ಸಾಮಾಜಿಕ ಬದಲಾವಣೆಗೆ ಶರಣರ ಬಲಿದಾನ

ಬೀದರ್: ಸಾಮಾಜಿಕ ಬದಲಾವಣೆಗಾಗಿ 12ನೇ ಶತಮಾನದಲ್ಲಿ ಶರಣರು ಬಲಿದಾನಗೈದಿದ್ದಾರೆ. ಅವರ ಸ್ಮರಣೆಗಾಗಿ ಸಮಾಜದಲ್ಲಿ ಸಣ್ಣ ಬದಲಾವಣೆಯಾದರೂ ಮಾಡುತ್ತೇನೆ ಎಂಬ ಕಳಕಳಿ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಲಿಂಗಾಯತ ಮಹಾಮಠದ ವತಿಯಿಂದ ಶರಣ ಉದ್ಯಾನದಲ್ಲಿ 10 ದಿವಸಗಳಿಂದ ನಡೆದಿರುವ ಮರಣವೇ ಮಹಾನವಮಿ ಮಹೋತ್ಸವದ ಸಮಾರೋಪ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿದ ಅವರು, ಶರಣರ ನೆಲ ಬೀದರ್ ಎಂದರೆ ರೋಮಾಂಚನಕಾರಿ. ಶರಣರಂತೆ ಎನಗಿಂತ ಕಿರಿಯರಿಲ್ಲ ಎಂಬಂತೆ ವಿನಯಶೀಲರಾಗಿ ಸೇವೆ ಮಾಡಬೇಕು ಎಂದರು.

ಕಲ್ಯಾಣ ಕ್ರಾಂತಿ ವಿಜಯೋತ್ಸವ ಕುರಿತು ಉಪನ್ಯಾಸ ಮಂಡಿಸಿದ ರಾಮದುರ್ಗದ ಚಿಂತಕ ಪ್ರೊ.ಸಿದ್ದಣ್ಣ ಲಂಗೋಟಿ, 10 ಸಾವಿರ ವರ್ಷದ ಪ್ರಾಚೀನ ಭಾರತದ ಧಾಮರ್ಿಕ ಆಯಾಮಕ್ಕೆ ಮಹತ್ವದ ತಿರುವು ಕೊಟ್ಟವರು ಬಸವಣ್ಣನವರು. 36 ವರುಷ ಭಕ್ತಿ ಬೀಡಾಗಿದ್ದ ಕಲ್ಯಾಣ, 27 ವರ್ಷ ಅನುಭವಕ್ಕೆ ಶಿವಸದನವಾಗಿತ್ತು. ಅಂದಿನ ಅನುಭವ ಮಂಟಪ ಚಿಂತನೆಯ ಫಲವಾದ ಕಾಯಕ-ದಾಸೋಹ ತತ್ವಗಳು ಸ್ವಾವಲಂಬಿ ಬದುಕು ರೂಪಿಸಲು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಮಾತನಾಡಿ, ಜಾತಿ ಭೂತ ಓಡಿಸಲು ಕಲ್ಯಾಣ ಕ್ರಾಂತಿಯಾಯ್ತು. ಶರಣರ ತ್ಯಾಗ ಬಲಿದಾನ ಈ ಜಗತ್ತು ಎಂದೂ ಮರೆಯಬಾರದು. ತನ್ಮೂಲಕ ಶರಣರನ್ನು ಗೌರವಿಸಬೇಕು ಎಂದು ಹೇಳಿದರು.

ಡಾ.ವಿಜಯಶ್ರೀ ಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅನುಪಮಾ ಏರೋಳಕರ್, ಡಾ.ಸರೋಜಾ ಪಾಟೀಲ್, ವಿದ್ಯಾವತಿ ಬಲ್ಲೂರ ಇತರರಿದ್ದರು. ವನಿತಾ ಗುಂಡಪ್ಪ ಬಳತೆ ಧ್ವಜಾರೋಹಣ ನೆರವೇರಿಸಿದರು. ರಮೇಶ ಮಠಪತಿ ಸ್ವಾಗತಿಸಿದರು. ಮಲ್ಲಮ್ಮ ರಾಚಪ್ಪ ಪಾಟೀಲ್ ನಿರೂಪಣೆ ಮಾಡಿದರು. ಜಿಪಂ ನೂತನ ಸಿಇಒ ಮಹಾಂತೇಶ ಬೀಳಗಿ ಅವರನ್ನು ಸನ್ಮಾನಿಸಲಾಯಿತು.