ಅಕ್ರಮ ಸಾರಾಯಿ ಮಾರಾಟ ತಡೆಗೆ ಕ್ರಮ

ಬಸವಕಲ್ಯಾಣ: ಕೋಹಿನೂರ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಭರವಸೆ ನೀಡಿದರು.

ಕೋಹಿನೂರದಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅರ್ಜಿ ಮತ್ತು ಬೇಡಿಕೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ನಿಮ್ಮೆಲ್ಲರ ಬೇಡಿಕೆ ಇತ್ಯರ್ಥ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತಿದ್ದು, ಸಾರಾಯಿ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಕೆಲ ಮಹಿಳೆಯರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಮಳೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಜನರಿಗೆ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಕಾಡದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿತ ಅಧಿಕಾರಿ ಮತ್ತು ಪಿಡಿಒಗಳಿಗೆ ಡಿಸಿ ಸೂಚಿಸಿದರು.

ಗ್ರಾಮದಲ್ಲಿ ಕಳ್ಳತನ ಪ್ರಕರಣ ನಡೆಯುತ್ತಿವೆ. ಕೋಹಿನೂರ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲ. ಹತ್ತರಗಾ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲ ಸೇರಿ ಹಲವು ಸಮಸ್ಯೆಗಳನ್ನು ಜನರು ಮುಂದಿಟ್ಟರು. ಕೋಹಿನೂರ ಆಸ್ಪತ್ರೆಗೆ ರೆಗುಲರ್ ವೈದ್ಯರ ನೇಮಕ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಡಾ.ಮಹಾದೇವ, ಕಳವು ಪ್ರಕರಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಸತಿ ಯೋಜನೆ ಅಡಿ ಅರ್ಹರಿಗೆ ಮನೆ, ಬಿಪಿಎಲ್ ಕಾರ್ಡ್ ಇತರ ಸಮಸ್ಯೆಗಳ ಕುರಿತು ಜನರ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಸಭೆಯಲ್ಲಿ ಸಲ್ಲಿಕೆಯಾದ ಎಲ್ಲ ಅರ್ಜಿ ಗಳನ್ನು ಪರಿಶೀಲಿಸಿ ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.

ಶಾಸಕ ಬಿ.ನಾರಾಯಣರಾವ ಮಾತನಾಡಿ, ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ ಗಂಗವಾರ ಪ್ರಾಸ್ತಾವಿಕ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇಂಥ ಮಹತ್ವದ ಸಭೆ ಆಯೋಜಿಸಲಾಗಿದೆ. ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದರೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ್, ಪ್ರಮುಖರಾದ ಶಿವಶರಣಪ್ಪ ಸಂತಾಜಿ, ಧನರಾಜ ಫಡೆ ಲಾಡವಂತಿ, ಸರಸ್ವತಿ ಪಾಟೀಲ್, ಸರಜೋಳಗಾದ ಜೈಭೀಮ ಕಾಂಬಳೆ, ಹತ್ತರಗಾದ ದತ್ತು ಜಮಾದಾರ, ರಾಜಪ್ಪ ಹಂದ್ರಾಳೆ, ದಿಲೀಪ ಜಮಾದಾರ, ಚಂದ್ರಕಾಂತ ಬಿಲಗುಂದಿ, ರಾಮ ವಲ್ಲದ ಇತರರು ಮಾತನಾಡಿ ಸಮಸ್ಯೆಗಳನ್ನು ಮುಂದಿಟ್ಟರು.

ತಹಸೀಲ್ದಾರ್ ಜಗನ್ನಾಥರೆಡ್ಡಿ ಸ್ವಾಗತಿಸಿದರು. ಪ್ರಾಚಾರ್ಯ ರಮೇಶ ಬೆಜಗಂ ನಿರೂಪಣೆ ಮಾಡಿದರು. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಗಳು ಸಭೆಯಲ್ಲಿದ್ದರು.