ಪುಸ್ತಕ ಭಾರವೆಂದವರು ಭೂಮಿಗೂ ಭಾರ !

ಬೀದರ್: ನಮ್ಮ ಸಾಂಸ್ಕೃತಿಕ ಚಹರೆಗಳನ್ನು ಕಟ್ಟಿಕೊಡುವ ಮುಖ್ಯ ವಾಹಕ ಪುಸ್ತಕಗಳು. ಅವುಗಳನ್ನು ಗೌರವಿಸಬೇಕು. ಒಂದು ವೇಳೆ ಪುಸ್ತಕ ಭಾರವೆಂದರೆ ಅಂತಹವರು ಭೂಮಿಗೂ ಭಾರ ಎಂದು ಕನರ್ಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಪ್ರೊ.ವೀರೇಂದ್ರ ಸಿಂಪಿ ಅವರ ಪ್ರಥಮ ಸ್ಮರಣೋತ್ಸವ ಹಾಗೂ ಸಿಂಪಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಬಲ್ಲೂರ ಸಂಪಾದಿತ ಪ್ರೊ.ವೀರೇಂದ್ರ ಸಿಂಪಿ ಅವರ ಸಮಗ್ರ ಲಲಿತ ಪ್ರಬಂಧಗಳ ಸಂಕಲನ ಪ್ರಥಮ ಸಂಪುಟ ಲೋಕಾರ್ಪಣೆ ಮಾಡಿ ಮಾತನಾಡಿ, ಪುಸ್ತಕ ಭಾರ ಎನ್ನುವವರು ಭೂಮಿಗೂ ಭಾರ ಎಂಬ ಪ್ರೊ.ಸಿಂಪಿ ಮಾತು ಸಾರ್ವಕಾಲಿಕ ಸತ್ಯ ಎಂದು ಸ್ಮರಿಸಿದರು.
ಸಿಂಪಿ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ತನ್ನ ಮನೆಯಲ್ಲಿ ಕೆಲಸ ಮಾಡುವವಳ ಪರಿಸ್ಥಿತಿ, ಹೆಂಡತಿ ಮನೋಭಾವ, ಹಳ್ಳಿ ಚಹಾ ಹೋಟೆಲ್ ಚಿತ್ರಣವನ್ನು ತಮ್ಮ ಸಾಹಿತ್ಯದಲ್ಲಿ ಸೆರೆ ಹಿಡಿದಿದ್ದಾರೆ. ಹಳ್ಳಿ ಚಹಾ ಹೋಟೆಲ್ಗಳು ಆಧುನಿಕ ವಾತರ್ಾ ಇಲಾಖೆ ಎಂಬಂತೆ ಚಿತ್ರಿಸಿದ್ದಾರೆ. ಪ್ರಕೃತಿ ವಿಕೋಪ ಆದಾಗ, ಆರೋಗ್ಯ ಕೆಟ್ಟಾಗ, ಸಂಬಂಧದಲ್ಲಿ ಬಿರುಕುಂಟಾದಾಗ ಆಗುವ ದುಃಖವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅವರು ಅನೇಕ ಯುವ ಸಾಹಿತಿಗಳಿಗೆ ಉತ್ಸಾಹದ ಚಿಲುಮೆಗಳಾಗಿದ್ದರು. ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಅವರ ಬರಹಗಳು ಪಠ್ಯಗಳಾಗಿರುವುದು ಸಾಹಿತ್ಯದ ಶ್ರೇಷ್ಠತೆಗೆ ಕನ್ನಡಿ ಎಂದು ಬಣ್ಣಿಸಿದರು.
ಉದ್ಘಾಟಿಸಿದ ಪಶು ವೈದ್ಯಕೀಯ ವಿವಿ ಕುಲಪತಿ ಪ್ರೊ.ಎಚ್.ಡಿ. ನಾರಾಯಣಸ್ವಾಮಿ ಮಾತನಾಡಿ, ಕನ್ನಡಕ್ಕೆ ಸಾಂಸ್ಕೃತಿಕ ಹಿನ್ನೆಲೆ ಇದೆ. ದೇಶದಲ್ಲೇ ಕನ್ನಡ ಭಾಷೆಗೆ ಬಂದಷ್ಟು ಜ್ಞಾನಪೀಠ ಪ್ರಶಸ್ತಿ ಬೇರೆ ಭಾಷೆಗಿಲ್ಲ ಎಂಬುದು ಹೆಮ್ಮೆ ಸಂಗತಿ. ಆಂಗ್ಲ ಪ್ರಾಧ್ಯಾಪಕರಾಗಿ ಕನ್ನಡ ತೇರು ಎಳೆದಿರುವ ಸಿಂಪಿ ಜೀವನ ಪರಿಯೇ ವಿಶಿಷ್ಟ ಹಾಗೂ ಶ್ಲಾಘನೀಯ. ಅವರ ಸಾಹಿತ್ಯಗಳೆಲ್ಲ ಮರು ಮುದ್ರಣಗೊಂಡರೆ ಮುಂದಿನ ಪೀಳಿಗೆಗೆ ದಾರಿದೀಪ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪ್ರೊ.ಜಿ. ಪೂಣರ್ಿಮಾ ಮಾತನಾಡಿದರು. ಡಾ.ಬಸವರಾಜ ಬಲ್ಲೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಯೋಗೇಶ್ ಮಠದ ವಂದಿಸಿದರು. ಪ್ರೊ. ಪ್ರವೀಣ ಸಿಂಪಿ ಇತರರಿದ್ದರು.

