ಸಿದ್ದಾಪುರ: ತಾಲೂಕಿನ ಹಲವೆಡೆ ಮಳೆ- ಗಾಳಿಯಿಂದ ಹಾನಿಗೊಳಗಾದ ಸ್ಥಳಕ್ಕೆ ಶಾಸಕ ಭೀಮಣ್ಣ ನಾಯ್ಕ ಭಾನುವಾರ ಭೇಟಿ ನೀಡಿ, ಮನೆ ಕಳೆದುಕೊಂಡವರಿಗೆ ಸರ್ಕಾರದ ಪರಿಹಾರದ ಜತೆಗೆ ವೈಯಕ್ತಿಕ ನೆರವು ನೀಡಿದರು.
ಕಾನಸೂರ ಬಳಿ ಬಸ್ನಿಂದ ಬಿದ್ದು ಮೃತಪಟ್ಟ ಹಂಗಾರಖಂಡದ ಮೋಹನ ದ್ಯಾವಾ ನಾಯ್ಕ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ನಿಡಗೋಡಿನಲ್ಲಿ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ನೆಜ್ಜೂರಿನಲ್ಲಿ ಮನೆ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿ ವೈಯಕ್ತಿಕ ಸಹಾಯ ನೀಡಿ ಮನೆ ಕಳೆದುಕೊಂಡ ಫಲಾನುಭವಿಗೆ ಸರ್ಕಾರದ ಪರಿಹಾರದ ಆದೇಶ ನೀಡಿದರು.
ಅರೆಂದೂರು ಸೇತುವೆ ಬಳಿ ಪ್ರವಾಹದಿಂದ ಮುಳುಗಡೆಯಾದ ಕೃಷಿ ಪ್ರದೇಶ ವೀಕ್ಷಿಸಿ, ನೆರೆ ಇಳಿಯುತ್ತಿದ್ದಂತೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಇಟಗಿ ಗ್ರಾಪಂನ ತಾರಗೋಡ ಹಾಗೂ ಗುಂಡಿಮೂಲೆಗೆ ಭೇಟಿ ನೀಡಿ ಮನೆ ಹಾನಿ ವೀಕ್ಷಿಸಿ ಸರ್ಕಾರದ ಪರಿಹಾರದ ಆದೇಶ ಪ್ರತಿ ಹಾಗೂ ವೈಯಕ್ತಿಕ ಸಹಾಯ ನೀಡಿದರು. ಕ್ಯಾದಗಿ ಗ್ರಾಪಂ ವ್ಯಾಪ್ತಿಯ ಸಶಿಗುಳಿ ಪರಿಶಿಷ್ಟರ ಕೇರಿಯಲ್ಲಿ ಮಳೆಯಿಂದ ಹಾನಿಯಾದ ಮನೆಗಳನ್ನು ಪರಿಶೀಲಿಸಿ ಪರಿಹಾರ ಹಾಗೂ ವೈಯಕ್ತಿಕ ನೆರವು ನೀಡಿದರು. ಹೆಗ್ಗರಣಿ ಗ್ರಾಪಂನ ಉಂಚಳ್ಳಿ, ಮಾಸ್ತಿಬಯ್ಲು, ತಂಡಾಗುಂಡಿ ಗ್ರಾಪಂನ ಹಂದ್ಯಾನೆಮಟ, ಹಿರೇಹದ್ದ, ಜೋಗಿನಮನೆ, ನಿಲ್ಕುಂದ ಗ್ರಾಮ ಪಂಚಾಯಿತಿಯ ಹೊಂಡಗದ್ದೆ, ಅಣಲೆಬೈಲ್ ಅಂಗನವಾಡಿ ವೀಕ್ಷಿಸಿ ಮಳೆಯಿಂದ ಹಾನಿಯಾದ ಸ್ಥಳ ವೀಕ್ಷಿಸಿದರು.
ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಬಿಇಒ ಎಂ.ಎಚ್. ನಾಯ್ಕ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಉಪತಹಸೀಲ್ದಾರ ಡಿ.ಎಂ. ನಾಯ್ಕ, ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಇದ್ದರು.