ಸಾಮೂಹಿಕ ಗಣೇಶ ವಿಸರ್ಜನೆ ಇಂದು

ಬೀದರ್: ಕಳೆದ ಗುರುವಾರ ನಗರದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ವಿಘ್ನ ನಿವಾರಕನ ಸಾಮೂಹಿಕ ವಿಸರ್ಜನೆ ಸೋಮವಾರ ಶೃದ್ಧೆ, ಭಕ್ತಿ ಜತೆಗೆ ಸಂಭ್ರಮದಿಂದ ನಡೆಯಲಿದೆ.

ವಿವಿಧ ಗಣೇಶ ಮಂಡಳದವರು ವಿಸರ್ಜನಾ ಮೆರವಣಿಗೆ ಅದ್ದೂರಿ ನಡೆಸುವ ಸಿದ್ಧತೆ ಮಾಡಿಕೊಂಡರೆ, ಈ ಪ್ರಕ್ರಿಯೆ ಸಂಪೂರ್ಣ ಶಾಂತ ಹಾಗೂ ಸುವ್ಯವಸ್ಥಿತ ನಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಭರಪೂರ ತಯಾರಿ ಮಾಡಿಕೊಂಡಿದೆ.

ವಿವಿಧ ಬಡಾವಣೆಗಳಿಂದ ಮಧ್ಯಾಹ್ನದಿಂದ ಅಲಂಕೃತ ವಾಹನಗಳಲ್ಲಿ ಮೆರವಣಿಗೆಗಳು ಹೊರಡಲಿವೆ. ನಗರದಲ್ಲಿ ಪ್ರತಿಷ್ಠಾಪಿಸಿರುವ 170ಕ್ಕೂ ಹೆಚ್ಚು ಗಣೇಶಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಸಂಜೆ ಶುರುವಾಗುವ ಮೆರವಣಿಗೆ ಮಂಗಳವಾರ ಬೆಳಗ್ಗಿನ ಜಾವದಲ್ಲಿ ಮುಗಿಯಲಿದೆ.

ಡಿಜೆ ಸೌಂಡ್ ಸಿಸ್ಟಮ್, ಆಕರ್ಷಕ ಅಲಂಕಾರ, ಎಲ್ಇಡಿ ಲೈಟಿಂಗ್ ಸೇರಿದಂತೆ ಮೆರವಣಿಗೆಗೆ ಸಾಕಷ್ಟು ಮೆರಗು ನೀಡುವಲ್ಲಿ ಆಯಾ ಮಂಡಳದವರು ಪ್ರಯತ್ನಿಸುತ್ತಿದ್ದಾರೆ. ಮೆರವಣಿಗೆ ನಂತರ ಬಹುತೇಕ ಗಣೇಶಗಳ ವಿಸರ್ಜನೆ ಚಾಂಬೋಳ ಹತ್ತಿರದ ಕಂದಗೂಳ ಸಮೀಪದ ಮಾಂಜ್ರಾ ಸೇತುವೆ ಹತ್ತಿರ ನಡೆಯಲಿದೆ. ಪ್ರತಿ ವರ್ಷ ಕೌಠಾ ಹತ್ತಿರದ ಮಾಂಜ್ರಾ ನದಿಯಲ್ಲಿ ನಡೆಯುತ್ತಿತ್ತು. ಈ ವರ್ಷ ಮಂಜ್ರಾ ನದಿ ಸೇತುವೆ ಶಿಥಿಲವಾಗಿದ್ದರಿಂದ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ ಈ ಸಲ ಕಂದಗೂಳ ಸಮೀಪದ ನದಿಯಲ್ಲಿ ನಡೆಯಲಿದೆ. ಇದಕ್ಕಾಗಿ ಸೇತುವೆ ಮೇಲೆ ವಿದ್ಯುತ್ ದೀಪದ ಅಳವಡಿಕೆ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿ ಅಗ್ನಿಶಾಮಕ ತಂಡ ಸಹ ನಿಯೋಜಿಸಲಾಗುತ್ತಿದೆ.

ಸಂಪ್ರದಾಯದಂತೆ ನಗರದ ಗವಾನ್ ಚೌಕ್ ಹತ್ತಿರ ರಾಮಮಂದಿರ ಗಣೇಶನಿಗೆ ಜಿಲ್ಲಾಡಳಿತದಿಂದ ಪೂಜೆ ನಡೆಸುವುದರೊಂದಿಗೆ ಮೆರವಣಿಗೆಗೆ ಚಾಲನೆ ಸಿಗಲಿದೆ. ಎಲ್ಲ ಮೆರವಣಿಗೆಗೆ ಚೌಬಾರಾ ಮೇಲೆ ಹಾಕುವ ಪೆಂಡಾಲದಿಂದ ಅದ್ದೂರಿ ಸ್ವಾಗತ ನೀಡಲಾಗುವುದು. ಇದಕ್ಕಾಗಿ ಗಣೇಶ ಮಹಾಮಂಡಳ ಸಿದ್ಧತೆ ಮಾಡಿಕೊಂಡಿದೆ.

ಉದ್ಘಾಟನೆ: ಸಂಜೆ 5.30ಕ್ಕೆ ರಾಮಮಂದಿರ ಗಣೇಶನಿಗೆ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ, ಎಸ್ಪಿ ಟಿ. ಶ್ರೀಧರ, ಜಿಪಂ ಸಿಇಒ ಡಾ.ಸೆಲ್ವಮಣಿ ಆಡಳಿತದ ಪರವಾಗಿ ಪೂಜೆ ನೆರವೇರಿಸಿ ಚಾಲನೆ ಕೊಡುವರು. ಚೌಬಾರದಿಂದ ಎಲ್ಲ ಗಣೇಶ ಮಂಡಳಿಗೆ ಮಹಾ ಮಂಡಳದಿಂದ ಸ್ವಾಗತಿಸಲಾಗುವುದು. ಐತಿಹಾಸಿಕ ಸ್ಮಾರಕ ಚೌಬಾರದಲ್ಲಿ ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ವಿಸರ್ಜನೆ ಮೆರವಣಿಗೆ ಉದ್ಘಾಟಿಸುವರು. ಸಚಿವ ರಾಜಶೇಖರ ಪಾಟೀಲ್, ಸಂಸದ ಭಗವಂತ ಖೂಬಾ ಸೇರಿದಂತೆ ಶಾಸಕರು, ಚುನಾಯಿತ ಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಗಣೇಶ ಮಹಾಮಂಡಳ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಗಾದಗಿ, ಪ್ರಧಾನ ಕಾರ್ಯದಶರ್ಿ ಬಾಬು ವಾಲಿ ತಿಳಿಸಿದ್ದಾರೆ.