ಕನಕದಾಸ ಜಯಂತಿ ಸಿದ್ಧತೆ ಸೂಚನೆ

ಬೀದರ್: 26ರಂದು ಆಚರಿಸುವ ಭಕ್ತ ಶ್ರೇಷ್ಠ ಕನಕದಾಸ ಜಯಂತ್ಯುತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅಧಿಕಾರಿಗಳಿಗೆ ಸೂಚಿಸಿ ವಿವಿಧ ಜವಾಬ್ದಾರಿಗಳನ್ನು ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕನಕದಾಸ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಎಲ್ಲ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳಲ್ಲಿ ಬೆಳಗ್ಗೆ 10ಕ್ಕೆ ಕನಕದಾಸ ಭಾವಚಿತ್ರಕ್ಕೆ ಪೂಜೆ, ಡಿಸಿ ಕಚೇರಿಯಲ್ಲಿ 11.30ಕ್ಕೆ ಪೂಜೆ ನಡೆಯಲಿದೆ. ಬಳಿಕ ಬೊಮ್ಮಗೊಂಡೇಶ್ವರ ಸರ್ಕಲ್ನಿಂದ ಮೆರವಣಿಗೆಗೆ ಚಾಲನೆ ಸಿಗಲಿದೆ. ರಂಗಮಂದಿರದಲ್ಲಿ ಮಧ್ಯಾಹ್ನ 2ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಅಂದು ಎಲ್ಲ ಶಾಲಾ ಕಾಲೇಜುಗಳಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಹಾಗೂ ಕನಕದಾಸರ ಜೀವನಚರಿತ್ರೆ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಡಿಸಿ, ಮೆರವಣಿಗೆಯಲ್ಲಿ 2 ಕಲಾ ತಂಡ ಹಾಗೂ ರಂಗಮಂದಿರ ಕಾರ್ಯಕ್ರಮದಲ್ಲಿ ದಾಸರ ಪದಗಳ ಹಾಡಿಗೆ ವ್ಯವಸ್ಥೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ರಾಜಶೇಖರ ವಟಗೆ ಅವರಿಗೆ ಸೂಚಿಸಿದರು.

ಕನಕದಾಸರ ಭಾವಚಿತ್ರ ಅಚ್ಚುಕಟ್ಟಾದ ವಾಹನದಲ್ಲಿ ಅಲಂಕರಿಸಿ ಬೊಮ್ಮಗೊಂಡೇಶ್ವರ ವೃತ್ತದ ಹತ್ತಿರ ಕಳಿಸಬೇಕು. ಎಲ್ಲ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು. ರಂಗಮಂದಿರದಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದು ನಗರಸಭೆ ಆಯುಕ್ತ ಮನೋಹರ ಅವರಿಗೆ ನಿರ್ದೇಶನ ನೀಡಿದರು.

ಗ್ರಾಪಂ ಮತ್ತು ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಮಾಜದ ಮುಖಂಡರು ಕೋರಿದರು. ಎಲ್ಲ ಗ್ರಾಪಂಗಳಲ್ಲಿ ಕಡ್ಡಾಯ ಬೆಳಗ್ಗೆ 9ಕ್ಕೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವಂತೆ ಎಲ್ಲ ಪಿಡಿಒಗಳಿಗೆ ಸುತ್ತೋಲೆ ಮೂಲಕ ತಿಳಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಕನಕದಾಸರ ತತ್ವ, ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾಧನೆ ಮಾಡುತ್ತಿರುವ ಮಹನಿಯರನ್ನು ಸನ್ಮಾನಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಪಂ ಅಧ್ಯಕ್ಷೆ ಭಾರತಬಾಯಿ, ಅಪರ ಡಿಸಿ ರುದ್ರೇಶ ಗಾಳಿ, ಮುಖಂಡರಾದ ಅಮೃತರಾವ ಚಿಮಕೋಡ, ಮಲ್ಲಿಕಾರ್ಜುನ ಬಿರಾದಾರ, ಮಾಳಪ್ಪ ಅಡಸಾರೆ, ವಿಜಯಕುಮಾರ ಸೋನಾರೆ, ಲಕ್ಷ್ಮಣ ಮೇತ್ರೆ, ತುಕಾರಾಮ ಚಿಮಕೋಡೆ, ಕೆ.ಡಿ. ಗಣೇಶ ಇತರರಿದ್ದರು.