ವಚನ ಸಾಹಿತ್ಯದ ವೈಭವ ಮೆರವಣಿಗೆ

ವಿಜಯವಾಣಿ ಸುದ್ದಿಜಾಲ ಬೀದರ್
ವಚನ ವಿಜಯೋತ್ಸವ ನಿಮಿತ್ತ ಬಸವ ಸೇವಾ ಪ್ರತಿಷ್ಠಾನದಿಂದ ನಗರದಲ್ಲಿ ಮಂಗಳವಾರ ವಚನ ಸಾಹಿತ್ಯದ ಮೆರವಣಿಗೆ ಅದ್ದೂರಿಯಿಂದ ನಡೆಯಿತು. ನಾಲ್ಕೈದು ಗಂಟೆ ಸಾಗಿದ ಮೆರವಣಿಗೆ ವೈಭವ ವಚನ ಸಾಹಿತ್ಯದ ಕಂಪನ್ನೇ ಹರಿಸಿತು.

ಬಸವೇಶ್ವರ ವೃತ್ತದಿಂದ ಬೆಳಗ್ಗೆ ಶುರುವಾದ ಮೆರವಣಿಗೆ 6 ಕಿಮೀ ದೂರದ ಬಸವಗಿರಿಗೆ ಮಧ್ಯಾಹ್ನ ತಲುಪಿತು. ಹೂವಿನಿಂದ ಅಲಂಕೃತ ಸಾರೋಟು (ಬಸವ ರಥ) ಮೆರವಣಿಗೆ ಆಕರ್ಷಣೆಯಾಗಿತ್ತು. ಸಾರೋಟಿನಲ್ಲಿ ವಚನ ಸಾಹಿತ್ಯ, ಬಸವಣ್ಣನವರ ಭಾವಚಿತ್ರ ಇರಿಸಲಾಗಿತ್ತು. ನೂರಾರು ಶರಣೆಯರು, ಶರಣರು ತಲೆ ಮೇಲೆ ವಚನ ಸಾಹಿತ್ಯದ ಕಟ್ಟು ಹೊತ್ತು ಹೆಜ್ಜೆ ಹಾಕುತ್ತ ಕಳೆ ತಂದುಕೊಟ್ಟರು.

ಜಿಲ್ಲೆಯ 600 ಗ್ರಾಮಗಳಿಂದ ಆಗಮಿಸಿದ್ದ ಬಸವ ಜ್ಯೋತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಸ್ಥಳೀಯರಲ್ಲದೆ ತೆಲಂಗಾಣ, ಆಂಧ್ರ, ಮಹಾರಾಷ್ಟ್ರದ ನಾನಾ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಶರಣರು ಸಾಕ್ಷಿಯಾದರು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ ಸೇರಿ ಶರಣ ಶರಣೆಯರ ವೇಷಧಾರಿಗಳು ಗಮನ ಸೆಳೆದರು.

ಡೊಳ್ಳು, ಕೋಲಾಟ, ವಚನ ವಡಪು, ಭಜನಾ ತಂಡ ಮುಂತಾದ ಕಲಾ ತಂಡಗಳು ಮೆರವಣಿಗೆ ಮೆರಗು ಹೆಚ್ಚಿಸಿ ಸಾಂಸ್ಕೃತಿಕ ವೈಭವ ನೀಡಿದವು. ಶರಣ-ಶರಣೆಯರು ತಲೆ ಮೇಲೆ ವಚನ ಸಾಹಿತ್ಯ ಹೊತ್ತು ಸಾಲಾಗಿ ಹೋಗುತ್ತಿರುವ ದೃಶ್ಯ ಮನಮೋಹಕವಾಗಿತ್ತು. ಯುವಕರು ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸಿದರು. ವಚನ ನೃತ್ಯಕ್ಕೆ ಗಣ್ಯರು ಸಹ ಹೆಜ್ಜೆ ಹಾಕಿ ಯುವಕರಿಗೆ ಜೋಶ್ ತುಂಬಿದರು.

ವಚನ ಪಠಣದೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಮಾತನಾಡಿ, ಬಸವಣ್ಣನವರು ವಿಶ್ವದ ಶ್ರೇಷ್ಠ ದಾರ್ಶನಿಕರು. ಅವರು ಯಾವುದೇ ಜಾತಿ-ಮತ ಪಂಥಕ್ಕೆ ಸೀಮಿತರಲ್ಲ. ಮಹಾಪುರುಷರನ್ನು ಒಂದು ಹಂತಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.

ಬಸವಣ್ಣಪ್ಪ ನೇಳಗಿ ಧ್ವಜಾರೋಹಣ ನೆರವೇರಿಸಿದರು. ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಮಾತನಾಡಿದರು. ಅಕ್ಕ ಗಂಗಾಂಬಿಕೆ, ಶ್ರೀ ಶಿವಾನಂದ ಸ್ವಾಮೀಜಿ ಹುಲಸೂರು, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ, ಕ್ರೀಡಾ ಸಚಿವ ರಹೀಮ ಖಾನ್, ಸಂಸದ ಭಗವಂತ ಖೂಬಾ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಬಾಬು ವಾಲಿ, ಗುರುನಾಥ ಕೊಳ್ಳುರ್, ಬಸವರಾಜ ಧನ್ನೂರ, ಪ್ರಭುರಾವ ವಸ್ಮತೆ, ರಮೇಶ ಪಾಟೀಲ್ ಸೋಲಪುರ, ಬಸವರಾಜ ಬುಳ್ಳಾ, ಸುರೇಶ ಚನ್ನಶೆಟ್ಟಿ, ಆನಂದ ದೇವಪ್ಪ, ರಮೇಶ ಮಠಪತಿ, ಜಯರಾಜ ಖಂಡ್ರೆ, ವಿರೂಪಾಕ್ಷ ಗಾದಗಿ, ಅಶೋಕ ಕರಂಜಿ ಇತರರಿದ್ದರು