ಜನಮನ ರಂಜಿಸಿದ ನೂಪುರ ನೃತ್ಯೋತ್ಸವ

ವಿಜಯವಾಣಿ ಸುದ್ದಿಜಾಲ ಬೀದರ್
ನೂಪುರ ನೃತ್ಯ ಅಕಾಡೆಮಿಯು ರಂಗಮಂದಿರದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ 19ನೇ ನೂಪುರ ನೃತ್ಯೋತ್ಸವ ಜನಮನ ರಂಜಿಸಿತು. ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸಾದರಪಡಿಸಿದ ನೃತ್ಯಗಳು ಪ್ರೇಕ್ಷಕರನ್ನು ಕೊನೆವರೆಗೂ ಹಿಡಿದಿಟ್ಟವು.

ಕರ್ನಾಟಕವಲ್ಲದೆ ವಿವಿಧ ರಾಜ್ಯದ ನೃತ್ಯಗಳನ್ನು ಮಸ್ತ್ ಪ್ರದರ್ಶಿಸುವ ಮೂಲಕ ನಾಡಿನ ಕಲಾ ಶ್ರೀಮಂತಿಕೆ ಅನಾವರಣಗೊಳಿಸಿದರು. ರಂಗು ರಂಗಿನ ವಸ್ತ್ರಗಳು, ವಿವಿಧ ವಿನ್ಯಾಸದ ಆಭರಣಗಳು, ಚಿತ್ತಾಕರ್ಷಕವಾದ ಬಿಂದಿಗೆಗಳಿಂದ ಅಲಂಕೃತಗೊಂಡ ನೀರೆಯರು ಪ್ರಸ್ತುತಪಡಿಸಿದ ಬಂಜಾರ ನೃತ್ಯ ವಿಶೇಷ ಮೆರಗು ನೀಡಿತು. ಗುಜರಾತಿ ದಾಂಡಿಯಾ, ಕೇರಳದ ಮೋಹಿನಿ ಅಟ್ಟಂ, ಕಥಕ್, ಯಕ್ಷಗಾನ, ಪಾಶ್ಚಾತ್ಯ ಸಂಗೀತಕ್ಕೆ ಬೆರೆತ ಶಾಸ್ತ್ರೀಯ ನೃತ್ಯ ಪ್ರಕಾರಗಳು ಮನಸೂರೆಗೊಳಿಸಿದವು.

ಸಾನ್ನಿಧ್ಯ ವಹಿಸಿದ್ದ ಭಾತಂಬ್ರಾದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಕಲೆ ಮತ್ತು ಸಾಹಿತ್ಯ ಮನುಷ್ಯನ ಬದುಕಿನಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಸಹಕಾರಿಯಾಗಿವೆ. ನಾಗರಿಕ ಸಮಾಜದ ನಿರ್ಮಾಣದಲ್ಲಿ ಕಲೆ ಮಹತ್ತರ ಪಾತ್ರ ವಹಿಸಿದೆ. ನಾಟ್ಯ ಕಲೆಯಿಂದ ಮಾನಸಿಕ ನೆಮ್ಮದಿ ಮತ್ತು ದೈಹಿಕ ಆರೋಗ್ಯ ಕಾಪಾಡಬಹುದಾಗಿದೆ. ಸಾಂಸ್ಕೃತಿಕ ವಾತಾವರಣ ಸಹ ಬೆಳೆಯುತ್ತದೆ ಎಂದರು.

ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ ಅಧ್ಯಕ್ಷತೆಯಲ್ಲಿ ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಉದ್ಘಾಟಿಸಿದರು. ಪ್ರಮುಖರಾದ ರಾಜಶೇಖರ ವಟಗೆ, ಮುನೇಶ್ವರ ಲಾಖಾ, ಮಂಗಲಾ ಭಾಗವತ್, ಡಿ.ಕೆ. ಗಣಪತಿ, ವಿಜಯಕುಮಾರ ಪಾಟೀಲ್, ಚಂದ್ರಶೇಖರ ಹತ್ತಿ ಇದ್ದರು. ಪ್ರಭಾಕರ ಸ್ವಾಗತಿಸಿದರು. ಸುಬ್ರಹ್ಮಣ್ಯ ಪ್ರಭು ನಿರೂಪಣೆ ಮಾಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ಭೂತೇರ್, ಚಿತ್ರಕಲಾ ಸಾಧಕಿ ದಿವ್ಯಾ ಮಠದ್ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *