ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

ಕಾರವಾರ: ಬೀದಿ ನಾಯಿಗಳ ಹಾವಳಿ ಹೆಚ್ಚಿದ ಹಿನ್ನೆಲೆಯಲ್ಲಿ ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಭಾನುವಾರ ನೀಡಲಾಯಿತು.

ನಗರಸಭೆ ಸಿಬ್ಬಂದಿ ಸಹಕಾರದಲ್ಲಿ ಹುಬ್ಬಳ್ಳಿಯ ಎನಿಮಲ್ ರೈಟ್ ಫಂಡ್ ಎಂಬ ಸ್ವಯಂಸೇವಾ ಸಂಸ್ಥೆ ಸಿಬ್ಬಂದಿ ಗಾಂಧಿ ಮಾರುಕಟ್ಟೆ ಸುತ್ತಲಿನ 26 ನಾಯಿಗಳನ್ನು ಭಾನುವಾರ ಹಿಡಿದು ತಂದಿದ್ದಾರೆ. ಪಶು ವೈದ್ಯಕೀಯ ಆಸ್ಪತ್ರೆಯ ಡಾ. ನಂದಕುಮಾರ ಪೈ, ಡಾ. ವಿಶ್ವನಾಥ ಹೆಗಡೆ, ಡಾ. ಶ್ರೇಯಸ್, ಡಾ. ಕೆ.ಎಂ. ಹೆಗಡೆ, ಡಾ. ಶ್ರೀನಿವಾಸ ಪಾಟೀಲ, ಡಾ. ರಾಜೇಶ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ರೇಬೀಸ್ ನಿರೋಧಕ ಚುಚ್ಚುಮದ್ದು ನೀಡಿದರು.

ನಗರದ ವಿವಿಧೆಡೆ ಬೀದಿ ನಾಯಿ ಹಾವಳಿ ತುರ್ತಾಗಿ ಇದ್ದುದರಿಂದ ಪ್ರತಿ ಭಾನುವಾರ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪರಿಸರ ಇಂಜಿನಿಯರ್ ಮಲ್ಲಿಕಾರ್ಜುನ ತಿಳಿಸಿದರು.