ಗಾಳಿಪಟ ಉತ್ಸವ ಫೆ.10ರಂದು

ವಿಜಯವಾಣಿ ಸುದ್ದಿಜಾಲ ಬೀದರ್
ಭಾರತೀಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಯುವ ರಾಷ್ಟ್ರ ಸಂಘಟನೆ, ಟೀಮ್ ವೇಗ, ಯುನೈಟೆಡ್ ಯುಥ್ ಫ್ರಂಟ್, ಜಿಲ್ಲಾಡಳಿತ, ಪ್ರವಾಸ್ಯೋದಮ ಇಲಾಖೆ, ನಗರಸಭೆ ವತಿಯಿಂದ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ ಫೆ.10ರಂದು ಬಿವಿಬಿ ಕಾಲೇಜು ಆವರಣದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.

ಐತಿಹಾಸಿಕ ಕಲೆ ಗಾಳಿಪಟಕ್ಕೆ ಉತ್ತೇಜನ ನೀಡಲು ಪ್ರಥಮ ಬಾರಿ ನಗರದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 10.30ರಿಂದ ರಾತ್ರಿವರೆಗೆ ವೈವಿಧ್ಯಮಯ ಚಟುವಟಿಕೆ ನಡೆಯಲಿವೆ ಎಂದು ಯುವ ರಾಷ್ಟ್ರ ಸಂಘಟನೆ ಅಧ್ಯಕ್ಷ ಜಗದೀಶ್ ಬಿರಾದಾರ, ಭಾರತೀಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಸಾಧನಾ ಹುಲಸೂರೆ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಉತ್ಸವಕ್ಕೆ ಚಾಲನೆ ನೀಡುವರು. ಸಂಸದ ಭಗವಂತ ಖೂಬಾ ಅಧ್ಯಕ್ಷತೆ ವಹಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಡಿಸಿ ಡಾ.ಎಚ್.ಆರ್. ಮಹಾದೇವ, ಜಿಪಂ ಸಿಇಒ ಮಹಾಂತೇಶ ಬೀಳಗಿ, ಎಸ್ಪಿ ಟಿ. ಶ್ರೀಧರ್, ಅಪರ ಡಿಸಿ ರುದ್ರೇಶ ಗಾಳಿ ಇತರರು ಭಾಗವಹಿಸುವರು ಎಂದು ವಿವರಿಸಿದರು.