ಗ್ರಾಹಕರ ಸಾಲಕ್ಕೆ ವಿಮೆ ಭದ್ರತೆ

ವಿಜಯವಾಣಿ ಸುದ್ದಿಜಾಲ ಬೀದರ್
ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಗ್ರಾಹಕರಿಗೆ ಜೀವ ವಿಮಾ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಎಕ್ಸೈಡ್ ಜೀವ ವಿಮಾ ಕಂಪನಿ ಜಂಟಿ ಒಪ್ಪಂದ ಮಾಡಿಕೊಂಡು ಒಡಂಬಡಿಕೆಗೆ ಸಹಿ ಹಾಕಿವೆ.

ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ರಾಷ್ಟ್ರದಲ್ಲಿ ತನ್ನದೇ ಹೆಸರು ಮಾಡಿ ಮುನ್ನಡೆಯುತ್ತಿದೆ. ಗ್ರಾಹಕರಿಗೆ ಜೀವ ವಿಮಾ ಸೌಲಭ್ಯ ಒದಗಿಸುವ ಮಹತ್ವದ ಯೋಜನೆ ಇದಾಗಿದೆ. ಗ್ರಾಹಕರು ಸಾಲಗಾರರಾಗಿದ್ದು, ಮೃತರಾದಲ್ಲಿ ಅವರ ಕುಟುಂಬಕ್ಕೆ ಸಾಲ ಭಾರವಾಗದಂತೆ ಗ್ರಾಹಕರು ಹೊಂದಿದ ಸಾಲದ ಹೊರಬಾಕಿ ಮೊತ್ತ ಗ್ರಾಹಕರು ಮಾಡಿಸಿದ ಜೀವ ವಿಮಾದಿಂದ ಬಂದ ಕ್ಲೇಮ್ ಮೊತ್ತದಲ್ಲಿ ಬ್ಯಾಂಕ್ ತನ್ನ ಸಾಲ ಮೊತ್ತ ಮರು ಪಾವತಿಸಿಕೊಂಡು ಉಳಿದ ಹಣ ಗ್ರಾಹಕರ ಉಳಿತಾಯ ಖಾತೆಗೆ ಜಮೆ ಮಾಡುತ್ತದೆ ಎಂದರು.

ಎಕ್ಸೈಡ್ ಜೀವ ವಿಮಾ ಕಂಪನಿ ಉಪಾಧ್ಯಕ್ಷ ರಮಣಕುಮಾರ ದತ್ತ ಮಾತನಾಡಿ, ಡಿಸಿಸಿ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿದೆ ಎಂಬ ಕಾರಣಕ್ಕೆ ಬ್ಯಾಂಕ್ನೊಂದಿಗೆ ಒಟ್ಟುಗೂಡಿ ವಿಮಾ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಬ್ಯಾಂಕಿನ ಗ್ರಾಹಕರಿಗೆ ಆಥರ್ಿಕ ಭದ್ರತೆ ನೀಡಲು ನಮ್ಮ ಕಂಪನಿ ಕೆಲಸ ಮಾಡಲು ಮುಂದಾಗಿರುವುದು ಖುಷಿ ತಂದಿದೆ ಎಂದು ಹೇಳಿದರು.

ವಿಮಾ ಕಂಪನಿ ಪ್ರಧಾನ ವ್ಯವಸ್ಥಾಪಕ ಗಣೇಶ, ಸಂಪನ್ಮೂಲ ವ್ಯಕ್ತಿ ರೋಹಿತ ಭಟ್ಟ, ಉಪ ಪ್ರಧಾನ ವ್ಯವಸ್ಥಾಪಕ ಫಣಿ, ಮಲ್ಲಣಗೌಡ ಪಾಟೀಲ್, ರಮೇಶ, ಬ್ಯಾಂಕ್ ನಿರ್ದೇಶಕರಾದ ರಾಚಪ್ಪ ಪಾಟೀಲ್, ಅಬ್ದುಲ್ ಸಲೀಮ್, ವಿಜಯಕುಮಾರ ಪಾಟೀಲ್ ಗಾದಗಿ, ಬಸವರಾಜ ಹೆಬ್ಬಾಳೆ, ಪರಮೇಶ್ವರ ಮುಗಟೆ, ಸಂಗಮೇಶ ಪಾಟೀಲ್, ಸಿಇಒ ಮಹಾಜನ ಮಲ್ಲಿಕಾರ್ಜುನ, ಜಿಎಂಗಳಾದ ವಿಠಲರೆಡ್ಡಿ ಎಡಮಲ್ಲೆ, ಚನ್ನಬಸಯ್ಯಾ ಸ್ವಾಮಿ ಇತರರಿದ್ದರು. ಉಮಾದೇವಿ ಚಿಲ್ಲರ್ಗೆ ನಿರೂಪಣೆ ಮಾಡಿದರು.