ಬಣ್ಣಗಳಲ್ಲಿ ಮಿಂದೆದ್ದ ಭೂಲಕ್ಷ್ಮೀ ವರಾಹಸ್ವಾಮಿ ತೇರು

ಯಳಂದೂರು: ಪಟ್ಟಣದಲ್ಲಿ ಬುಧವಾರ ನಡೆದ ಭೂಲಕ್ಷ್ಮೀ ವರಾಹಸ್ವಾಮಿ ರಥೋತ್ಸವದಲ್ಲಿ ಭಕ್ತರು ರಥವನ್ನು ಎಳೆಯುವ ಜತೆಯಲ್ಲಿ ಹೋಳಿಯ ಬಣ್ಣಗಳಲ್ಲಿ ಮಿಂದೆದ್ದು ರಥದ ಸಂಭ್ರಮವನ್ನು ರಂಗೇರಿಸಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೂ ಲಕ್ಷ್ಮೀ ವರಾಹಸ್ವಾಮಿ ದೇಗುಲದಿಂದ ಉತ್ಸವ ಮೂರ್ತಿಯನ್ನು ಬೆಳಗ್ಗೆ 10.59 ಕ್ಕೆ ಮಂಗಳವಾದ್ಯ, ಡೊಳ್ಳುಗಳ ಸಪ್ಪಳದೊಂದಿಗೆ ವಿಶೇಷ ಪೂಜೆಗೈದು ಭಕ್ತರ ಶಂಖನಾದಗಳೊಂದಿಗೆ ತೇರಿಗೇರಿಸಲಾಯಿತು.

ಮನೆಗಳ ಮುಂದೆ ಪೂಜೆ ಸಲ್ಲಿಸುವ ವಿಶೇಷ ವಾಡಿಕೆ: ಈ ತೇರು ದೇಗುಲದಿಂದ ತೆರಳಿ ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆ, ದೊಡ್ಡ ಅಂಗಡಿ ಬೀದಿ ಸುತ್ತಿ ಮತ್ತೆ ದೇಗುಲದ ಸ್ವಸ್ಥಾನ ಸೇರುವ ವಾಡಿಕೆ ಇದೆ. ಹಾಗಾಗಿ ಇಲ್ಲಿರುವ ಮನೆಗಳ ಮುಂದೆ ಮಹಿಳೆಯರು ರಥದಲ್ಲಿರಿಸಿರುವ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದೆ. ಹಾಗಾಗಿ ತೇರು ಸ್ವಸ್ಥಾನ ತಲುಪಲು 2 ಗಂಟೆಗಳನ್ನು ತೆಗೆದುಕೊಂಡಿತು. ಈ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಗ್ರಾಮಗಳು, ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ತೇರಿಗೆ ಹಣ್ಣು, ಹೂವುಗಳನ್ನು ಸಮರ್ಪಿಸಿದರು.

ದೇಗುಲದಲ್ಲೂ ವಿಶೇಷ ಪೂಜೆ: ರಾಜ್ಯದಲ್ಲಿರುವ ಅಪರೂಪದ ಭೂಲಕ್ಷ್ಮೀ ವರಾಹಸ್ವಾಮಿ ದೇಗುಲಗಳಲ್ಲಿ ಯಳಂದೂರು ಪಟ್ಟಣದ ದೇಗುಲವೂ ಒಂದಾಗಿದೆ. ಇಲ್ಲಿಗೆ ಹರಕೆ ಹೊತ್ತು ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಕೆಲ ಭಕ್ತರು ಆಗಮಿಸುವ ವಾಡಿಕೆ ಇದೆ. ತೇರಿನ ನಿಮಿತ್ತ ದೇಗುಲವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವರಾಹಸ್ವಾಮಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಬುಧವಾರ ಬೆಳಿಗ್ಗೆಯಿಂದಲೇ ಹೋಮ, ಹವನ ಪೂಜೆಗಳೂ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳನ್ನು ಮಾಡಲಾಯಿತು.

ಹೋಳಿ ಆಚರಣೆ: ಕೆಲ ಯುವಕರು, ಯುವತಿಯರು ರಥದ ಮುಂಭಾಗ ಪರಸ್ಪರ ಬಣ್ಣವನ್ನು ಆಚರಿಸಿಕೊಳ್ಳುವ ಮೂಲಕ ರಥದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು. ರಥದ ಮುಂಭಾಗದಲ್ಲಿ ಸಾಗಿದ ಯುವಕರ ಗುಂಪು ಬಣ್ಣದ ನೀರಿನಲ್ಲಿ ಮಿಂದೆದ್ದು, ನಾದಸ್ವಾರಕ್ಕೆ ದೇವರ ಕುಣಿತವನ್ನು ಮಾಡುವ ಮೂಲಕ ಗಮನಸೆಳೆಯಿತು.
ರಥದ ವೇಳೆ ಬಿಸಿಲಿನ ಝಳ ಹೆಚ್ಚಿದ್ದರಿಂದ ರಥ ಚಲಿಸುವ ರಸ್ತೆಯುದ್ದಕ್ಕೂ ಟ್ಯಾಂಕರ್ ಮೂಲಕ ನೀರನ್ನು ಸಿಂಪಡಿಸಲಾಯಿತು. ಸುಗಮ ಸಂಚಾರಕ್ಕಾಗಿ ತೇರು ಎಳೆಯುವ ಮುಖ್ಯ ರಸ್ತೆಯ ಸಂಚಾರವನ್ನು ಕೆಲ ಕಾಲ ಏಕಮುಖ ಸಂಚಾರವಾಗಿಸಲಾಗಿತ್ತು. ರಥೋತ್ಸವದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.