ಬಸವರಾಜ ಕೊನೇಕಗೆ ಸಿಂಪಿ ಪ್ರಶಸ್ತಿ ಪ್ರದಾನ
ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಸಂಸ್ಥಾಪಕ, ಪುಸ್ತಕ ಪ್ರೇಮಿ ಬಸವರಾಜ ಕೊನೇಕ ಅವರಿಗೆ ಪ್ರೊ.ವೀರೇಂದ್ರ ಸಿಂಪಿ ಹೆಸರಿನ ಮೊದಲ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕೊನೇಕ ಅವರ ಸಾಹಿತ್ಯಿಕ, ಸಾಂಸ್ಕೃತಿಕ ಸೇವೆ ಸಾಧನೆ ಪರಿಗಣಿಸಿ ಪ್ರೊ.ವೀರೇಂದ್ರ ಸಿಂಪಿ ಪ್ರಶಸ್ತಿ ಫಲಕ ಹಾಗೂ 5 ಸಾವಿರ ರೂ. ನಗದು ಪುರಸ್ಕಾರ ನೀಡಿ ಸತ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕೊನೇಕ ಮಾತನಾಡಿ, ನನಗೆ ಅನೇಕ ಸಂಘ-ಸಂಸ್ಥೆ, ಮಠ-ಮಾನ್ಯಗಳು ಗೌರವ ನೀಡಿವೆ. ಆದರೆ ಅವೆಲ್ಲವುಗಳಿಗಿಂತ ಈ ಪ್ರಶಸ್ತಿ ಹೆಚ್ಚು ಖುಷಿ ನೀಡಿದೆ. ನಾನು ಸಿಂಪಿ ಸಾಹಿತ್ಯ, ಅವರ ಜೀವನ ಶೈಲಿಗೆ ಮಾರು ಹೋಗಿದ್ದೇನೆ. ಅವರ ಆದರ್ಶ ಬದುಕು ನಮಗೆಲ್ಲರಿಗೆ ಮಾದರಿಯಾಗಿದೆ ಎಂದರು. ಪ್ರಶಸ್ತಿ ಮೊತ್ತ 5 ಸಾವಿರ ರೂ. ಹಣವನ್ನು ಮರಳಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರಿಗೆ ಹಸ್ತಾಂತರಿಸಿದ ಕೊನೇಕ, ಇದನ್ನು ಕನ್ನಡ ಮಾಧ್ಯಮದಲ್ಲಿ ಓದಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಥಮ, ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ರೂಪದಲ್ಲಿ ನೀಡುವಂತೆ ಮನವಿ ಮಾಡಿದರು.

ಪ್ರೊ.ಸಿಂಪಿ ತಮಗಿದ್ದ ಅದಮ್ಯ ಜೀವನೋತ್ಸವ, ಜೀವನ ಪ್ರೀತಿಯನ್ನೇ ತಮ್ಮ ಪ್ರಬಂಧಗಳಲ್ಲಿ ತಂದರು. ಅವರ ಸಾಹಿತ್ಯದಲ್ಲಿ ವಿಡಂಬನೆ, ವ್ಯಂಗ್ಯದ ಜತೆಗೆ ಸಮಾಜ ತಿದ್ದುವ ಹೊಸ ಹೊಸ ಆಲೋಚನೆಗಳು ಹಾಸು ಹೊಕ್ಕಾಗಿರುವುದನ್ನು ಕಾಣಬಹುದು. ಸಾಕಷ್ಟು ಅಧ್ಯಯನಶೀಲರಿದ್ದರೂ ಇನ್ನಷ್ಟು ಆಳವಾಗಿ ತಿಳಿದುಕೊಳ್ಳಬೇಕೆಂಬ ಹಂಬಲ ಅವರಲ್ಲಿತ್ತು.
| ಡಾ. ವಿಕ್ರಮ ವಿಸಾಜಿ, ಸಾಹಿತಿ

Leave a Reply

Your email address will not be published. Required fields are marked *