ಅನ್ನದಾತರಿಗೆ ಸುವರ್ಣ ನಾರಿ ಕುರಿ

ಬೀದರ್: `ಸುವರ್ಣ ನಾರಿ’ ಎಂಬ ಹೊಸ ಕುರಿ ತಳಿ ಶೀಘ್ರವೇ ರೈತರಿಗೆ ನೀಡಲಾಗುವುದು ಎಂದು ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ ನಾಡಗೌಡ ಹೇಳಿದರು.

ಹೊಸ ತಳಿ ಹೆಚ್ಚು ಹಾಲು ಕೊಡುತ್ತದೆ. ಹೆಚ್ಚು ಮರಿ ಹಾಕುತ್ತದೆ. ಇದರೊಂದಿಗೆ ಹೆಚ್ಚು ಮಾಂಸ ನೀಡಲಿದೆ. ರೈತರಿಗೆ ಆರ್ಥಿಕವಾಗಿ ಸದೃಢ ಮಾಡಲು ಈ ಹೊಸ ತಳಿ ಪರಿಚಯಿಸಲಾಗುತ್ತಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಸಿ ಕುರಿ ವರ್ಷಕ್ಕೆ ಒಮ್ಮೆ ಕೇವಲ ಒಂದು ಮರಿ ಹಾಕುತ್ತದೆ. ಆದರೆ ಸುವರ್ಣ ನಾರಿ ಹೊಸ ತಳಿಯು ವರ್ಷಕ್ಕೆರಡು ಬಾರಿ ಮರಿ ಹಾಕಲಿದೆ. ಒಂದು ಬಾರಿಗೆ ಎರಡು ಅಥವಾ ಮೂರು ಮರಿಗಳನ್ನು ಹಾಕುತ್ತದೆ. ಹೊಸ ತಳಿಗಾಗಿ ಸರ್ಕಾರ ಈಗಾಗಲೇ 1 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಇದನ್ನು ಸುಮಾರು 5 ಸಾವಿರ ಕುರಿಗಾಹಿಗಳಿಗೆ ಕೊಡಲಾಗುವುದು ಎಂದರು.

ಸೊಸೈಟಿಗಳ ಮೂಲಕ ಮಾಂಸ ಮಾರಾಟ ಮಾಡುವ ಯೋಜನೆ ಜಾರಿಗೆ ತರಲಾಗುತ್ತಿದ್ದು, ಈಗಾಗಲೇ ಹಾವೇರಿ ಮತ್ತಿತರ ಕಡೆ ಪ್ರತ್ಯೇಕ ಅಂಗಡಿ ತೆರೆದು ಸಾರ್ವಜನಿಕರಿಗೆ ಸ್ವಚ್ಛ ಹಾಗೂ ತಾಜಾ ಕುರಿ ಮಾಸ ಒದಗಿಸಲಾಗುತ್ತಿದೆ. ಇದರಿಂದ ರೈತರಿಗೂ ಹೆಚ್ಚಿನ ಲಾಭ ಸಿಗಲಿದೆ. ಜಾನುವಾರು ವಿಮೆಗಾಗಿ ನೂತನ ಆ್ಯಪ್ ಸೃಷ್ಟಿಸಿದ್ದು, ಇಲಾಖೆ ಆಯುಕ್ತರು ಹಾಗೂ ಕಾರ್ಯದಶರ್ಿ ಜತೆ ಚಚರ್ಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು. ಇದಕ್ಕಾಗಿ ಎಲ್ಲ ಅಧಿಕಾರಿಗಳಿಗೆ ಕಂಪ್ಯೂಟರ್ ನೀಡಲಾಗುವುದು ಎಂದು ಹೇಳಿದರು.

ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ರವೀಂದ್ರ ಭೂರೆ, ಅಧಿಕಾರಿಗಳಾದ ಡಾ.ಗೌತಮ ಅರಳಿ, ಸಿದ್ದಪ್ಪ ಪಾಟೀಲ್, ಚಂದ್ರಶೇಖರ ಪಾಟೀಲ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಡಾ.ಶೇಷಪ್ಪ ಇತರರಿದ್ದರು.