ಫೊನಿ ಚಂಡಮಾರುತ ಪೂರ್ವ ಮತ್ತು ನಂತರದಲ್ಲಿ ಭುವನೇಶ್ವರದಲ್ಲಿ ಆಗಿರುವ ಅನಾಹುತ: ನಾಸಾದಿಂದ ಉಪಗ್ರಹ ಚಿತ್ರ

ವಾಷಿಂಗ್ಟನ್​: ಇತ್ತೀಚೆಗೆ ಒಡಿಶಾ ರಾಜ್ಯದಲ್ಲಿ ಭಾರಿ ಅನಾಹುತವನ್ನೇ ಮಾಡಿದ ಫೊನಿ ಚಂಡಮಾರುತ ಅಪ್ಪಳಿಸುವ ಮುನ್ನ ಹಾಗೂ ನಂತರದಲ್ಲಿ ಭುವನೇಶ್ವರದಲ್ಲಿ ಆಗಿರುವ ಅನಾಹುತದ ವಿವರಗಳನ್ನು ಒಳಗೊಂಡ ಉಪಗ್ರಹ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ.

ಭುವನೇಶ್ವರ ಮತ್ತು ಕಟಕ್​ನಲ್ಲಿ ರಾತ್ರಿ ವೇಳೆ ದೀಪಗಳು ಬೆಳಗುತ್ತಿರುವ ಸಮಯದಲ್ಲಿ ಎರಡೂ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ.

ಈ ಚಿತ್ರಗಳನ್ನು ತನ್ನ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿರುವ ನಾಸಾ, ಒಡಿಶಾದಲ್ಲಿ ಭಾರಿ ಹಾನಿಗೊಳಗಾದ ಪ್ರದೇಶದಲ್ಲಿ ಆವರಿಸಿರುವ ಕತ್ತಲನ್ನು ಆಧರಿಸಿ ಚಿತ್ರಗಳನ್ನು ಸಿದ್ಧಪಡಿಸಲಾಗಿದೆ. ಎಡಬದಿಯ ಚಿತ್ರವನ್ನು 2019ರ ಏ.30ರಂದು (ಚಂಡಮಾರುತ ಅಪ್ಪಳಿಸುವ ಮುನ್ನ) ಮತ್ತು 2019ರ ಮೇ 5ರಂದು (ಚಂಡಮಾರುತ ಅಪ್ಪಳಿಸಿದ ಬಳಿಕ) ಬಲಬದಿಯ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಚಂಡಮಾರುತದ ಹಾವಳಿಯಿಂದಾಗಿ ಹಲವು ವಿದ್ಯುತ್​ ಪ್ರಸರಣ ಕೇಂದ್ರಗಳು ಸಂಪೂರ್ಣ ಧ್ವಂಸವಾಗಿವೆ. 1.56 ಲಕ್ಷ ವಿದ್ಯುತ್​ಕಂಬಗಳು ಬಿದ್ದಿವೆ. ಇವೆಲ್ಲವನ್ನೂ ಮರುಸ್ಥಾಪಿಸಿದ ಬಳಿಕ ವಿದ್ಯುತ್​ ಸರಬರಾಜು ಪುನಾರಂಭಿಸಬೇಕಿದೆ ಎಂದು ಹೇಳಿದೆ.

ಫೊನಿ ಚಂಡಮಾರುತ ಮೇ 3ರಂದು ಪುರಿ ಕರಾವಳಿಗೆ ಅಪ್ಪಳಿಸಿತ್ತು. ಇದಕ್ಕೂ ಮುನ್ನ 12 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಜತೆಗೆ, ಶೂನ್ಯ ಸಾವಿನ ಪ್ರಮಾಣವನ್ನು ಸಾಧಿಸಲಾಗಿತ್ತು. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಒಡಿಶಾ ಸರ್ಕಾರ ಕೈಗೊಂಡ ಈ ಕ್ರಮಕ್ಕೆ ವಿಶ್ವಸಂಸ್ಥೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *