ಸುಭದ್ರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ

ಬೀದರ್:  ಇಂದಿನ ಯುವಕರು ಸಿನಿಮಾ, ಮೊಬೈಲ್ಗಳಲ್ಲಿ ಕಾಲಹರಣ ಮಾಡದೆ ಭಾರತದ ಸಂಘರ್ಷದ ಇತಿಹಾಸ ಅರ್ಥೈಸಿಕೊಂಡು ಸುಭದ್ರ ದೇಶ ಕಟ್ಟಲು ಕೈಜೋಡಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಹಬೌದ್ಧಿಕ ಪ್ರಮುಖ ರವೀಂದ್ರಜಿ ಹೇಳಿದರು.

ಕೇಶವ ಕಾರ್ಯಸಂವರ್ಧನ ಸಮಿತಿ ಹಾಗೂ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಹಯೋಗದಡಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷದ ನಿಮಿತ್ತ ನಗರದಲ್ಲಿ ಆಯೋಜಿಸಿದ್ದ ಮೂರು ದಿನದ ವಿಶೇಷ ಉಪನ್ಯಾಸ ಮಾಲೆಯ ಮೊದಲ ದಿನ ಭಾರತ ಸಂಘರ್ಷದ ಇತಿಹಾಸ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಭಾರತದ ಮೇಲೆ ಅನೇಕ ದಾಳಿಗಳು ನಡೆದಿವೆ. ಆದರೆ ನಮ್ಮ ಸಂಸ್ಕೃತಿ ಇನ್ನೂ ಗಟ್ಟಿಯಾಗಿದೆ. ಪ್ರಸ್ತುತ ನಮ್ಮ ಮಕ್ಕಳಿಗೆ ದೇವರು ನಂತರ, ದೇಶ ಪ್ರಥಮ ಎಂಬ ಪಾಠ ಕಲಿಸಿಕೊಡಬೇಕಾಗಿದೆ. ಭಾರತ ಸ್ವಾತಂತ್ರೃ ಸಂದರ್ಭದ ಕ್ರಾಂತಿಕಾರಿ ಹೋರಾಟವನ್ನು ಇಂದಿನ ಯುವಪೀಳಿಗೆ ಮೆಲಕು ಹಾಕಬೇಕಾಗಿದೆ ಎಂದರು.

ಭಾರತದ ಮೇಲೆ ಅನೇಕ ದಾಳಿ ನಡೆದರೂ ಹಿಂದು ಸಂಸ್ಕೃತಿ ಮಾತ್ರ ಸ್ವತಂತ್ರವಾಗಿಯೇ ಉಳಿದಿದೆ. ಜಗತ್ತಿನಲ್ಲಿ ಅದೆಷ್ಟೋ ನಾಗರಿಕತೆಗಳು ಹುಟ್ಟಿಕೊಂಡು ನಾಶಗೊಂಡವೆ. ಆದರೆ ಸಿಂಧುಬಯಲಿನ ನಾಗರಿಕತೆ ಶಾಶ್ವತ, ಜೀವಂತವಾಗಿ ಉಳಿದಿದೆ. ತ್ರೇತಾಯುಗದಲ್ಲಿ ಇದ್ದ ಹಸು ರಕ್ಷಣೆ ಸಂಸ್ಕೃತಿ ಹಿಂದು ಧರ್ಮದಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ಪ್ರಸ್ತುತವೂ ನಮ್ಮ ಪರಂಪರೆ ಆಕಳು ರಕ್ಷಿಸಲು ಸದಾ ಸಿದ್ಧವಾಗಿದೆ ಎಂದು ಹೇಳಿದರು.

ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ. ಬಿರಾದಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಶಿವರಾಜ ಹಲಶೆಟ್ಟಿ ಹಾಗೂ ಕೇಶವ ಕಾರ್ಯ ಸಂವರ್ಧನ ಸಮಿತಿ ಅಧ್ಯಕ್ಷ ಮಾರುತಿ ಪಂಚಭಾಯಿ ಇದ್ದರು.

ಹುಮನಾಬಾದ್ ತಾಲೂಕು ಕಾರ್ಯವಾಹ ಬಸವರಾಜ ನಿಂಬೂರೆ ಸ್ವಾಗತಿಸಿದರು. ಮಡಿವಾಳೇಶ್ವರ ಪ್ರೌಢ ಶಾಲೆ ಮುಖ್ಯಗುರು ಶಿವಶರಣಪ್ಪ ಪಾಟೀಲ್ ವಂದಿಸಿದರು. ಜಿಲ್ಲಾ ಸಹಬೌದ್ಧಿಕ ಪ್ರಮುಖ ರವಿಚಂದ್ರ ಬರದಾಪುರೆ ನಿರೂಪಣೆ ಮಾಡಿದರು.