ಭೀಮಾತೀರದ ಕೊಂಕಣಗಾಂವ ಕರಾಳ ಕಥನ

ಭೀಮಾತೀರದ ಕೊಂಕಣಗಾಂವನಲ್ಲಿ 2017ರ ಅಕ್ಟೋಬರ್ 30ರಂದು ನಡೆದ ಗುಂಡಿನ ದಾಳಿಯಲ್ಲಿ ಹಂತಕ ಧರ್ಮರಾಜ ಚಡಚಣ ಬಲಿಯಾದರೆ, ಅಮಾಯಕ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದ. ಈ ದಾಳಿ ನಡೆದು ಇದೇ ಅ. 30ಕ್ಕೆ ಭರ್ತಿ ಒಂದು ವರ್ಷ. ಧರ್ಮರಾಜನ ಸಾವಿಗೆ ಎನ್​ಕೌಂಟರ್ ಪಟ್ಟ ಕಟ್ಟಲಾಯಿತಾದರೂ ಗಂಗಾಧರನ ನಾಪತ್ತೆ ಬಗ್ಗೆ ಯಾರೂ ತುಟಿಬಿಚ್ಚಲಿಲ್ಲ. ಎರಡೂ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಯಿತು. ತನಿಖಾ ವರದಿಯಲ್ಲಿ ಆರೋಪಿಗಳು ನೀಡಿದ ಹೇಳಿಕೆ, ಸಿಕ್ಕ ಸಾಕ್ಷ್ಯಾಧಾರಗಳು, ಕುಕೃತ್ಯದಲ್ಲಿ ಯಾರೆಲ್ಲ ಪಾಲ್ಗೊಂಡಿದ್ದರು, ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿದ ತನಿಖಾ ವರದಿ ಇತ್ಯಾದಿ ವಿವರವನ್ನು ‘ವಿಜಯವಾಣಿ’ ನಿಮ್ಮ ಮುಂದಿಡುತ್ತಿದೆ.

|ಪರಶುರಾಮ ಭಾಸಗಿ

ವಿಜಯಪುರ: 2017ರ ಅ.30ರ ಬೆಳಗ್ಗೆ 7.30ಕ್ಕೆ ಕೊಂಕಣಗಾಂವದ ತೋಟದ ಮನೆ ಮೇಲೆ ಚಡಚಣ ಪೊಲೀಸರು ದಾಳಿ ನಡೆಸಿದ್ದರು. ಇನ್​ಸ್ಪೆಕ್ಟರ್ ಗೋಪಾಲ್ ಹಳ್ಳೂರ ನೇತೃತ್ವದಲ್ಲಿ ದಾಳಿ ನಡೆದು ಗುಂಡಿನ ಚಕಮಕಿಯೂ ನಡೆಯಿತೆಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.

ಪ್ರಕರಣದಲ್ಲಿ ಹಂತಕ

ಧರ್ಮರಾಜ ಚಡಚಣ ಅಸುನೀಗಿದ್ದರೆ ಪಿಎಸ್​ಐ ಹಳ್ಳೂರ ಮತ್ತು ಶಿವಾನಂದ ಬಿರಾದಾರ ಅವರ ಕೈಗೆ ಗುಂಡೇಟು ತಗುಲಿತ್ತು. ಚಡಚಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಬಿಎಲ್​ಡಿಇಗೆ ದಾಖಲಿಸಲಾಗಿತ್ತು. ನಂತರ ಹಳ್ಳೂರನನ್ನು ಬೆಂಗಳೂರಿಗೆ ರವಾನಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ಧರ್ಮರಾಜನನ್ನು ಕರೆತರಲಾಗಿತ್ತು. ಈ ವೇಳೆ ಧರ್ಮರಾಜನ ತಾಯಿ ವಿಮಲಾಬಾಯಿ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ಇದೊಂದು ನಕಲಿ ಎನ್​ಕೌಂಟರ್ ಎಂದು ಆರೋಪಿಸಿದ್ದರು.

ಅಲ್ಲದೆ ಗಂಗಾಧರ ಎಲ್ಲಿ ಎಂಬ ಪ್ರಶ್ನೆಗೆ ಪೊಲೀಸರು ಉತ್ತರಿಸಲೇ ಇಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರೂ ಸಮರ್ಪಕ ಸ್ಪಂದನೆ ಸಿಗದ್ದರಿಂದ ವಿಮಲಾಬಾಯಿ ಕಲಬುರಗಿ ಹೈಕೋರ್ಟ್​ಗೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದರು. ಆಗಲೇ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು. ಅಷ್ಟರಲ್ಲಾಗಲೇ ಸಿಪಿಐ ಅಸೋದೆ ಮತ್ತು ಗೋಪಾಲ ಹಳ್ಳೂರ ವರ್ಗ ಮಾಡಿಸಿಕೊಂಡಿದ್ದರು. ಐಜಿಪಿ ಅಲೋಕಕುಮಾರ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುತ್ತಿದ್ದಂತೆ ಧರ್ಮರಾಜ ಎನ್​ಕೌಂಟರ್ ಹಾಗೂ ಗಂಗಾಧರನ ನಿಗೂಢ ನಾಪತ್ತೆ ಪ್ರಕರಣದ ರೋಚಕ ಅಂಶಗಳು ಒಂದೊಂದೇ ಬಯಲಾಗತೊಡಗಿದವು.

ಸಿಐಡಿ ಆನಂದಕುಮಾರ ನೇತೃತ್ವದ ತಂಡ ತಲೆಮರೆಸಿಕೊಂಡಿದ್ದ 15 ಆರೋಪಿಗಳನ್ನು ಹೆಡೆಮುರಿ ಕಟ್ಟಿ ತಂದು ವಿಚಾರಣೆ ನಡೆಸಿತು. ಪ್ರಕರಣದ ಇಂಚಿಂಚು ಮಾಹಿತಿ ಕಲೆ ಹಾಕಿ ಇಂಡಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿತು. ತನಿಖಾ ವರದಿಯಲ್ಲಿ ದಾಖಲಾದ ಹೇಳಿಕೆಗಳು, ಸಾಕ್ಷ್ಯಾಧಾರಗಳು ಎಂಥವರನ್ನೂ ಬೆಚ್ಚಿಬೀಳಿಸುವುದರಲ್ಲಿ ಅನುಮಾನವೇ ಇಲ್ಲ.