ಬೀಡಿಯಲ್ಲಿ ಮದ್ಯದಂಗಡಿ ಮುಂದುವರಿಸಲು ಆಗ್ರಹ

ಬೆಳಗಾವಿ: ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಸರ್ಕಾರದ ಪರವಾನಗಿ ಪಡೆದುಕೊಂಡಿರುವ ಮದ್ಯದ ಅಂಗಡಿ ಮುಂದುವರಿಸುವಂತೆ ಆಗ್ರಹಿಸಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರೀ ಸಾಯಿ ವರ್ತರ ಸಂಘ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೀಡಿ ಗ್ರಾಮದಲ್ಲಿ ಎಂಆರ್‌ಪಿಗಿಂತ ದುಪ್ಪಟ್ಟು ದರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಯಲು ಹಾಗೂ ಕಳ್ಳಬಟ್ಟಿ ಸಾರಾಯಿ ಮಾರಾಟವನ್ನು ಸಂಪೂರ್ಣ ಮಟ್ಟ ಹಾಕುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ, ಜಿಲ್ಲಾಡಳಿತ ಪರವಾನಗಿ ನೀಡಿ ಮದ್ಯದ ಅಂಗಡಿ ಆರಂಭಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತಿದೆ. ಜನರಿಗೆ ಎಂಆರ್ ದರದಲ್ಲಿ ಮದ್ಯ ಸಿಗುತ್ತಿದೆ. ಜತೆಗೆ ಸುತ್ತಮುತ್ತಲಿನ ಹೋಟೆಲ್, ಬೀದಿ ಬದಿ ವ್ಯಾಪಾರಿಗಳು ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಮದ್ಯದ ಅಂಗಡಿ ಬಂದ್ ಮಾಡಬಾರದು ಎಂದು ಮನವಿ ಮೂಲಕ ವಿನಂತಿಸಿದರು.

ನಗರ ಪ್ರದೇಶದಲ್ಲಿನ ಕೆಲ ಎನ್‌ಜಿಒ ನೇತೃತ್ವದಲ್ಲಿ ಮಹಿಳಾ ಸಂಘಟನೆಗಳು ಅಕ್ರಮ ಮದ್ಯ ಮಾರಾಟಗಾರರ ಪರವಾಗಿ ಸರ್ಕಾರದ ಪರವಾನಗಿ ಪಡೆದುಕೊಂಡಿರುವ ಮದ್ಯದ ಅಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ, ಅಕ್ರಮ ಮದ್ಯ ಮಾರಾಟಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ದೂರಿದರು.

ಈಗಾಗಲೇ ಮದ್ಯದ ಅಂಗಡಿ ಬಂದ್ ಮಾಡಿದ್ದರಿಂದ ಸಾರಾಯಿ ಕುಡಿಯಲು ಹೋಗಿ ರಸ್ತೆ ಅಪಘಾತದಲ್ಲಿ ಜನರು ಮೃತಪಟ್ಟಿದ್ದಾರೆ. ಕೆಲವರು ತಮ್ಮ ಲಾಭಕ್ಕಾಗಿ ಮದ್ಯದ ಅಂಗಡಿಯನ್ನು ಬಂದ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಜಿಲ್ಲಾಡಳಿತವು ವಾಸ್ತವ ಪರಿಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಜರುಗಿಸಬೇಕು. ಅಕ್ರಮ ಮದ್ಯದ ಮಾರಾಟಗಾರರನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಐ.ಎಂ.ಶಿರಗಾಪುರಮಠ, ಐ.ಜಿ.ಕೊಳ್ಳಿ, ಜಾಕೀರ್‌ಹುಸೇನ್, ಮಾರುತಿ ಮನೋಳಕರ್ ಇತರರು ಇದ್ದರು.

Leave a Reply

Your email address will not be published. Required fields are marked *