ಶರಣರ ಕ್ರಾಂತಿ ಇತಿಹಾಸ ತಿಳಿದುಕೊಳ್ಳಿ

ಬಸವಕಲ್ಯಾಣ: ಜಗತ್ತಿನ ಯಾವ ಸಾಹಿತ್ಯವೂ ವಚನ ಸಾಹಿತ್ಯದಷ್ಟು ಗಟ್ಟಿಯಾಗಿಲ್ಲ. ಇದನ್ನು ಅರಿತುಕೊಳ್ಳಬೇಕಿದೆ ಎಂದು ಸಾಹಿತಿ, ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.

ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಬಿಕೆಡಿಬಿ ಸಭಾಭವನದಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ, ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆ ನಿಮಿತ್ತ ಮಂಗಳವಾರ ನಡೆದ ಆಸೆಯೆಂಬುದು ಭವದ ಬೀಜ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಬಸವಾದಿ ಶರಣರ ಕ್ರಾಂತಿಯ ಇತಿಹಾಸವನ್ನು ಇಂದಿನ ಲಿಂಗಾಯತರು ತಿಳಿದುಕೊಳ್ಳಬೇಕಾಗಿದೆ. 12ನೇ ಶತಮಾನದಲ್ಲಿ ಗುರು ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಲಿಂಗಾಯತ ಧರ್ಮವು ಹರಳಯ್ಯ-ಮಧುವರಸರ ತ್ಯಾಗ-ಬಲಿದಾನದ ತಳಹದಿಯ ಮೇಲೆ ರೂಪುಗೊಂಡಿದೆ ಎಂದರು.

ಶರಣೆ ಕಾಳವ್ವೆ ಹೇಳುತ್ತಾರೆ, ಆಸೆಯೆಂಬುದು ಭವದ ಬೀಜ. ದುರಾಸೆಯಿಂದ ವ್ಯಕ್ತಿ-ಸಮಾಜ-ದೇಶ ಹಾಳಾಗುತ್ತಿದೆ. ಆಸೆಯೇ ಮಾಯೆಯಾಗಿದೆ. ಶರಣರು ಆತ್ಮ ಸಾಕ್ಷಿಯಾಗಿ ಬದುಕಿದರು. ಕಾಯಕ-ದಾಸೋಹ-ಪ್ರಸಾದ ಸಂತೃಪ್ತಿಯ ಜೀವನ ನಮ್ಮದಾಗಬೇಕಾದರೆ ಸ್ವಾವಲಂಬನೆ, ಸ್ವಾಭಿಮಾನಬೇಕು. ಕಾಯಕವೇ ಪೂಜೆಯಾಗಬೇಕು ಎಂದರು.

ನೇತೃತ್ವ ವಹಿಸಿದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿ, ಒಳ್ಳೆಯದು ಮಾಡಬೇಕೆಂಬ ಸದಾಶೆ ಇರಬೇಕು, ಆದರೆ ಕೆಟ್ಟದ್ದು ಮಾಡುವ ದುರಾಸೆ ಇರಬಾರದು ಯಾರೊಬ್ಬರಲ್ಲಿಯೂ ಇರಬಾರದು. ಶರಣರ ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ದುರಾಶೆಯಿಂದ ಮುಕ್ತಿ ಪಡೆದು ಸಾರ್ಥಕ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.

ಖೇಳಗಿ ಶ್ರೀ ವಿಶ್ವನಾಥ ಮರಿದೇವರು ಮಾತನಾಡಿ, ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಸಮಾನತೆ ತಂದವರು ವಿಶ್ವಗುರು ಬಸವಣ್ಣನವರು. ವಿವೇಕಾನಂದರಿಗೆ ಬಸವಣ್ಣನವರ ವಚನ ಸಿಕ್ಕಿದರೆ ಅವರು ಬಸವಭಕ್ತರಾಗಿ ಶತಮಾನಗಳ ಹಿಂದೆಯೇ ಜಗತ್ತಿಗೆ ಬಸವ ಸಂದೇಶ ಸಾರುತಿದ್ದರು. ನಮಗಿಂದು ಬೇಕಾಗಿರುವುದು ಬಸವ ಸಂಸ್ಕೃತಿ, ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು.

ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಬಸವಾದಿ ಶರಣರ ತ್ಯಾಗ ಬಲಿದಾನದಿಂದ ಕಲ್ಯಾಣವು ಅವಿಮುಕ್ತ ಕ್ಷೇತ್ರವಾಗಿದೆ. ಜಗತ್ತಿನ ಜನ ಕಲ್ಯಾಣಕ್ಕೆ ಬರುವ ಕಾಲ ಸನ್ನಿಹಿತವಾಗಿದೆ. 12ನೇ ಶತಮಾನವು 21ನೇ ಶತಮಾನಕ್ಕೆ ಬಸವತತ್ವ ಪುನರುತ್ಥಾನ ಮಾಡಲಿದೆ. ಶರಣರು ಸತ್ಯಕ್ಕಾಗಿ. ಸಮಾನತೆಗಾಗಿ ಬದುಕಿದವರು. ಭವ ಎಂದರೆ ಮರೆವಿನ ಬದುಕು, ಭಕ್ತ ಎಂದರೆ ಅರಿವಿನ ಬದುಕು. ಆಸೆ ತೊರೆದು ಭಕ್ತರಾಗಬೇಕು ಎಂದು ಹೇಳಿದರು.

ತಾಪಂ ಅಧ್ಯಕ್ಷೆ ಅಧ್ಯಕ್ಷ ಯಶೋಧಾ ನೀಲಕಂಠ ರಾಠೋಡ ಉದ್ಘಾಟಿಸಿದರು. ಬಿಡಿಪಿಸಿ ನಿರ್ದೇಶಕ ಸುಭಾಷ ಹೊಳಕುಂದೆ, ಜಗನ್ನಾಥ ಖೂಬಾ, ಶರಣ ಸಾಹಿತ್ಯ ಪರಿಸತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ, ಪತ್ರಕರ್ತ ಸಂಘದ ತಾಲುಕಾಧ್ಯಕ್ಷ ವಿರಶೆಟ್ಟಿ ಮಲಶೆಟ್ಟಿ , ಪ್ರಮುಖರಾದ ಪ್ರದೀಪ ವಾತಡೆ, ಮಲ್ಲಪ್ಪ ಧಭಾಲೆ, ಚಂದ್ರಕಾಂತ ಜಾಧವ, ಪ್ರದೀಪ ವಾತಡೆ, ಶಂಭುಲಿಂಗ ವಾಲ್ದೊಡ್ಡಿ, ಶಂಕ್ರಣ್ಣಾ ಕೊಳಕೂರ, ಉಪಸ್ಥಿತರಿದ್ದರು.

ಜಯಶ್ರೀ ಬಿರಾದರ ಸ್ವಾಗತಿಸಿದರು. ಗುರುಪ್ರಸಾದ ಪಂಡಿತ ನಿರೂಪಿದರು. ಜಗನ್ನಾಥ ನಾನಕೇರಿ ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕನಕಾಚಲ ನಾಟ್ಯ ಸಂಘ ಕನಕಾಚಲ ಅವರಿಂದ ಜರುಗಿದ ವೀರ ಗಣಾಚಾರಿ ಮಡಿವಾಳ ಮಾಚಿದೇವ ನಾಟಕ ಸೇರಿದ ಜನರ ಗಮನ ಸೆಳೆಯಿತು.