ನವದೆಹಲಿ: ಸಂಸತ್ತಿನಲ್ಲಿ ಬುಧವಾರವೂ ಆಡಳಿತ ಹಾಗೂ ವಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ವಾಗ್ದಾಳಿ ಮುಂದುವರಿದಿದ್ದು, ಉಭಯಸದನಗಳೂ ಇದಕ್ಕೆ ಬಲಿಯಾದವು. ಭಾರತ ವಿರೋಧಿ ನಿಲುವು ಹೊಂದಿರುವ ಅಮೆರಿಕ ಮೂಲದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್ ಜತೆ ನೆಹರು-ಗಾಂಧಿ ಕುಟುಂಬದ ಸಂಬಂಧದ ವಿಚಾರವಾಗಿ ವಿಪಕ್ಷಗಳ ವಿರುದ್ಧ ಬಿಜೆಪಿ ವಾಗ್ದಾಳಿ ತೀವ್ರಗೊಳಿಸಿದರೆ, ರಾಜ್ಯಸಭಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಆಗ್ರಹಿಸಿ ವಿಪಕ್ಷಗಳು ತಮ್ಮ ಪಟ್ಟು ಬಿಗಿಗೊಳಿಸಿದವು. ಇದರಿಂದ ಉಂಟಾದ ಗದ್ದಲಗಳ ಪರಿಣಾಮವಾಗಿ ಎರಡೂ ಸದನಗಳು ಮುಂದೂಡಲ್ಪಟ್ಟವು.
ಫೋರಂ ಆಫ್ ಡೆಮಾಕ್ರಟಿಕ್ ಲೀಡರ್ಸ್- ಏಷ್ಯಾ ಪೆಸಿಫಿಕ್(ಎಫ್ಡಿಎಲ್-ಎಪಿ)ನಲ್ಲಿನ ಸೋನಿಯಾ ಗಾಂಧಿ ಅವರ ಸಹ-ಅಧ್ಯಕ್ಷೆ ಪಾತ್ರವನ್ನೂ ಮೀರಿ ಸೊರೊಸ್ ಜತೆಗಿನ ಸಂಬಂಧ ವಿಸ್ತರಿಸಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿತು. ಬಿಜೆಪಿ ಆರೋಪವನ್ನು ನಿರಾಕರಿಸಿದ ಕಾಂಗ್ರೆಸ್, ಉದ್ಯಮಿ ಗೌತಮ್ ಅದಾನಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸರ್ಕಾರ ಮತ್ತೊಂದು ದೇಶದೊಂದಿಗಿನ ಭಾರತದ ಸಂಬಂಧ ವನ್ನು ಪಣಕ್ಕಿಡುತ್ತಿದೆ ಎಂದು ವಾಗ್ದಾಳಿ ನಡೆಸಿತು.
ಸದನವೇ ನಿಯಮಬಾಹಿರ!: ರಾಜ್ಯಸಭೆ ಅಧ್ಯಕ್ಷರಾದ ಜಗದೀಪ್ ಧನಕರ್ ಅವರು ಸರ್ಕಾರದ ಪಕ್ಷಪಾತಿಯಾಗಿದ್ದು, ಸದನವು ನಿಯಮಗಳ ಬದಲು ರಾಜಕೀಯವಾಗಿ ನಡೆಯುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಧನಕರ್ ಅವರ ವಿರುದ್ಧದ ಅವಿಶ್ವಾಸ ಮಂಡನೆ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ‘ಉಪ ರಾಷ್ಟ್ರಪತಿ ರಾಜಕೀಯದಲ್ಲಿ ತೊಡಗಿಲ್ಲವಾದ್ದರಿಂದ 1952ರಿಂದ ಯಾವುದೇ ನಿರ್ಣಯವನ್ನು ಅನುಚ್ಛೇದ 67ರಡಿ ತಂದಿರಲಿಲ್ಲ. ಆದರೆ ಈಗ ಸದನ ನಿಯಮಗಳ ಬದಲು ರಾಜಕೀಯವಾಗಿ ನಡೆಯುತ್ತಿದ್ದು, ಸಭಾಧ್ಯಕ್ಷರು ಪಕ್ಷಪಾತದ ವರ್ತನೆ ತೋರುತ್ತಿದ್ದಾರೆ’ ಎಂದರು. ರಾಜ್ಯಸಭಾ ಅಧ್ಯಕ್ಷರ ಕಾರ್ಯವೈಖರಿ ಅವರ ಹುದ್ದೆಯ ಘನತೆಗೆ ವ್ಯತಿರಿಕ್ತವಾಗಿದೆ. ವಿಪಕ್ಷ ನಾಯಕರನ್ನು ಗುರಿಯಾಗಿಸಿಕೊಳ್ಳುತ್ತಿರುವ ಅವರು ಆಗಾಗ ಸರ್ಕಾರವನ್ನು ಹೊಗಳುತ್ತಿದ್ದು, ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದರು. ಸಭಾಧ್ಯಕ್ಷರ ವರ್ತನೆ ದೇಶದ ಘನತೆಗೆ ಹಾನಿ ಮಾಡಿದೆ, ಅವರು ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸ ದುಸ್ಥಿತಿಗೆ ತಂದ ಹಿನ್ನೆಲೆಯಲ್ಲಿ ನಾವು ಆ ನಿರ್ಣಯ ತಳೆಯಬೇಕಾಯಿತು. ಅವರ ವಿರುದ್ಧ ನಮಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲವೇ ರಾಜಕೀಯ ಹೋರಾಟವಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ನಾವು ಒಂದು ಹೆಜ್ಜೆ ಇಟ್ಟಿದ್ದೇವೆ ಎಂದು ದೇಶದ ಜನತೆಗೆ ತಿಳಿಸಬಯಸುತ್ತೇವೆ ಎನ್ನುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಒತ್ತಾಯಿಸಿದ್ದನ್ನು ಖರ್ಗೆ ಸಮರ್ಥಿಸಿಕೊಂಡರು.
