ಹರಿಹರ: ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಕೊರತೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರಸಭೆಯ ನಗರೋತ್ಥಾನ ಅನುದಾನದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿ ನಿರತವಾಗಿ ಅಭಿವೃದ್ಧಿ ಮರೆತಿದೆ. ಇದರ ಪರಿಣಾಮ ಹರಿಹರ ಕ್ಷೇತ್ರಕ್ಕೆ ಶಾಸಕರ ಅನುದಾನ ಹೊರತುಪಡಿಸಿ ಬೇರೆ ಯಾವ ಅನುದಾನವು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ ಎನ್ನುವುದು ಇತ್ತೀಚೆಗೆ ಕಾಂಗ್ರೆಸ್ ಶಾಸಕರೊಂದಿಗೆ ಅನೌಪಚಾರಿಕ ಚರ್ಚೆ ಮಾಡುವ ಸಂದರ್ಭ ಗಮನಕ್ಕೆ ಬಂತು. ಆವರಿಗೆ ಈ ಸ್ಥಿತಿಯಾದರೆ ಇನ್ನೂ ನಮ್ಮ ಪಾಡೇನು? ಎನ್ನುವ ಮೂಲಕ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರಾಭಿವೃದ್ಧ್ದಿ ನಿಧಿಯಡಿ 2 ಕೋಟಿ ರೂ. ಅನುದಾನ ಬಂದಿದ್ದು, ಅದರಲ್ಲೇ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ ಎಂದ ಅವರು, ಸಾರ್ವಜನಿಕರ ಒತ್ತಾಯದ ಹಿನ್ನ್ನೆಲೆಯಲ್ಲಿ ನಗರಸಭೆಯಿಂದ ಆಸ್ಪತ್ರೆಗೆ ಹೋಗುವ ರಸ್ತೆಯ ಅಭಿವೃದ್ಧ್ದಿಗಾಗಿ ಭೂಮಿ ಪೂಜೆ ಮಾಡಿದ್ದು, ಶೀಘ್ರ ಉತ್ತಮ ರಸ್ತೆ ನಿರ್ಮಾಣವಾಗಲಿದೆ ಎಂದರು.
ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ ಮಾತನಾಡಿ, ಬಹು ದಿನಗಳಿಂದ ನೆನಗುದ್ದಿಗೆಗೆ ಬಿದ್ದಿದ್ದ ಸಾರ್ವಜನಿಕ ಆಸ್ಪತ್ರೆಯ ರಸ್ತೆಯನ್ನು ನಗರೋತ್ಥಾನ ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಸೇರಿದಂತೆ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ನಗರಸಭಾ ಉಪಾಧ್ಯಕ್ಷ ಎಂ. ಜಂಬಣ್ಣ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ರಸ್ತೆಯು ಸೇರಿದಂತೆ ನಗರದ ಹಲವು ರಸ್ತೆಗಳು ತಗ್ಗು ಗುಂಡಿಗಳಿಂದ ಆವರಿಸಿದ್ದು, ಹಂತ ಹಂತವಾಗಿ ನಗರಸಭೆಯಿಂದ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ, ನಗರಸಭಾ ಸದಸ್ಯ ಬಾಬುಲಾಲ್, ನಗರಸಭೆ ಇಂಜಿನಿಯರ್ ಮಂಜುನಾಥ್, ರೆಹಮಾನ್, ಮಾಜಿ ದೂಡ ಸದಸ್ಯ ರಾಜು ರೊಖಡೆ, ಮುಖಂಡರಾದ ಮಾರುತಿ ಬೇಡರ್, ಮಂಜುನಾಥ್ ಫೈನಾನ್ಸ್, ಸೈಯದ್ ಸನಾವುಲ್ಲಾ ಇತರರಿದ್ದರು.