ.

ಆರ್ಥಿಕ, ರಾಜತಾಂತ್ರಿಕ ಸಂಬಂಧ: ರೆಮಿಟನ್ಸ್ ತೆರಿಗೆ ಕಡಿತದ ಕ್ರಮ ಭಾರತ- ಅಮೆರಿಕ ಆರ್ಥಿಕ ಸಂಬಂಧಗಳಿಗೆ ಪೂರಕವಾಗಿದೆ. ಆದರೆ ಕಠಿಣ ವೀಸಾ ನೀತಿಯಿಂದ ಭಾರತೀಯರಿಗೆ ಅವಕಾಶಗಳು ಕಡಿಮೆಯಾದರೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಒತ್ತಡ ಸೃಷ್ಟಿಯಾಗಬಹುದು.

ಇಂಗ್ಲೆಂಡ್​ ಬೌಲರ್​ಗಳಿಗೆ ದುಃಸ್ವಪ್ನವಾದ ಗಿಲ್​​! ಚೊಚ್ಚಲ ದ್ವಿಶತಕ ಬೆನ್ನಲ್ಲೇ ಐತಿಹಾಸಿಕ ದಾಖಲೆಗಳು ಮುಡಿಗೆ | Shubman Gill

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…