ಎಚ್1ಎನ್1 ಹತೋಟಿಗೆ ಅಗತ್ಯ ಕ್ರಮ

ಬೀದರ್: ಎಚ್1ಎನ್1 ಕಾಯಿಲೆಗೆ ಹೆದರಬೇಡಿ. ಔಷಧಿ ಸೇರಿ ಚಿಕಿತ್ಸೆ ಲಭ್ಯವಿದೆ. ರೋಗದ ಲಕ್ಷಣ ಕಂಡ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರು ಜಿಲ್ಲಾ ಹಾಗೂ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಶಂಕಿತ ಎಚ್1ಎನ್1 ಸೋಂಕಿನಿಂದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರೋಗದ ಹತೋಟಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಸಂಚಾಲನಾ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಎಚ್1ಎನ್1 ಕಾಯಿಲೆ ಲಕ್ಷಣ, ಹರಡುವ ವಿಧಾನ, ಚಿಕಿತ್ಸೆ ಸೇರಿ ಮುನ್ನೆಚ್ಚರಿಕೆ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾಯಿಲೆ ಬಗ್ಗೆ ಜನರಲ್ಲಿ ವ್ಯಾಪಕ ಪ್ರಚಾರ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಚಿತ್ರಮಂದಿರಗಳಲ್ಲಿ ವೀಡಿಯೋ ತುಣುಕು ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧ ಲಭ್ಯ ಇರುವಂತೆ ನೋಡಿಕೊಳ್ಳಿ. ಸಾಧ್ಯವಾದರೆ ಸಹಾಯವಾಣಿ ತೆರೆಯುವ ವ್ಯವಸ್ಥೆ ಮಾಡಿ ಎಂದು ನಿರ್ದೇಶನ ನೀಡಿದರು.

ಇಂಥ ಕಾಯಿಲೆಗೆ ಮಕ್ಕಳು ಮತ್ತು ಮಹಿಳೆಯರು ತುತ್ತಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕತರ್ೆಯರಿಗೆ ತಿಳಿಸಿ, ಅವರ ಮೂಲಕ ಹಳ್ಳಿಗಳಲ್ಲಿ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಕಾಯಿಲೆಗೆ ತುತ್ತಾದವರಿಗೆ ತುರ್ತು ಚಿಕಿತ್ಸೆ ಒದಗಿಸಲು ಅನುಕೂಲ ಸೇರಿ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ 108 ಆಂಬುಲೆನ್ಸ್ಗಳ ತಪಾಸಣೆ ಮಾಡಿ. ಸರಿಯಾದ ಸಮಯಕ್ಕೆ ವಾಹನ ಚಾಲಕರು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಎಚ್1ಎನ್1 ಕಾಯಿಲೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಸಹಕಾರ ನೀಡಲಿದೆ. ಹಣಕ್ಕೆ ಯಾವುದೇ ಕೊರತೆ ಇಲ್ಲ. ಎಲ್ಲ ಕ್ರಮಗಳನ್ನು ತ್ವರಿತಗತಿಯಲ್ಲಿ ನಡೆಸಿ ಎಂದು ಡಿಸಿ ಮಹಾದೇವ ಹೇಳಿದರು.

ಜಿಪಂ ಸಿಇಒ ಮಹಾಂತೇಶ ಬೀಳಗಿ, ಡಿಎಚ್ಒ ಡಾ.ಎಂ.ಎ. ಜಬ್ಬಾರ್, ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಸಭೆಯಲ್ಲಿದ್ದರು.