Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಸಂಘಟನೆ ತಂತ್ರ, ಗೆಲುವೊಂದೇ ಯಾತ್ರಾ ಮಂತ್ರ

Friday, 10.08.2018, 3:02 AM       No Comments

ಬೀದರ್: ಲೋಕಸಭಾ ಚುನಾವಣೆ ತಯಾರಿ, ನಗರ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರ ಹಾಗೂ ಸಂಘಟನೆ ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ವಿಧಾನಸಭಾ ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗುರುವಾರ ಬೀದರ್​ನಿಂದ ಪ್ರವಾಸ ಆರಂಭಿಸಿದ್ದಾರೆ. ಈ ಮೂಲಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬೀದರ್ ಆನಂತರ ಕಲಬುರಗಿಯಲ್ಲಿ ಪ್ರವಾಸ ಕೈಗೊಂಡ ಅವರು, ಮುಖಂಡರು/ಕಾರ್ಯಕರ್ತರೊಂದಿಗೆ ಸರಣಿ ಸಭೆ ಹಾಗೂ ಸಮಾಲೋಚನೆ ನಡೆಸಿ ಮುಂಬರುವ ಚುನಾವಣೆ ಸಮರ್ಥವಾಗಿ ಎದುರಿಸುವ ಕಾರ್ಯತಂತ್ರಗಳನ್ನು ರೂಪಿಸಿದರು. ಹಿಂದಿನ ಕಾಂಗ್ರೆಸ್ ಹಾಗೂ ಈಗಿನ ಮೈತ್ರಿ ಸರ್ಕಾರದ ಆಡಳಿತ ವೈಫಲ್ಯ, ನುಡಿದಂತೆ ನಡೆದ ತತ್ವಕ್ಕೆ ನೀಡಿರುವ ತಿಲಾಂಜಲಿ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ಹೋರಾಟ ನಡೆಸುವಂತೆ ಸೂಚಿಸಿದರು.

ವಿಜಯವಾಣಿ-ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಬಿಎಸ್​ವೈ, ದೇಶದ ಹಿತದಿಂದ ಮತ್ತೆ ಮೋದಿ ಪ್ರಧಾನಿ ಆಗಬೇಕೆಂಬುದು ಎಲ್ಲರ ಆಶಯ. ಹೀಗಾಗಿ ಕರ್ನಾಟಕದ 28 ಸ್ಥಾನಗಳಲ್ಲಿ ಕನಿಷ್ಠ 23ರಲ್ಲಿ ಗೆಲ್ಲುವ ಮೂಲಕ ಮೋದಿ ಅವರಿಗೆ ದೊಡ್ಡ ಕೊಡುಗೆ ನೀಡುವ ಗುರಿ ನಮ್ಮದು. ರಾಜ್ಯದೆಲ್ಲೆಡೆ ಪಕ್ಷದ ಪರ ಉತ್ತಮ ವಾತಾವರಣವಿದ್ದು, ನಮ್ಮ ಲೋಕಸಭೆ ವಿಜನ್-23 ಸಾಕಾರಗೊಳ್ಳುವುದು ಖಚಿತ. ಇಡೀ ವಿಶ್ವ ಮೋದಿ ಸಾಧನೆಯನ್ನು ನಿಬ್ಬೆರಗಾಗಿ ನೋಡುತ್ತಿದೆ. ಹೀಗಾಗಿ ವಿಪಕ್ಷಗಳು ಅದೆಷ್ಟೇ ಒಗ್ಗಟ್ಟಿನ ಮಂತ್ರ ಪಠಿಸಿದರೂ ಮೋದಿ ಸುನಾಮಿ ಎದುರು ನಿಲ್ಲಲಾರವು ಎಂದರು.

ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಸ್ಥಿತಿಗತಿ ಅವಲೋಕಿ ಸಲಿದ್ದೇನೆ. ಬರುವ ದಿನಗಳಲ್ಲಿ ಅಮಿತ್ ಷಾ ಸಹ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ಈಗ ಕವಲು ದಾರಿಯಲ್ಲಿದ್ದು, ಲೋಕಸಭಾ ಸಮರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೂ ಹೆಣಗಾಡಲಿದೆ. ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳು ಬಿಜೆಪಿಮಯವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಸಾಲಮನ್ನಾ ವಿಷಯದಲ್ಲಿ ಸರ್ಕಾರವೇ ಗೊಂದಲದಲ್ಲಿದೆ. ದಿನಕ್ಕೊಂದು ಭಿನ್ನ ಹೇಳಿಕೆ ಬರುತ್ತಿವೆ. ಇಂದು, ನಾಳೆ ಎನ್ನುತ್ತ ರೈತರೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ. ಸಹಕಾರ ಸಂಸ್ಥೆ ಸಾಲಮನ್ನಾ ಯಾವಾಗ? ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಬಗ್ಗೆ ನಿಲುವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ


ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಿಜೆಪಿಗೆ ಲಾಭ

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಲಾಭವಾಗಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು. ಪ್ರತಿ ಹಂತದಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಮುಖಂಡರು ಅಧಿಕಾರದ ಲಾಲಸೆಗೆ ಜೆಡಿಎಸ್ ಜತೆ ಕೈಜೋಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರಿದರೆ ಖಂಡಿತ ಬಿಜೆಪಿಗೆ ಲಾಭ ತಂದುಕೊಡಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಂಗ್ರೆಸ್-ಜೆಡಿಎಸ್​ನ ಯಾವ ಶಾಸಕರು ಬಿಜೆಪಿ ಸಂಪರ್ಕದಲ್ಲಿಲ್ಲ. ಯಾರನ್ನಾದರೂ ಸೆಳೆದು ಅಧಿಕಾರ ಮಾಡಬೇಕೆಂಬ ಹಂಬಲವೂ ನಮಗಿಲ್ಲ. ಅಂಥ ಪ್ರಯತ್ನವನ್ನೂ ಮಾಡಲ್ಲ. ಉಭಯ ಪಕ್ಷಗಳ ಗೊಂದಲದಿಂದಲೇ ಸರ್ಕಾರಕ್ಕೆ ದೊಡ್ಡ ಹೊಡೆತ ಬೀಳಲಿದ್ದು, ಅಲ್ಲಿವರೆಗೆ ಕಾದು ನೋಡುತ್ತೇವೆ ಎಂದರು.

ಸರ್ಕಾರ ಆರ್ಥಿಕ ದಿವಾಳಿ

ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಅಭಿವೃದ್ಧಿ ಕೆಲಸಗಳಿಗೆಲ್ಲ ಗರ ಬಡಿದಿದೆ. ಲೋಕೋಪಯೋಗಿ, ಜಲಸಂಪನ್ಮೂಲ ಸೇರಿ ವಿವಿಧ ಇಲಾಖೆಗೆ ಸಹಸ್ರಾರು ಕೋಟಿ ರೂ. ಬಿಲ್ ಪಾವತಿ ಪೆಂಡಿಂಗ್ ಬಿದ್ದಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಫಲಾನುಭವಿಗಳಿಗೂ ವೇತನ ಸಿಗುತ್ತಿಲ್ಲ. ಅರ್ಥ ವ್ಯವಸ್ಥೆಯೇ ಸ್ತಬ್ಧವಾಗಿದೆ. ಹಣಕಾಸು ಖಾತೆ ಹೊಂದಿರುವ ಸಿಎಂ ಕುಮಾರಸ್ವಾಮಿ ಕೂಡಲೇ ಆರ್ಥಿಕ ಪರಿಸ್ಥಿತಿ ವಾಸ್ತವಿಕತೆಯನ್ನು ರಾಜ್ಯದ ಜನರ ಮುಂದಿಡಲು ಶ್ವೇತಪತ್ರ ಹೊರಡಿಸಬೇಕೆಂದು ಯಡಿಯೂರಪ್ಪ ಆಗ್ರಹಿಸಿದರು.

ಜಗದೀಶ ಶೆಟ್ಟರ್ ಪ್ರವಾಸ ಮುಂದಕ್ಕೆ

ಒಟ್ಟು ಮೂರು ತಂಡಗಳಲ್ಲಿ ಪ್ರವಾಸ ಮಾಡಬೇಕಿದ್ದ ಬಿಜೆಪಿ ತನ್ನ ಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡಿದೆ. ಶಿವಮೊಗ್ಗದಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್ ತಂಡ ಗುರುವಾರ ಪ್ರವಾಸ ಆರಂಭಿಸಲಿಲ್ಲ. ವಿವಿಧೆಡೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಘೋಷಣೆಯಾಗಿವೆ. ನಮ್ಮ ಪ್ರವಾಸ ಯೋಜನೆಯಾದಾಗ ಚುನಾವಣೆ ಘೋಷಣೆ ಆಗಿರಲಿಲ್ಲ. ಯೋಜನೆ ಬದಲಾಗಿದ್ದು, ಚುನಾವಣೆ ನಂತರ ಮತ್ತೆ ನಡೆಯಲಿದೆ ಎಂದು ನವದೆಹಲಿಯಲ್ಲಿದ್ದ ಜಗದೀಶ ಶೆಟ್ಟರ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಮಂತ್ರಿಗಳಲ್ಲ, ವರ್ಗಾವಣೆ ಕಮಿಷನ್ ಏಜೆಂಟ್​ಗಳು!

