ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 4.65 ಕೋಟಿ ರೂ. ಅನುದಾನವನ್ನು ಅದಾನಿ ಸಿಎಸ್‌ಆರ್‌ನಲ್ಲಿ ಮೀಸಲಿಟ್ಟಿದ್ದು, ಹಂತ ಹಂತವಾಗಿ ಗ್ರಾಪಂ ನೀಡುವ ಕ್ರಿಯಾಯೋಜನೆಯಂತೆ ಯೋಜನೆ ಅನುಷ್ಠಾನಕ್ಕೆ ತರುತ್ತಿದೆ ಎಂದು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು.
ಮುದರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅದಾನಿ ಫೌಂಡೇಷನ್ ವತಿಯಿಂದ 17 ಲಕ್ಷ ರೂ. ಮೊತ್ತದ ಮೂಲಸೌಕರ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುದರಂಗಡಿ ಗ್ರಾ.ಪಂ ವ್ಯಾಪ್ತಿಯ ಸಾಂತೂರು ಗ್ರಾಮದ ಕಾಂಜರಕಟ್ಟೆ- ಆಲ್ ಬ್ರಹ್ಮಸ್ಥಾನ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಹಾಗೂ ಪಿಲಾರ್ ಗ್ರಾಮದ ಕಂಕಣಗುತ್ತು ಕೋಡ್ದಬ್ಬು ದೈವಸ್ಥಾನದ ಪ್ರಾಂಗಣಕ್ಕೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.
ಗ್ರಾಪಂ ಅಧ್ಯಕ್ಷೆ ನಮಿತಾ, ಸದಸ್ಯರಾದ ಡೇವಿಡ್ ಡಿಸೋಜ, ರವೀಂದ್ರ ಪ್ರಭು, ಕೋಡ್ದಬ್ಬು ದೈವಸ್ಥಾನ ಸಮಿತಿ ಅಧ್ಯಕ್ಷ ರವೀಶ್ ಶೆಟ್ಟಿ, ಸದಸ್ಯರಾದ ಮೋಹನ್ ಶೆಟ್ಟಿ, ರಮೇಶ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ರಾಮ ಪೂಜಾರಿ, ಪ್ರಕಾಶ ಶೆಟ್ಟಿ, ಹರೀಶ್ ಶೆಟ್ಟಿ, ಅರ್ಚಕ ರಮೇಶ ಮುಖಾರಿ, ಅದಾನಿ ಪವರ್ ಲಿಮಿಟೆಡ್ ಸಂಸ್ಥೆ ಎಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಷನ್‌ನ ಅನುದೀಪ್ ಉಪಸ್ಥಿತರಿದ್ದರು.
ಈಗಾಗಲೇ ಅದಾನಿ ಸಂಸ್ಥೆಯು 4 ಕೋಟಿ ರೂ.ಗಿಂತ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳನ್ನು ಮುದರಂಗಡಿ ಪಂಚಾಯಿತಿ ನೀಡಿರುವ ಕ್ರಿಯಾಯೋಜನೆಯಂತೆ ಕಾರ್ಯರೂಪಕ್ಕೆ ತಂದಿದೆ. 9 ವರ್ಷದಲ್ಲಿ, ಉಡುಪಿ ಉಷ್ಣ ವಿದ್ಯುತ್ ಸ್ಥಾವರ ಅದಾನಿ ತೆಕ್ಕೆಗೆ ಬಂದ ಮೇಲೆ ಸರಾಸರಿ ಪ್ರತಿ ವಾರ್ಷಿಕ ಸಾಲಿನಲ್ಲಿ 4 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೆ ವ್ಯಯಿಸಿದೆ.
-ಕಿಶೋರ್ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕ, ಅದಾನಿ ಸಮೂಹ ಸಂಸ್ಥೆ