ಎಫ್ಪಿಎಐ ವಿಕಲ್ಪ ಯೋಜನೆಗೆ ಚಾಲನೆ

ಬೀದರ್: ಭಾರತೀಯ ಕುಟುಂಬ ಯೋಜನಾ ಸಂಘ(ಎಫ್ಪಿಎಐ) ಜಾರಿಗೆ ತಂದಿರುವ ವಿಕಲ್ಪ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು. ಅಷ್ಟೂರ್ ಹತ್ತಿರದ ಸಾಲು ಗುಂಬಕ್ ಪರಿಸರದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಜಿಪಂ ಸಿಇಒ ಡಾ. ಸೆಲ್ವಮಣಿ ಉದ್ಘಾಟಿಸಿದರು.

ಗ್ರಾಮೀಣ ಜನರಲ್ಲಿ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಜತೆಗೆ ಇನ್ನಷ್ಟು ಉಚಿತ ಆರೋಗ್ಯ ತಪಾಸಣೆ ಸೇವೆ ನೀಡಲು ವಿಕಲ್ಪ ಯೋಜನೆ ಜಾರಿಗೆ ತರಲಾಗಿದೆ. ಎಫ್ಪಿಎಐ ಭಾರತದಲ್ಲಿ ಕುಟುಂಬ ಯೋಜನೆ ಚಳವಳಿ ಪ್ರಾರಂಭಿಸಿದ ಮೊದಲ ಸಂಸ್ಥೆಯಾಗಿದೆ. ಈ ಸಂಸ್ಥೆ ದೇಶದ ಆಯ್ದ 8 ರಾಜ್ಯಗಳಲ್ಲಿ ವಿಕಲ್ಪ ಎಂಬ ಹೊಸ ಯೋಜನೆ ಅನುಷ್ಠಾನಗೊಳಿಸಿದೆ. ಇದರಲ್ಲಿ ರಾಜ್ಯದ ಬೀದರ್ ಶಾಖೆ ಒಂದಾಗಿರುವುದು ವಿಶೇಷ.

ಎಫ್ಪಿಎಐ ಮಾಜಿ ಉಪಾಧ್ಯಕ್ಷೆ ಪ್ರೊ.ಪೂಣರ್ಿಮಾ ಮಾತನಾಡಿ, ಎಫ್ಪಿಎಐ ಕೇಂದ್ರ ಸಮಿತಿಯು ದೇಶದ ಆಯ್ದ ಸಂಘಗಳನ್ನು ಮೌಲ್ಯಾಧಾರಿತ ಸಮಗ್ರ ಸುರಕ್ಷಿತ ಗರ್ಭಪಾತ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆ ನೀಡುವ ವಿಕಲ್ಪ (ವ್ಯಾಲ್ಯೂ ಇಂಟಿಗ್ರೇಟೆಡ್ ಕಾಂಪ್ರಿಹೆನ್ಸಿವ್ ಅಬೋರ್ಷನ್ ಲಿಂಕ್ಡ್ ಪ್ರೊಜೆಕ್ಟ್) ಯೋಜನೆಗೆ ಆಯ್ಕೆ ಮಾಡಿದೆ. ಇದರಲ್ಲಿ ಬೀದರ್ ಶಾಖೆ ಸೇರಿರುವುದು ವಿಶೇಷ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಬೀದರ್ ಶಾಖೆ ಅಧ್ಯಕ್ಷ ಪೆಂಟಾರೆಡ್ಡಿ ಪಾಟೀಲ್ ಮಾತನಾಡಿ, ಅನಗತ್ಯ ಜನನ ನಿಯಂತ್ರಣ, ತಾಯಿ ಮರಣ ಪ್ರಮಾಣ ಕಡಿಮೆ ಮಾಡುವುದು ಯೋಜನೆ ಉದ್ದೇಶವಾಗಿದೆ ಎಂದು ಹೇಳಿದರು.

ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಗ್ರಾಪಂ ಅಧ್ಯಕ್ಷ ಮಾಧವರಾವ ಪಾಟೀಲ್ ಮಾತನಾಡಿದರು. ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ಡಾ.ದೀಪಾ ಖಂಡ್ರೆ ಇತರರಿದ್ದರು. ಇದಕ್ಕೂ ಮುನ್ನ ಅಷ್ಟೂರ್ ಗ್ರಾಮದಿಂದ ಗುಂಬಜ್ವರೆಗೆ ಜನಜಾಗೃತಿ ಜಾಥಾ ನಡೆಯಿತು.