ಮೈಸೂರು: ರಾಜ್ಯ ಸರ್ಕಾರದ ಮಂತ್ರಿಗಳಿಂದು ವರ್ಗಾವಣೆಯ ಕಮಿಷನ್ ಏಜೆಂಟ್​ಗಳಾಗಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಗುರುವಾರ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ವರ್ಗಾವಣೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ಆಗಿಲ್ಲ. ಮಂತ್ರಿಗಳು ವರ್ಗಾವಣೆಯ ಕಮಿಷನ್ ಏಜೆಂಟ್​ಗಳಾಗಿದ್ದು, ಮುಖ್ಯಮಂತ್ರಿಗಳು ಕಣ್ಮುಂಚಿ ಕುಳಿತಿರುವುದು ಒಳ್ಳೆಯದಲ್ಲ. ಎಲ್ಲ ಹಂತದ ಅಧಿಕಾರಿಗಳ ವರ್ಗಾವಣೆಗೆ ಹಣ ಪಡೆಯಲಾಗುತ್ತಿದೆ. ಅಧಿಕಾರಿಗಳಿಗೆ ಯಾವ ಕ್ಷಣದಲ್ಲಿ ಈ ಸರ್ಕಾರ ಬೀಳುತ್ತೊ, ಯಾವ ಕ್ಷಣದಲ್ಲಿ ನಮ್ಮ ವರ್ಗಾವಣೆ ಆಗುತ್ತೊ ಎಂಬ ಆತಂಕದಲ್ಲಿದ್ದಾರೆ ಎಂದರು. ಕೈ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನ ಎಂದಿರುವ ಡಿ.ಕೆ.ಶಿವಕುಮಾರ್ ಮತ್ತು ದಿನೇಶ್ ಗುಂಡೂರಾವ್ ಆರೋಪಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕರೆದ ಕೂಡಲೇ ನಮ್ಮ ಜತೆ ಬರುವಷ್ಟು ಕಾಂಗ್ರೆಸ್ ಶಾಸಕರು ದುರ್ಬಲರಾ? ದಿನೇಶ್​ಗೆ ಅವರ ಶಾಸಕರ ಮೇಲೆ ನಂಬಿಕೆಯಿಲ್ಲ ಎಂದರು.

ಸರ್ಕಾರ ಕುಂಟುತ್ತಿದ್ದು, ಯಾವಾಗ ಬೀಳುತ್ತೋ ಗೊತ್ತಿಲ್ಲ

ಚಾಮರಾಜನಗರ: ಲೋಕಸಭಾ ಚುನಾವಣೆ ತನಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿಯುವುದಿಲ್ಲ. ಎರಡು ಪಕ್ಷಗಳವರಲ್ಲಿ ಅಸಮಾಧಾನಗಳಿದ್ದು, ಸರ್ಕಾರ ಕುಂಟುತ್ತ ಸಾಗಿದ್ದು ಯಾವಾಗ ಬೀಳಲಿದೆ ಗೊತ್ತಿಲ್ಲ. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಶ್ವವೇ ಪ್ರಧಾನಿ ಮೋದಿಯನ್ನು ಒಪ್ಪಿಕೊಳ್ಳುತ್ತಿದೆ. ಪಾಕಿಸ್ತಾನ ಮತ್ತು ಸಿದ್ದರಾಮಯ್ಯ ಮಾತ್ರ ಒಪ್ಪುತ್ತಿಲ್ಲ ಎಂದು ಕುಟುಕಿದರು. ಅಹಿಂದ ವರ್ಗಕ್ಕೆ ನ್ಯಾಯ ಕೊಡಿಸುವುದಾಗಿ ಸಿದ್ದರಾಮಯ್ಯ ಓಡಾಡಿದ್ದರು. ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳದ ಅಭಿವೃದ್ಧಿಗೆ ಹಣ ನೀಡಲಿಲ್ಲ. ಧರ್ಮ ಒಡೆದು ವೀರಶೈವ ಲಿಂಗಾಯತರನ್ನು ಪ್ರತ್ಯೇಕಗೊಳಿಸುವ ಕೆಲಸ ಮಾಡಿದರು. 38 ಸ್ಥಾನ ಗೆದ್ದ ಜೆಡಿಎಸ್​ಗೆ ಬೆಂಬಲ ನೀಡಿ ಸರ್ಕಾರ ರಚಿಸಿದ ಇವರಿಗೆ ನಾಚಿಕೆ ಆಗಬೇಕು ಎಂದು ಜರಿದರು.

Leave a Reply

Your email address will not be published. Required fields are marked *

Back To Top