ರಾಹುಲ್​ಗೆ ರಕ್ತ ಪತ್ರ ರವಾನೆ: ಸಂಪುಟದಲ್ಲಿ ಪ್ರಾತಿನಿಧ್ಯಕ್ಕೆ ಆಗ್ರಹ

ಬೀದರ್: ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಶಾಸಕ ಎಂ.ಬಿ. ಪಾಟೀಲ್ ಅವರಿಗೆ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಾಟೀಲ್ ಅಭಿಮಾನಿ, ಲಿಂಗಾಯತ ಸಮನ್ವಯ ಸಮಿತಿ ಯುವ ಮುಖಂಡರೊಬ್ಬರು ತಮ್ಮ ರಕ್ತದಲ್ಲಿ ಪತ್ರ ಬರೆದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರವಾನಿಸಿದ್ದಾರೆ.

ಬಸವರಾಜ ಭತಮುರ್ಗ ಶನಿವಾರ ತಮ್ಮ ರಕ್ತದಿಂದ ಪತ್ರ ಬರೆದು ಎಐಸಿಸಿ ಕಚೇರಿಗೆ ಫ್ಯಾಕ್ಸ್ ಮೂಲಕ ರವಾನಿಸಿ, ನಂತರ ಪೋಸ್ಟ್ ಮಾಡಿದ್ದಾರೆ.

ಎಂ.ಬಿ. ಪಾಟೀಲ್ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ಮುಖಂಡರು. ಸಮಾಜದ ಅಭಿವೃದ್ಧಿಗಾಗಿ ಅವರ ಶ್ರಮ ಅಪಾರ. ರಾಜ್ಯದ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಲಿಂಗಾಯತ ಸಮುದಾಯದ ಶಾಸಕರನ್ನು ಸರ್ಕಾರದಲ್ಲಿ ಕಡೆಗಣಿಸಲಾಗಿದೆ. ಲಿಂಗಾಯತ ಸಮಾಜದ ಬೆರಳೆಣಿಕೆಯಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ರಾಜ್ಯದಲ್ಲಿ 1.50 ಕೋಟಿ ಜನಸಂಖ್ಯೆಯ ಲಿಂಗಾಯತ ಸಮಾಜಕ್ಕೆ ಸಂಪುಟದಲ್ಲಿ ಮೊದಲ ಆದ್ಯತೆ ನೀಡಬೇಕು. ಎಂ.ಬಿ. ಪಾಟೀಲ್ ಅವರಿಗೆ ಉಪ ಮುಖ್ಯಮಂತ್ರಿ ಮಾಡುವ ಜತೆಗೆ ಸಮಾಜದ 9 ಶಾಸಕರನ್ನು ಮಂತ್ರಿ ಮಾಡಿ ಸಾಮಾಜಿಕ ನ್ಯಾಯ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು  ಎಚ್ಚರಿಸಲಾಗಿದೆ.

ಲಿಂಗಾಯತ ಸಮಾಜಕ್ಕಾಗಿ ಎಂ.ಬಿ.ಪಾಟೀಲ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ನೀಡದೆ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಎಚ್ಚೆತ್ತು ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಹೋರಾಟ ಶುರುವಾಗುತ್ತದೆ.
-ಬಸವರಾಜ ಭತಮುರ್ಗ, ಲಿಂಗಾಯತ ಯುವ ಮುಖಂಡ

Leave a Reply

Your email address will not be published. Required fields are marked *