ರಕ್ಷಣಾ ಸಚಿವರಿಗೆ ಪುಷ್ಪ-ಧ್ವಜ: ರಕ್ಷಣಾ ಸಚಿವ ರಾಜನಾಥ ಸಿಂಗ್ ಕಾರಿನಲ್ಲಿ ಆಗಮಿಸಿ ಸಂಸತ್ ಭವನಕ್ಕೆ ತೆರಳುತ್ತಿದ್ದಾಗ ಕಾಂಗ್ರೆಸ್ ಸಂಸದರೊಬ್ಬರು ಗುಲಾಬಿ ಹೂವು -ರಾಷ್ಟ್ರಧ್ವಜ ಹಿಡಿದುಕೊಂಡು ಬಳಿಗೆ ಬಂದರೂ ಸಚಿವರು ಅದನ್ನು ನಯವಾಗಿ ನಿರಾಕರಿಸಿದರು. ಬಳಿಕ ರಾಹುಲ್ ಗಾಂಧಿ ಬಳಿಗೆ ಬಂದು ನಗುತ್ತ ಚೆಂಗುಲಾಬಿ ಹಾಗೂ ರಾಷ್ಟ್ರಧ್ವಜ ನೀಡಿದಾಗ ಸ್ವೀಕರಿಸಿದರು.
ರಾಹುಲ್ ಗಾಂಧಿ ಸ್ಪೀಕರ್ ಭೇಟಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಬುಧವಾರ ಭೇಟಿ ಆಗಿದ್ದು, ಸದನದಲ್ಲಿ ಕಾಂಗ್ರೆಸ್ ಹಾಗೂ ತಮ್ಮ ಕುಟುಂಬದ ವಿರುದ್ಧ ಬಿಜೆಪಿ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ತೆಗೆದುಹಾಕುವಂತೆ ಕೋರಿದರು.
ಸಭಾಧ್ಯಕ್ಷರು ಶಾಲೆಯ ಹೆಡ್ ಮಾಸ್ಟರ್ ಥರ ವರ್ತಿಸುತ್ತಿದ್ದು, ಅನುಭವಿ ವಿಪಕ್ಷ ನಾಯಕರಿಗೆ ಪ್ರವಚನ ನೀಡುತ್ತ ಮಾತನಾಡದಂತೆ ತಡೆಯುತ್ತಿದ್ದಾರೆ. ಸದನದಲ್ಲಿನ ಅಡೆತಡೆಗಳಿಗೆ ಅಧ್ಯಕ್ಷರೇ ದೊಡ್ಡ ಕಾರಣ, ಮುಂದಿನ ಬಡ್ತಿಗಾಗಿ ಅವರು ಸರ್ಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ.
| ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಮೂರನೇ ಟೆಸ್ಟ್ ಪಂದ್ಯಕ್ಕೆ ಈತನಿಗೆ ಅವಕಾಶ ಕೊಡಬೇಡಿ; Team ಇಂಡಿಯಾಗೆ ಸಲಹೆ ನೀಡಿದ ಖ್ಯಾತ ಕ್ರಿಕೆಟಿಗ
ಸಾವಿರ ಕೋಟಿ ಗಳಿಕೆ ಕಂಡ Pushpa 2; ವೈರಲ್ ಆಗುತ್ತಿದೆ ಶೇಖಾವತ್ ರೀ ಎಂಟ್ರಿ ವಿಡಿಯೋ