ಕಾಂಗ್ರೆಸಿಗರಿಗೆ ದಮ್ಮಿದ್ರೆ ಬಾಬ್ರಿ ಮಸೀದಿ ಕಟ್ಟುವಂತೆ ಹೇಳಲಿ..

ಬೀದರ್: ನಮಗೆ ರಾಮ ಮಂದಿರ ರಾಜಕಾರಣದ ವಿಷಯವಲ್ಲ. ರಾಮನ ಹೆಸರಿನಲ್ಲಿ ನಾವೆಂದೂ ರಾಜಕೀಯ ಮಾಡಿಲ್ಲ. ರಾಮ ಮಂದಿರ ನಮ್ಮ ಜೀವನವಾಗಿದೆ. ರಾಮ ಮತ್ತು ರಾಮ ಮಂದಿರ ನಮ್ಮ ಅಸ್ಮಿತೆಯಾಗಿದೆ. ಈ ಬಗ್ಗೆ ಕಾಂಗ್ರೆಸಿಗರಿಂದ ನಾವೇನೂ ಕಲಿಯಬೇಕಾಗಿಲ್ಲ. ರಾಜಕೀಯ ಲಾಭ ಅಥವಾ ಚುನಾವಣೆ ಬಂದಾಗೊಮ್ಮೆ ಕಾಂಗ್ರೆಸಿಗರಿಗೆ ಹಿಂದುತ್ವ. ರಾಮನ ನೆನಪು ಬರುತ್ತದೆ. ದಮ್ಮಿದ್ದರೆ ಅವರು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟುವಂತೆ ಆಗ್ರಹಿಸಲಿ.

ಮಾಜಿ ಡಿಸಿಎಂ, ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸಿಗರಿಗೆ ಹಾಕಿದ ಸವಾಲು. ರಾಮ ಮಂದಿರ ಬಗ್ಗೆ ಅದೇಕೋ ಇತ್ತೀಚೆಗೆ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಭಾರಿ ನಿಷ್ಠೆ ತೋರಿಸಿದಂತೆ ಹೇಳಿಕೆ ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಎದುರಾದ ಕಾರಣ ಕಾಂಗ್ರೆಸಿಗರ ಧರ್ಮ, ಜಾತಿ ನಾಟಕ ಶುರುವಾಗಿದೆ. ಆದರೆ ಇದು ಫಲ ನೀಡುವುದಿಲ್ಲ. ಇದು ಅವರಿಗೆ ಯಾವುದೇ ಫಾಯಿದಾ ಮಾಡದು. ಜನರಿಗೆ ಇವರ ಅಸಲಿ ಬಣ್ಣ ಗೊತ್ತಾಗಿದೆ. ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನದಲ್ಲಿ ನಾವು ಗೆಲ್ಲಲಿದ್ದೇವೆ ಎಂದು ಹೇಳಿದರು.

ರಾಮ ಮಂದಿರ, ಗೋವು, ಹಿಂದುತ್ವ ಹಾಗೂ ಭಾರತೀಯ ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ನವರಿಂದ ಪಾಠ ಕಲಿಯಬೇಕಿಲ್ಲ. ಇವೆಲ್ಲವೂ ನಮಗೆ ರಕ್ತಗತವಾಗಿ ಬಂದಿವೆ. ಚುನಾವಣೆ ಬಂದಾಗೊಮ್ಮೆ ವಿವಿಧ ವಿಷಯ ಮುಂದಿಟ್ಟುಕೊಂಡು ನಾಟಕವಾಡುವ ಕಾಂಗ್ರೆಸಿಗರಿಗೆ ಹಿಂದುತ್ವ ಅಂದ್ರೆ ಏನೆಂಬುದೇ ಗೊತ್ತಿಲ್ಲ. ಮೊನ್ನೆಯವರೆಗೆ ಟಿಪ್ಪುವನ್ನು ಹಿಡಿದುಕೊಂಡು ಧರ್ಮದಲ್ಲಿ ಜಗಳ ಹಚ್ಚಿದರು. ವೀರಶೈವ-ಲಿಂಗಾಯತ ವಿವಾದ ಸೃಷ್ಟಿಸಿ ಜಾತಿ ಒಡೆಯುವ ಕೆಲಸ ಮಾಡಿದರು. ಇದೀಗ ಇದ್ದಕಿದ್ದಂತೆ ಹಿಂದು ಜಪ ಮಾಡುತ್ತಿದ್ದಾರೆ. ರಾಮನ ಬಗ್ಗೆ ಮಾತನಾಡುತ್ತಿದ್ದಾರೆ. ಇವರ ಢೋಂಗಿತನಕ್ಕೆ ಜನ ನಂಬಲ್ಲ. ಪಾಠ ಕಲಿಸುತ್ತಾರೆ ಎಂದರು.

ಹಿಂದುತ್ವ ಪರವಾಗಿ ಇರುವವರ್ಯಾರು? ಭಾರತೀಯ ಸಂಸ್ಕೃತಿ ಉಳಿಸಿದವರ್ಯಾರು ಎನ್ನುವುದು ದೇಶದ ಜನರಿಗೆ ಗೊತ್ತಿದೆ. ಶ್ರೀರಾಮ ಹಿಂದೆಯೂ, ಮುಂದೆಯೂ ನಮ್ಮ ಆದರ್ಶ ಪುರುಷ. ಈ ಹಿಂದೆ ಕಾಂಗ್ರೆಸ್ನವರು ರಾಮ ಜನಿಸಿದ ಜಾಗವನ್ನೇ ಪ್ರಶ್ನೆ ಮಾಡುತ್ತಿದ್ದರು. ಅಯೋಧ್ಯೆಯಲ್ಲಿ ಯಾವುದೇ ಕಾರಣಕ್ಕೂ ರಾಮ ಮಂದಿರ ಆಗುವುದಿಲ್ಲ. ಅಲ್ಲಿ ಬಾಬ್ರಿ ಮಸೀದಿಯೇ ಆಗಬೇಕು ಎಂದಿದ್ದರು. ಈಗ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ಹೇಳಲಿ. ದೇಶದೆಲ್ಲೆಡೆ ಹಿಂದುತ್ವ ಜಾಗೃತಿಯಾಗಿದೆ. ಈ ಭಯದಿಂದ ಕಾಂಗ್ರೆಸ್ ಹಿಂದುತ್ವ ಜಪ ಮಾಡುತ್ತಿದೆ ಎಂದರು.