ಶಿವಮೊಗ್ಗ: ಕಾಂತರಾಜ ಆಯೋಗದ ಜಾತಿ ಗಣತಿ ವರದಿಯಲ್ಲಿ ಭಾವಸಾರ ಸಮುದಾಯವನ್ನು ಕಡೆಗಣಿಸಿದ್ದು, ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಪ್ರತ್ಯೇಕ ನಿಗಮ ಸ್ಥಾಪಿಸುವ ಮತ್ತು ಮರುಗಣತಿ ಮೂಲಕ ನ್ಯಾಯ ಒದಗಿಸಬೇಕು ಎಂದು ಎಐಬಿಕೆಎಂ( ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ) ಜಿಲ್ಲಾಧ್ಯಕ್ಷ ಸುರೇಶ್‌ಕುಮಾರ್ ಬೇದ್ರೆ ಹೇಳಿದರು.

ವರದಿಯಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಸಮುದಾಯದ ಸಂಖ್ಯೆಯನ್ನು ತಪ್ಪಾಗಿ ತೋರಿಸಲಾಗಿದೆ. ಪ್ರವರ್ಗ 2ಎನಲ್ಲಿ 14 ಸಾವಿರ ಜನರಿದ್ದಾರೆ ಎಂದು ಹೇಳಲಾಗಿದೆ. ಆದರೆ ವಾಸ್ತವವಾಗಿ ನಾವು ಶಿವಮೊಗ್ಗ ಜಿಲ್ಲೆಯಲ್ಲೇ 35 ಸಾವಿರಕ್ಕೂ ಹೆಚ್ಚಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾತಿ ಗಣತಿ ವೇಳೆ ಭಾವಸಾರ ಜಾತಿ ಕಾಲಂನಲ್ಲಿ ಕೆಲವರು ಮರಾಠಿ, ದರ್ಜಿ, ರಂಗಾರೆ ಎಂದು ಬರೆಸಿದ್ದಾರೆ. ಆದ್ದರಿಂದ ಈ ವರದಿ ಸತ್ಯಕ್ಕೆ ದೂರವಾಗಿದೆ. ಶಿವಮೊಗ್ಗ ನಗರದಲ್ಲೇ 22,350ಕ್ಕೂ ಅಧಿಕ ಜನರಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಾಂಗ ವಿಸ್ತರಣೆಯಾಗಿದೆ. ಅದನ್ನು ಮನಗಂಡು ಕಾಂತರಾಜ ವರದಿಯಲ್ಲಿ ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಜನಗಣತಿ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯವಾಗಿ ಬಳಸಬೇಕು. ಈಗಾಗಲೇ ಈ ಸಂಬಂಧ ಎಐಬಿಕೆಎಂ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿಸ್ಸೆ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ರಾಜ್ಯದ ಎಲ್ಲ್ಲ ಜಿಲ್ಲಾ ಕೇಂದ್ರಗಳಿಗೆ ತೆರಳಲಿದ್ದು, ಜಾತಿ ಜನಗಣತಿಯಲ್ಲಿ ಭಾವಸಾರ ಸಮುದಾಯದವರನ್ನು ಕಡೆಗಣಿಸಿ ಕಡಿಮೆ ಸಂಖ್ಯೆಯಲ್ಲಿ ನಮ್ಮನ್ನು ಗುರುತಿಸಿರುವ ಹಿನ್ನೆಲೆಯಲ್ಲಿ ಭಾವಸಾರ ಸಮಾಜದವರು ಹಿರಿಯರ ಜತೆ ಚರ್ಚಿಸಿ, ಬಳಿಕ ಸ್ಥಳಿಯ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಶಿವಮೊಗ್ಗದಲ್ಲಿ 22,850, ಭದ್ರಾವತಿಯಲ್ಲಿ 6,480, ಹೊಳೆಹೊನ್ನೂರಲ್ಲಿ 1,260, ಸಾಗರದಲ್ಲಿ 1,680, ತೀರ್ಥಳ್ಳಿಯಲ್ಲಿ 720, ಸೊರಬದಲ್ಲಿ 800, ಶಿಕಾರಿಪುರದಲ್ಲಿ 850 ಮತ್ತು ಹೊಸನಗರದಲ್ಲಿ 588 ಜನರು ನಮ್ಮ ಸಮುದಾಯವರಿದ್ದಾರೆ ಎಂದು ತಿಳಿಸಿದರು.
ಎಐಬಿಕೆಎಂ ಉಪಾಧ್ಯಕ್ಷ ಓಂ ಪ್ರಕಾಶ್ ತೇಲ್ಕರ್, ಎಐಬಿಕೆಎಂ ವಲಯ ಅಧ್ಯಕ್ಷ ದುಗ್ಗೇಶ್ ತೇಲ್ಕರ್, ಪ್ರಮುಖರಾದ ಕೆ.ಟಿ.ಶ್ರೀನಿವಾಸ್, ಗಜೇಂದ್ರನಾಥ್ ಮಾಳೋದೆ, ಗೋ.ವ.ಮೋಹನಕೃಷ್ಣ, ಆರ್.ಹನುಮಂತ ರಾವ್, ಸಂತೋಷ್ ಸಾಕ್ರೆ, ಅಂಬುಜಾ ನವುಲೆ, ಅನಿಷಾ ಸತೀಶ್, ಪ್ರವೀಣ್ ಉತ್ತರ್ಕರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.