ಗಾಂಧಿನಗರ: ಅಹಮದಾಬಾದ್ನ ಘಟಲೋದಿಯ ಕ್ಷೇತ್ರದ ಶಾಸಕರಾದ ಭೂಪೇಂದ್ರಭಾಯಿ ಪಟೇಲ್ ಅವರನ್ನು ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಇಂದು ಗಾಂಧಿನಗರದ ಬಿಜೆಪಿ ಕಾರ್ಯಾಲಯ ‘ಕಮಲಂ’ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶನಿವಾರ ನಿಕಟಪೂರ್ವ ಸಿಎಂ ವಿಜಯ್ ರೂಪಾನಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಳ ತೆರವಾಗಿತ್ತು. ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯು ಡಿಸೆಂಬರ್ 2022 ಕ್ಕೆ ನಡೆಯಲಿದ್ದು, 59 ವರ್ಷ ವಯಸ್ಸಿನ ಪಟೇಲ್ ಅವರಿಗೆ 15 ತಿಂಗಳು ಅಧಿಕಾರ ನಡೆಸುವ ಅವಕಾಶವಿದೆ.
ಆಶ್ಚರ್ಯವೆಂದರೆ ಸಿಎಂ ಗಾದಿಗೆ ಅಭ್ಯರ್ಥಿಗಳೆಂದು ಕೇಳಿಬರುತ್ತಿದ್ದ ಹೆಸರುಗಳನ್ನು ಬಿಟ್ಟು ಪಟೇಲ್ ಅವರ ಆಯ್ಕೆಯಾಗಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಶಶಿಕಾಂತ್ ಪಟೇಲ್ ವಿರುದ್ಧ 1 ಲಕ್ಷ 17 ಸಾವಿರ ಮತಗಳ ದಾಖಲೆ ಅಂತರದಲ್ಲಿ ಗೆದ್ದಿದ್ದ ಭೂಪೇಂದ್ರ ಪಟೇಲ್ ಅವರು, ಈವರೆಗೆ ಸಚಿವ ಸಂಪುಟದಲ್ಲೂ ಇರಲಿಲ್ಲ. (ಏಜೆನ್ಸೀಸ್)