ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಶೋಕ್ ಖೇಣಿ ಹಾದಿ ನೈಸ್ ಇಲ್ಲ!

|ಸ.ದಾ. ಜೋಶಿ

ಬೀದರ್: ಹಳ್ಳಿಗಳಿಂದಲೇ ಕೂಡಿರುವ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚುತ್ತಿದೆ. ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ, ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷ ಬಂಡೆಪ್ಪ ಖಾಶೆಂಪುರ ಅವರಂಥ ಘಟಾನುಘಟಿಗಳನ್ನು ಹೊಂದಿದ್ದರಿಂದ ಕ್ಷೇತ್ರವೀಗ ಗಮನ ಸೆಳೆದಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹಣಾಹಣಿಗೆ ಕಣ ಸಜ್ಜಾಗಿದ್ದು, ಕದನ ಕುತೂಹಲ ಕೆರಳಿಸಿದೆ. ಕರ್ನಾಟಕ ಮಕ್ಕಳ ಪಕ್ಷ ಸಂಸ್ಥಾಪಿಸಿ ಕಳೆದ ಬಾರಿ ಸ್ಪರ್ಧಿಸಿದ್ದ ಖೇಣಿ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ. ಮಕ್ಕಳ ಪಕ್ಷದಿಂದ ನಿಂತರೆ ಈ ಸಲ ಹಾದಿ ನೈಸ್ ಇಲ್ಲ ಎಂದರಿತು ಕೈಗೆ ಜೈ ಎಂದು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಖೇಣಿ ಅನಗತ್ಯ-ಅಸಂಬದ್ಧ ಹೇಳಿಕೆಗಳ ಮೂಲಕ ವಿವಾದ ಮೈಮೇಲೆ ಎಳೆದುಕೊಂಡವರು. ರಾಜಕೀಯಕ್ಕಿಂತ ನೈಸ್ ಮೂಲಕವೇ ಸದ್ದು ಮಾಡಿದ್ದು ಹೆಚ್ಚು. ಅವರು ಕಾಂಗ್ರೆಸ್ ಸೇರುತ್ತಲೇ ದೊಡ್ಡ ವಾದ-ವಿವಾದವೇ ನಡೆದವು. ಹೈಟೆಕ್ ವ್ಯಕ್ತಿತ್ವದ ಬಣ್ಣದ ಬದುಕಿನ ಖೇಣಿಗೆ ಈಗ ಹಳ್ಳಿಗರು ಕಾಡುತ್ತಿದ್ದಾರೆ.

ಕಳೆದ ಚುನಾವಣೆ ವೇಳೆ ಖೇಣಿ ಕೊಟ್ಟ ವಾಗ್ದಾನಕ್ಕೆ ಲೆಕ್ಕವಿಲ್ಲ. ಎರಡೇ ವರ್ಷದಲ್ಲಿ ಕ್ಷೇತ್ರ ಸಿಂಗಾಪುರ ಮಾಡುವೆ ಎಂದೆಲ್ಲ ನೀಡಿದ್ದ ಭರವಸೆ ಠುಸ್ ಆಗಿದೆ. ಹಳ್ಳಿಗರ ಒಲವು ಗಳಿಸಿಲ್ಲ, ಜನರ ನಿರೀಕ್ಷೆಗನುಗುಣವಾಗಿ ಕೆಲಸ ಮಾಡಿಲ್ಲ ಎಂಬ ಅಪಸ್ವರದ ನಡುವೆ ಖೇಣಿ ಮತ್ತೊಂದು ಕೈ ನೋಡಲು ಸಜ್ಜಾಗಿದ್ದಾರೆ. ಜೆಡಿಎಸ್​ನ ಬಂಡೆಪ್ಪ ಖಾಶೆಂಪುರ ಕಳೆದ ಸಲದ ಮುಯ್ಯಿ ತೀರಿಸಿಕೊಳ್ಳಲು ಖೇಣಿ ಎದುರು ತೊಡೆತಟ್ಟಿದ್ದಾರೆ. ಇಬ್ಬರ ನಡುವೆ ಬಿಜೆಪಿಯ ಡಾ. ಶೈಲೇಂದ್ರ ಬೆಲ್ದಾಳೆ ತಂತ್ರ ಹೆಣೆಯುತ್ತಿದ್ದಾರೆ. ದಿಗ್ಗಜರ ಫೈಟ್​ನಿಂದ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ.

ಜಾತಿ, ಮತಗಳ ಲೆಕ್ಕಾಚಾರ

ಮೊದಲ ಸಲ ಸ್ಪರ್ಧಿಸಿದಾಗ ಖೇಣಿ ಹವಾ ಇತ್ತು. ಕ್ಷೇತ್ರದ ದೊಡ್ಡ ವ್ಯಕ್ತಿ, ಜತೆಗೆ ಹೊಸ ಮುಖ. ಗೆದ್ದರೆ ಅದ್ಯಾವ ಪರಿ ಕ್ಷೇತ್ರ ಅಭಿವೃದ್ಧಿಪಡಿ ಸುತ್ತಾರೋ? ಜನಸಾಮಾನ್ಯರಿಗೆ ಏನೆಲ್ಲ ನೆರವಿಗೆ ಬರ್ತಾರೋ ಎಂಬ ನಿರೀಕ್ಷೆಗಳಿದ್ದವು. ಆದರೆ ಐದು ವರ್ಷಗಳಲ್ಲಿ ಜನ ಎಲ್ಲವನ್ನೂ ನೋಡಿದ್ದಾರೆ. ಖೇಣಿ ಸಹ ಜನರ ಒಲವು-ನಿಲುವು ಏನಿದೆ ಎಂಬುದನ್ನು ಅರಿತಿದ್ದಾರೆ. ಈಗ ಬರೀ ಖೇಣಿ ಹವಾ ನಡೆಯಲ್ಲ. ಪಕ್ಷ, ಜಾತಿಗಳ ಸಾಥ್ ಬೇಕೆಂಬುದನ್ನು ತಿಳಿದೇ ಕಾಂಗ್ರೆಸ್ ಕದ ತಟ್ಟಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *