ರಾಜ್ಯವೇ ಒಂದು ಕಣ್ಣಾದರೆ, ಹಾಸನವೇ ಒಂದು ಕಣ್ಣು ಎನ್ನುವ ಮಟ್ಟಿಗೆ ರೇವಣ್ಣ ಕೆಲಸ ಮಾಡಿದ್ದಾರೆ: ಭವಾನಿ ರೇವಣ್ಣ

ಹಾಸನ: ಸಚಿವ ರೇವಣ್ಣ‌ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದಾರೆ. ಇಂದು ಲೋಕೋಪಯೋಗಿ ಇಲಾಖೆಯಲ್ಲಿ ಬಿಡುವಿಲ್ಲದೆ ಕೆಲಸ ನಡೆಯುತ್ತಿದ್ದರೆ, ಅದಕ್ಕೆ ರೇವಣ್ಣನವರೇ ಕಾರಣ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಭವಾನಿ ರೇವಣ್ಣ ಅವರು ತಮ್ಮ ಪತಿಯ ಗುಣಗಾಣ ಮಾಡಿದರು.

ಬುಧವಾರ ಚಿಕ್ಕಹೊನ್ನೇನಹಳ್ಳಿಯಲ್ಲಿ ಟ್ರಸ್ಟ್ ಉದ್ಘಾಟನೆ ನೆರವೇರಿಸಿದ ನಂತರ ಮಾತನಾಡಿದ ಅವರು ರಾಜ್ಯವೇ ಒಂದು ಕಣ್ಣಾದರೆ, ಹಾಸನವೇ ಒಂದು ಕಣ್ಣು ಎಂದು ಜನರು ಮಾತನಾಡುತ್ತಾರೆ. ಅದಕ್ಕೆ ತಕ್ಕದಾಗಿ ರೇವಣ್ಣರವರೂ ಕೂಡ ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ ಎಂದು ಪತಿ ಕೆಲಸಕ್ಕೆ ಪೂರ್ತಿ ಅಂಕ ನೀಡಿದರು.

ರೇವಣ್ಣರವರು ಯಾವಾಗಲೂ ದೊಡ್ಡ ಕೆಲಸದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಚಿಕ್ಕ‌ ಕೆಲಸಗಳನ್ನು ಮಾಡಿಸೋಣ ಅಂತಾರೆ. ಆದರೆ, ಕೈ ಹಾಕಿದ ಯಾವುದನ್ನೂ ಬಿಡುವುದಿಲ್ಲ. ಆಗಲ್ಲ ಎಂಬ ಪದವೇ ಅವರ ಬಳಿ ಇಲ್ಲಾ ಎಂದು ಹೊಗಳಿದರು.

ರೇವಣ್ಣನವರು ಹಾಸನದ ಚನ್ನರಾಯಪಟ್ಟಣ ದಾಟಿದರೂ ಅಂದರೆ, ಯಾವುದೋ ಫೈಲ್ ಹಿಡಿದು ಬೆಂಗಳೂರಿಗೆ ಹೊರಟಿದ್ದಾರೆ ಎಂದರ್ಥ. ಆ ಕಡೆಯಿಂದ ನೆಲಮಂಗಲ ಬಿಟ್ಟರು ಅಂದರೆ, ಕೆಲಸ ಮಾಡಿಸಿಕೊಂಡು ವಾಪಸ್ ಬರ್ತಿದ್ದಾರೆ ಎಂದು ಯೋಚನೆ ಮಾಡುತ್ತೇವೆ. ಅವರು ಅಕಸ್ಮಾತ್ ಬೆಂಗಳೂರಿನಲ್ಲಿ ಉಳಿದಿದ್ದಾರೆ ಅಂದರೆ ಹೋದ ಕೆಲಸಕ್ಕೆ ಸಂಬಂಧ ಪಟ್ಟ ಸಚಿವರೋ ಅಥವಾ ಅಧಿಕಾರಿಯೋ ಸಿಕ್ಕಿಲ್ಲ ಎಂದರ್ಥ. ಅವರಿಗೆ ನಮ್ಮ ಕುಟುಂಬದ ಸಂಪೂರ್ಣ ಬೆಂಬಲ ಇದೆ. ಕೆಲಸ ಮಾಡೋದರಲ್ಲಿ ರೇವಣ್ಣರವರು ಯಾವತ್ತೂ ಮೊದಲ ಸ್ಥಾನಕ್ಕೆ ಬರ್ತಾರೆ ಎಂದು ಕೊಂಡಾಡಿದರು. (ದಿಗ್ವಿಜಯ ನ್ಯೂಸ್​)