ರಾಂಧವ ಆಡಿಯೋ ಜಾತ್ರೆ

ಶೀರ್ಷಿಕೆಯಿಂದಲೇ ಗಮನಸೆಳೆಯುತ್ತಿರುವ ಸಿನಿಮಾ ‘ರಾಂಧವ’. ‘ಬಿಗ್​ಬಾಸ್’ ಖ್ಯಾತಿಯ ಭುವನ್ ಪೊನ್ನಣ್ಣ ಚೊಚ್ಚಲ ಬಾರಿಗೆ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾದ ಟ್ರೇಲರ್ ಈ ಹಿಂದೆಯೇ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿತ್ತು. ಆನಂತರ ಎರಡು ಹಾಡುಗಳನ್ನೂ ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಚಿತ್ರದ ಅಷ್ಟೂ ಹಾಡುಗಳನ್ನು ಶೀಘ್ರದಲ್ಲೇ ರಿಲೀಸ್ ಮಾಡುವುದಕ್ಕೆ ಪ್ಲಾ್ಯನ್ ರೂಪಿಸಲಾಗಿದೆ. ಗಾಯಕ ಶಶಾಂಕ್ ಶೇಷಗಿರಿ ಈ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ.

‘ಬಿಗ್​ಬಾಸ್’ ಖ್ಯಾತಿಯ ನಟ ಭುವನ್ ಪೊನ್ನಣ್ಣ ಅಭಿನಯದ ‘ರಾಂಧವ’ ಚಿತ್ರ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸಿಕೊಳ್ಳುತ್ತಿದೆ. ಆಗಸ್ಟ್ 9ರಂದು ಬಿಡುಗಡೆಗೆ ಸಜ್ಜಾಗಿರುವ ‘ರಾಂಧವ’ ಚಿತ್ರದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿವೆ. ಇದೀಗ ತಂಡ ಚಿತ್ರದ ಎಲ್ಲ ಹಾಡುಗಳನ್ನು ಕೇಳುಗರ ಮುಂದಿಡಲು ಸಜ್ಜಾಗಿದೆ. ಕೆಲ ದಿನಗಳಲ್ಲೇ ಚಿತ್ರದ ಆಡಿಯೋ ಬಿಡುಗಡೆ ಆಗಲಿದೆ. ವಿಶೇಷವೆಂದರೆ, ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಕನ್ನಡದಲ್ಲಿ ಮಾತ್ರವಲ್ಲದೆ, ಪರಭಾಷೆಯಲ್ಲೂ ಗಾಯಕರಾಗಿ ಖ್ಯಾತಿ ಪಡೆದುಕೊಂಡಿದ್ದಾರೆ ಶಶಾಂಕ್. ಕನ್ನಡದ ‘ರಾಜಕುಮಾರ’, ‘ಮಿ. ಐರಾವತ’, ‘ಯಜಮಾನ’, ‘ಭರ್ಜರಿ’, ‘ಜಗ್ಗು ದಾದ’ ಹೀಗೆ ಸಾಕಷ್ಟು ಸಿನಿಮಾಗಳ ಶೀರ್ಷಿಕೆ ಗೀತೆಗೆ ಧ್ವನಿ ನೀಡಿ ಖ್ಯಾತಿ ಪಡೆದಿರುವ ಶಶಾಂಕ್, 450ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಇದೀಗ ಮೊದಲ ಬಾರಿಗೆ ‘ರಾಂಧವ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿಕೊಂಡಿದ್ದಾರೆ.

ಚಿತ್ರದ ಹಾಡುಗಳ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಸುನೀಲ್ ಆಚಾರ್ಯ, ‘ನಮ್ಮ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಒಂದು ಹಾಡು ಇರುವಂತೆ ಇನ್ನೊಂದು ಹಾಡು ಇಲ್ಲ ಎಂಬುದೇ ವಿಶೇಷ. ಈಗಾಗಲೇ ‘ರಾಂಧವ’ ಟೈಟಲ್ ಟ್ರಾ್ಯಕ್ ರಿಲೀಸ್ ಆಗಿದೆ. ಅದನ್ನು ‘ಭರ್ಜರಿ’ ಚೇತನ್​ಕುಮಾರ್ ಬರೆದಿದ್ದಾರೆ. ಆನಂತರ ಕನ್ನಡ ಕುರಿತಾದ ಒಂದು ಹಾಡನ್ನು ಸಹ ಬಿಡುಗಡೆ ಮಾಡಿದ್ದೇವೆ. ಅದಕ್ಕೆ ಕೇಶವಚಂದ್ರ ಅವರ ಸಾಹಿತ್ಯವಿದೆ. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೆ, ರಾಜ-ರಾಣಿಯ ಹಾಡೊಂದು ಇದೆ. ಅದಕ್ಕೆ ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ಅದು ಕ್ಲಾಸಿಕಲ್ ಆಗಿ ತುಂಬ ಚೆನ್ನಾಗಿ ಮೂಡಿಬಂದಿದೆ. ಅಮ್ಮನ ಕುರಿತ ಒಂದು ಸೆಂಟಿಮೆಂಟ್ ಹಾಡನ್ನು ಗೌಸ್​ಪೀರ್ ಬರೆದಿದ್ದಾರೆ. ಹೀಗೆ ಅನುಭವಿ ಗೀತ ರಚನಾಕಾರರೇ ನಮ್ಮ ಸಿನಿಮಾಕ್ಕೆ ಕೆಲಸ ಮಾಡಿರುವುದು ಬಹಳ ಖುಷಿ ನೀಡಿದೆ’ ಎನ್ನುತ್ತಾರೆ.

ಮೊದಲ ಸಂಗೀತ ನಿರ್ದೇಶನದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳನ್ನು ಶಶಾಂಕ್ ಮಾಡಿದ್ದಾರಂತೆ. 11 ಹೊಸ ಬಗೆಯ ಸಂಗೀತ ಪರಿಕರಗಳನ್ನು ಇಲ್ಲಿ ಬಳಕೆ ಮಾಡಿರುವುದು ಇನ್ನೊಂದು ವಿಶೇಷ. ಅಲ್ಲದೆ, ಸೌಂಡ್

ಮಿಕ್ಸಿಂಗ್​ಗೂ ಪರಿಣಿತರಿಂದಲೇ ಕೆಲಸ ಮಾಡಿಸಲಾಗಿದೆ. ‘ದಕ್ಷಿಣ ಭಾರತದ ದೊಡ್ಡ ದೊಡ್ಡ ಸಿನಿಮಾಗಳಿಗೆ ಕೆಲಸ ಮಾಡಿದ ತಂತ್ರಜ್ಞರೇ ನಮ್ಮ ಚಿತ್ರದ ಶಬ್ಧ ವಿನ್ಯಾಸಕ್ಕೂ ಕೆಲಸ ಮಾಡಿದ್ದಾರೆ. ತಾಂತ್ರಿಕವಾಗಿ ‘ರಾಂಧವ’ ಉತ್ತಮ ಗುಣಮಟ್ಟದಿಂದ ಕೂಡಿದೆ’ ಎನ್ನುತ್ತಾರೆ ಸುನೀಲ್. ಆಗಸ್ಟ್ 9ರಂದು ವಿಶ್ವಾದ್ಯಂತ ತೆರೆಕಾಣಲಿರುವ ಈ ಸಿನಿಮಾದ ವಿತರಣೆ ಹಕ್ಕುಗಳನ್ನು ಜಯಣ್ಣ ಕಂಬೈನ್ಸ್ ಪಡೆದುಕೊಂಡಿದೆ. ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ರಾಂಧವ’ ಚಿತ್ರವನ್ನು ತೆರೆಕಾಣಿಸುವ ಯೋಜನೆ ಚಿತ್ರತಂಡಕ್ಕಿದೆ. ಭುವನ್​ಗೆ

ನಾಯಕಿಯಾಗಿ ಅಪೂರ್ವಾ ಶ್ರೀನಿವಾಸನ್ ನಟಿಸಿದ್ದಾರೆ. ಯಮುನಾ, ವಾಣಿಶ್ರೀ, ಜಹಾಂಗೀರ್ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ. ಭುವನ್​ಗೆ ಇಲ್ಲಿ ಮೂರು ಶೇಡ್​ನ ಪಾತ್ರವಿದೆ. ಒಂದರಲ್ಲಿ ಆಧುನಿಕ ಕಾಲಘಟ್ಟದ ಯುವಕನಾಗಿ ಮಿಂಚಿದರೆ, ಮತ್ತೊಂದರಲ್ಲಿ ರಾಜನ ಪಾತ್ರಧಾರಿಯಾಗಿ ಅಬ್ಬರಿಸಲಿದ್ದಾರೆ. ಆದರೆ, ಮೂರನೇ ಪಾತ್ರ ಹೇಗಿರಲಿದೆ ಎಂಬುದರ ಸಣ್ಣ ಸುಳಿವನ್ನೂ ಚಿತ್ರತಂಡ ನೀಡಿಲ್ಲ. ಸುಕೃತಿ ಚಿತ್ರಾಲಯ ಬ್ಯಾನರ್​ನಲ್ಲಿ ಈ ಸಿನಿಮಾ ಸಿದ್ಧವಾಗಿದ್ದು, ರಾಜಾ ಶಿವ ಶಂಕರ್ ಛಾಯಾಗ್ರಹಣ ಮಾಡಿದ್ದಾರೆ.

Leave a Reply

Your email address will not be published. Required fields are marked *