ಸ್ತ್ರೀಗೆ ಸಮಾನತೆ ಕಲ್ಪಿಸಿಕೊಟ್ಟ ಬಸವಣ್ಣ

ಬಸವಕಲ್ಯಾಣ: ಸ್ತ್ರೀಯರಿಗೆ ಸರಿಸಮಾನವಾದ ಹಕ್ಕುಗಳನ್ನು ಕಲ್ಪಿಸಿದ ಮಹಾನುಭಾವರು ವಿಶ್ವಗುರು ಬಸವಣ್ಣನವರು. 12ನೇ ಶತಮಾನದಲ್ಲೇ ಅನುಭವ ಮಂಟಪ ಮೂಲಕ ಮಹಿಳೆಯರಿಗೆ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಸಮಾನತೆ ಕಲ್ಪಿಸಲಾಗಿತ್ತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಮನಗೊಳಿ ಹೇಳಿದರು.

ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಶರಣ ವಿಜಯೋತ್ಸವ, ನಾಡಹಬ್ಬ, ಹುತಾತ್ಮ ದಿನ ನಿಮಿತ್ತ ನಗರದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ವಿಷಯ ಕುರಿತ ಗೋಷ್ಠಿ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎಂಬುದನ್ನು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿ ಯಾವುದೇ ಪರೀಕ್ಷೆ ಫಲಿತಾಂಶದಲ್ಲಿ ಮಹಿಳೆಯರದ್ದೇ ಮೇಲುಗೈ. ಸ್ತ್ರೀಯರಿಗೆ ಸ್ಥಾನಮಾನ ಕೊಡುವಲ್ಲಿ, ಅವರ ಸಾಧನೆಗೆ ಸ್ಫೂತರ್ಿ ನೀಡಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.

ನೇತೃತ್ವ ವಹಿಸಿದ್ದ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, 36 ಶರಣೆಯರು ಏಕಕಾಲಕ್ಕೆ ವಚನ ಬರೆದದ್ದು ಕಲ್ಯಾಣ ಹೊರತುಪಡಿಸಿದರೆ ವಿಶ್ವದ ಇತಿಹಾಸದಲ್ಲಿ ಕಾಣಲಾಗದು. ಜ್ಞಾನ ಬೆಳೆದರೆ ಭಯ ಹೋಗುತ್ತದೆ. ವಚನದಿಂದ ಜ್ಞಾನ ಬೆಳೆಯುತ್ತದೆ. ಮಹಿಳೆಯರೆಲ್ಲರೂ ವೈಚಾರಿಕ, ವೈಜ್ಞಾನಿಕ ಜ್ಞಾನ ಬೆಳೆಸಿಕೊಳ್ಳಬೇಕು. ಆತ್ಮಸ್ಥೆರ್ಯದಿಂದ ಬದುಕಬೇಕು ಎಂದು ಸಲಹೆ ನೀಡಿದರು.

ಕಲಬುರಗಿ ಗೋದುತಾಯಿ ಕಾಲೇಜು ಪ್ರಾಚಾರ್ಯ ಡಾ.ನೀಲಾಂಬಿಕಾ ಶೇರಿಕಾರ ವಿಶೇಷ ಉಪನ್ಯಾಸ ನೀಡಿ, ಹೆಣ್ಣು ಮಾಯೆಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಸಿದ್ಧರಾಮೇಶ್ವರರು ಹೇಳಿದ್ದಾರೆ. ಹೆಣ್ಣಿನ ಆತ್ಮವಿಶ್ವಾಸಕ್ಕೆ ತಲೆಬಾಗಲೇಬೇಕು. ರಾಜನನ್ನು ಧಿಕ್ಕರಿಸಿ ಕಲ್ಯಾಣದತ್ತ ಬಂದ 12ನೇ ಶತಮಾನದ ಮಹಾದೇವಿಯಕ್ಕ ನಿದರ್ಶನ ಎಂದರು.

ಮಹಿಳಾ ಕದಳಿ ವೇದಿಕೆಯ ಪುಷ್ಪಾವತಿ ಧಾರವಾಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಪ್ರತಿಭಾ ಕುಲಕರ್ಣಿ, ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಚಂದ್ರಯ್ಯ ಬಿಪಿ, ವಕೀಲರ ಸಂಘದ ಅಧ್ಯಕ್ಷ ಭೀಮಾಶಂಕರ ಕುರಕೋಟೆ, ಶಕುಂತಲಾ ಹೊಳಕುಂದೆ, ಚಂದ್ರಲಾ ದೇಶಪಾಂಡೆ, ಶ್ರೀದೇವಿ ಕಾಕನಾಳೆ, ನೀಲಾವತಿ ವಟಗೆ, ಮಲ್ಲಮ್ಮ ನಾಗನಕೇರೆ ಇತರರಿದ್ದರು. ಕದಳಿ ವೇದಿಕೆ ಅಧ್ಯಕ್ಷ ಜ್ಯೋತಿ ಶಿವಣ್ಣಕರ್ ಸ್ವಾಗತಿಸಿದರು. ಡಾ.ಸಂಗೀತಾ ಮಂಠಾಳೆ ನಿರೂಪಣೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ್ ಪ್ರಾಯೋಜಕತ್ವದಲ್ಲಿ ನಾಗರತ್ನ ನಾಗರಾಜ ಹಡಗಲಿ ಧಾರವಾಡ ತಂಡ ಪ್ರದರ್ಶಿಸಿದ ವಚನ ನೃತ್ಯ ಗಮನ ಸೆಳೆಯಿತು. ಆಶಾರಾಣಿ ಶೆಟಗಾರ ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು.