ಭವರೋಗ ವೈದ್ಯ ಶ್ರೀ ಶಾಂತಾನಂದ ಸ್ವಾಮೀಜಿ

ಕೋಲಾರ ಜಿಲ್ಲೆ ಅನೇಕ ಸಂತರನ್ನು ಪಡೆದ ಪ್ರದೇಶ. ಈ ಜಿಲ್ಲೆಯಲ್ಲಿ ಪ್ರಸಿದ್ಧರಾದ ಸಂತರಿದ್ದಂತೆ, ಅಪ್ರಸಿದ್ಧರಾದ ಸಂತರೂ ಇದ್ದರು. ಅಂಥವರು ಜನರ ನಡುವೆ ಇದ್ದು ‘ಅಧ್ಯಾತ್ಮದ ಮನೆ’ಯನ್ನು ನಿರ್ಮಾಣ ಮಾಡಿದರು. ಅಂಥವರಲ್ಲಿ ‘ತಾತಯ್ಯ’ ಎಂದು ಗ್ರಾಮಸ್ಥರಿಂದ ಕರೆಸಿಕೊಂಡ ಶ್ರೀ ಶಾಂತಾನಂದ ಸ್ವಾಮೀಜಿ ಪ್ರಮುಖರು. ಇವರು ಜೀವನಪಥ ಹಾಗೂ ಲೋಕಸೇವೆಯ ಹಾದಿಯನ್ನು ತೋರಿಸುತ್ತಲೇ ಲೋಕದಿಂದ ನಿರ್ಗಮಿಸಿದರು. ‘ಸದ್ದು-ಗದ್ದಲವಿಲ್ಲದೆ ಸಾಧನೆ ಗದ್ದುಗೆ ಏರಿದೆ ಇಲ್ಲಿ’ ಎಂಬ ಕವಿವಾಣಿಯಂತೆ ಸಾಮಾನ್ಯರೊಡನೆ ಅಸಾಮಾನ್ಯರಾಗದೆ ಇವರು ಸಾಮಾನ್ಯರಾಗಿಯೇ ತಮ್ಮ ಬದುಕನ್ನು ಮುಡಿಪಿಟ್ಟರು.

ಜನನ-ಬಾಲ್ಯ: ಕರ್ನಾಟಕದ ಚಿಂತಾಮಣಿ ತಾಲೂಕಿನಲ್ಲಿ ‘ಸಂತಪಲ್ಲಿ’ ಎಂಬುದೊಂದು ಸಣ್ಣಗ್ರಾಮ. ಅಲ್ಲಿ ಮರಾಠಿ ಸಮುದಾಯದ ಫಿರೋಜಿರಾವ್-ಪಾರುಬಾಯಿ ದಂಪತಿಗೆ 1906ರಲ್ಲಿ ಗಂಡುಮಗುವಿನ ಜನನವಾಯಿತು. ಅದಕ್ಕೆ ‘ಕೃಷ್ಣೋಜಿರಾವ್’ ಎಂದು ಹೆಸರಿಟ್ಟರು. ಆದರೆ, ಎಲ್ಲರೂ ‘ಕೃಷ್ಣೋಜಿ’ ಎಂದೇ ಕರೆಯುತ್ತಿದ್ದರು. ಇವರದು 40ಕ್ಕಿಂತ ಹೆಚ್ಚು ಜನರಿದ್ದ ಅವಿಭಕ್ತ ಕುಟುಂಬ. ಮನೆಯ ತುಂಬ ಗೋಸಂತತಿ. ಹತ್ತಾರು ಹೊಲಗಳು ಇದ್ದವು. ಶ್ರೀಮಂತಿಕೆಯಿದ್ದರೂ ಸಂಸ್ಕಾರವಂತ ಮನೆತನ ಇವರದಾಗಿತ್ತು. ಬಾಲಕ ಕೃಷ್ಣೋಜಿ ಇಲ್ಲಿ ರಾಜಕುಮಾರನಂತೆ ಬೆಳೆದ. ನೀರು ಕಂಡರೆ ತುಂಬ ಆಸೆ. 8 ವರ್ಷದವನಾಗಿದ್ದಾಗ ಸಹಜ ಸ್ವಭಾವದಂತೆ ಗೆಳೆಯರೊಡನೆ ಈಜಲು ಹೋಗಿದ್ದಾಗ, ದಡದ ಬಳಿಯ ನೇರಳೆಮರದ ಕೆಳಗೆ ಸಾಧುವೊಬ್ಬರನ್ನು ಕಂಡ. ಅವರು ಕೃಷ್ಣೋಜಿಯನ್ನು ಕೈಮಾಡಿ ಕರೆದರು, ಬಂದು ನಿಂತಾಗ ಬೆಲ್ಲದ ಚೂರನ್ನು ನೀಡಿದರು. ನಂತರ ತಮ್ಮ ಭಾಷೆಯಲ್ಲಿ ಏನೇನೊ ಹೇಳಿದರು. ಕೃಷ್ಣೋಜಿಗೆ ಅದೊಂದೂ ತಿಳಿಯಲಿಲ್ಲ. ಆದರೆ, ಆ ಸಾಧು ತಲೆಯನ್ನು ಮುಟ್ಟಿದಾಗ ಕೃಷ್ಣೋಜಿಗೆ ವಿಶಿಷ್ಟ ಅನುಭವವಾಯಿತು. ನಂತರ ಸಾಧುಗಳು ಕೊಟ್ಟ ಬೆಲ್ಲವನ್ನು ಗೆಳೆಯರಿಗೂ ಕೊಟ್ಟು ತಾನೂ ತಿಂದ. ಈ ಸ್ವಭಾವ ಸಾಧುಗಳಿಗೆ ಸಂತಸ ನೀಡಿತು.

ಸಂತಪಲ್ಲಿಯ ಶಾಲೆಗೆ ಹೋಗತೊಡಗಿದ ಕೃಷ್ಣೋಜಿ ಓದಿನಲ್ಲಿ ಮುಂದು, ಆಟಪಾಟಗಳಲ್ಲಿ ಶಾಲೆಯ ಹುಡುಗರಿಗೆ ನಾಯಕ. ಒಮ್ಮೆ ಶಾಲೆಯಿಂದ ಮನೆಗೆ ಬಂದಾಗ ಚಿಕ್ಕಪ್ಪ ಸತ್ತಿದ್ದರು. ಎಲ್ಲರೂ ಅಳುತ್ತಿದ್ದರು. ಅಲ್ಲಿದ್ದ ಒಬ್ಬರು ‘ಚಿಕ್ಕಪ್ಪ…ಇಲ್ಲ, ನಮ್ಮನ್ನೆಲ್ಲ ಬಿಟ್ಟು ದೇವರ ಬಳಿಗೆ ಹೊರಟುಹೋದರು’ ಎಂದಿದ್ದು ಕಿವಿಗೆ ಬಿತ್ತು. ಚಿಕ್ಕಪ್ಪ ಸತ್ತು ಇಲ್ಲಿಯೇ ಬಿದ್ದಿದ್ದಾರೆ, ದೇವರ ಬಳಿ ಹೋದದ್ದು ಹೇಗೆ? ಸಾವು ಎಂದರೇನು? ಸಾಯುವವರು ಯಾರು? ದೇವರು ಎಲ್ಲಿರುತ್ತಾನೆ? ಈ ಪ್ರಶ್ನೆಗಳು ಕೃಷ್ಣೋಜಿಯನ್ನು ಕಾಡತೊಡಗಿದವು. ಕೆಲ ದಿನಗಳಲ್ಲೇ ಪರೀಕ್ಷೆಗಳು ಮುಗಿದವು. ಹುಡುಗರಿಗೆಲ್ಲ ಸಂಭ್ರಮವೋ ಸಂಭ್ರಮ! ಊರ ಹೊರಗಡೆ ಬಾವಿಯೊಂದು ಇತ್ತು, ಅದರೊಳಗೆ ಇಳಿಯಲು ಮೆಟ್ಟಿಲುಗಳಿದ್ದವು. ಕೃಷ್ಣೋಜಿ ಬಾವಿಗಿಳಿದು ಈಜತೊಡಗಿದ. ಒಮ್ಮೆ ಬಾವಿಯ ಕಟ್ಟೆಯಿಂದ ನೀರಿಗೆ ಹಾರಿದಾಗ, ತಳದಲ್ಲಿದ್ದ ಚೂಪಾದ ವಸ್ತು ಮೊಣಕಾಲಿಗೆ ಚುಚ್ಚಿಕೊಂಡು ಜ್ಞಾನತಪ್ಪಿದಂತಾಯಿತು. ಆದರೂ ಈಜಿಕೊಂಡು ಮೇಲಕ್ಕೆ ಬಂದ. ನೀರೆಲ್ಲ ಕೆಂಪೋ ಕೆಂಪು. ಸುತ್ತಲಿದ್ದ ಹುಡುಗರು ಗಾಬರಿಗೊಂಡರೂ ಕೃಷ್ಣೋಜಿಗೆ ನೋವಿನ ಅರಿವೇ ಆಗಲಿಲ್ಲ. ಹೊರಕ್ಕೆ ಬಂದಾಗಲೇ ಕಾಲಿಗೆ ಗಾಯವಾಗಿರುವುದು ಅವನಿಗೆ ತಿಳಿದದ್ದು. ಯಾರೋ ರಸ ತಂದು ಹಾಕಿ, ಬಟ್ಟೆಕಟ್ಟಿ ಗಾಯಕ್ಕೆ ಪಟ್ಟುಹಾಕಿದರು. ಆದರೆ, ಮಾರನೆಯ ದಿನ ಜ್ವರ ಬಂತು. ಅಜ್ಜಿಗೆ ಕೃಷ್ಣೋಜಿ ಕಂಡರೆ ಬಲುಪ್ರೀತಿ. ಆಕೆ ಕಷಾಯ ಮಾಡಿ ಕುಡಿಸಿದಳು. ವೈದ್ಯರಿಗೂ ತೋರಿಸಲಾಗಿ ಅವರು ಕೆಂಪುನೀರು ಕೊಟ್ಟರು. ಆದರೂ ಜ್ವರ ಕಡಿಮೆಯಾಗದೆ ಆಸ್ಪತ್ರೆಗೆ ಸೇರಿಸಿದರು. ಆಗ ಕೃಷ್ಣೋಜಿಯ ಮನಸ್ಸಿನಲ್ಲಿ ತಾಕಲಾಟ ಎದ್ದಿತು. ಕಷ್ಟ ಬಂದರೆ ಹೊರಗಿನವರಿಂದ ಪರಿಹಾರವಿಲ್ಲ; ಅದು ತನ್ನಿಂದಲೇ ಪರಿಹಾರ ಆಗಬೇಕು. ಕಾಲಿನ ಗಾಯ ದಿನೇದಿನೆ ಉಲ್ಬಣವಾಗತೊಡಗಿ ಕಾಲು ಕತ್ತರಿಸುವ ಪ್ರಸ್ತಾಪವೂ ಬಂತು. ‘ಕಾಲು ಹೋದರೆ ಅದೆಂಥ ಜೀವನ’ ಎನ್ನಿಸಿ ಅಂದು ರಾತ್ರಿ 9 ಗಂಟೆಗೆ ಆಸ್ಪತ್ರೆಯಿಂದ ಹೇಗೋ ತಪ್ಪಿಸಿಕೊಂಡು ಹೊರಬಂದ. ಆ ಬೇನೆಯಲ್ಲೇ 3 ಮೈಲಿ ನಡೆದ. ಒಂದೆಡೆ ಪ್ರಜ್ಞೆ ತಪ್ಪಿ ಬಿದ್ದ.

ಪ್ರಜ್ಞೆ ಬಂದಾಗ ವೃದ್ಧರೊಬ್ಬರ ಆಶ್ರಯದಲ್ಲಿದ್ದ. ಅವರು ‘ಕಣ್ಣು ತೆಗೆಯೊ ಮಗು’ ಎಂದು ತಲೆಸವರಿ ಅದೆಂಥದೊ ರಸ ಕುಡಿಸಿದರು. ಅದೊಂದು ಗುಡಿಸಲು. ಅಲ್ಲಿ ಏಳೆಂಟು ದಿನಕ್ಕೆ ಆರಾಮಾದ. ಕೃಷ್ಣೋಜಿಗೆ ಆ ಗುಡಿಸಲು ಮತ್ತು ಅಲ್ಲಿದ್ದ ಹಿರಿಯರು ಇಷ್ಟವಾದರು. ಆದರೆ, ಅವರು ಅವನನ್ನು ಕಳಿಸಿಬಿಟ್ಟರು. 6 ತಿಂಗಳ ನಂತರ ಮನೆಗೆ ಹೋದ. ಮಗ ಮನೆಗೆ ಬಂದದ್ದು ತಾಯಿ-ತಂದೆಗೆ ಖುಷಿಯಾಯಿತು. ಆದರೆ, ಕೃಷ್ಣೋಜಿಗೆ ‘ಏನೂ ಬೇಕಾಗಿಲ್ಲ’ ಎಂಬ ಸ್ಥಿತಿ ಸಹಜವಾಗೇ ಉಂಟಾಗಿತ್ತು. ಮನೆಯಲ್ಲೇ ಕೆಲವು ದಿನ ಉಳಿದರೂ, ಯಾವುದೋ ಅದೃಶ್ಯಶಕ್ತಿ ಮನೆಯಿಂದ ಹೊರಹೋಗಲು ಪ್ರೇರೇಪಿಸುತ್ತಿತ್ತು. ಮನಸ್ಸೆಲ್ಲ ಖಾಲಿಖಾಲಿ ಎಂಬ ಭಾವ! ಒಮ್ಮೆ ಮನೆಬಿಟ್ಟು ಹೊರಟ.

ಅಧ್ಯಾತ್ಮದ ಅನ್ವೇಷಣೆ: ಮಾರ್ಗಮಧ್ಯದಲ್ಲಿ ಕಂಡ ಸಂನ್ಯಾಸಿಯೊಬ್ಬ ‘ನೀನು ದೈವವನ್ನು ಅರಸಿ ಹೋಗುತ್ತಿದ್ದೀಯೆ. ನಿನಗೊಂದಿಷ್ಟು ಚಮತ್ಕಾರ ವಿದ್ಯೆ ಕಲಿಸುವೆ’ ಎಂದ. ಜತೆಗೆ ಕೆಲವು ಸಿದ್ಧಿಗಳನ್ನೂ ಹೇಳಿಕೊಟ್ಟ. ಕೆಲ ಹೊತ್ತಿಗೆ ಅವನಿಗೆ ಚಳಿ ಬಂದಂತಾಗಿ ಎದುರಿದ್ದ ಹಳ್ಳದಲ್ಲಿ ಬಿದ್ದ. ಎಚ್ಚರವಾದಾಗ ಅಲ್ಲಿದ್ದ ಮರ, ಗುಹೆ ಏನೂ ಕಾಣಲಿಲ್ಲ. ಬಟ್ಟೆ ಚಿಂದಿಯಾಗಿ, ಕಟ್ಟಿಕೊಂಡಿದ್ದ ಲಂಗೋಟಿ ಮಾತ್ರ ಮೈಮೇಲಿತ್ತು. ಕೃಷ್ಣೋಜಿಗೆ ದಾರಿಯುದ್ದಕ್ಕೂ ಇಂಥವೇ ವಿಶಿಷ್ಟ ಅನುಭವಗಳಾದವು. ಅವನು ಸ್ವಲ್ಪದೂರ ನಡೆದಾಗ 12ರ ಪ್ರಾಯದ ಹುಡುಗನೊಬ್ಬ ಕಾಣಿಸಿಕೊಂಡು ‘ಎಲ್ಲಿಗೆ ಹೊರಟೆ?’ ಎಂದ. ಅದಕ್ಕೆ ಕೃಷ್ಣೋಜಿ ‘ಎಲ್ಲಿಂದ ಹೊರಟೆನೋ ಅಲ್ಲಿಗೆ’ ಎಂದು ನಿಗೂಢವಾಗಿ ಉತ್ತರಿಸಿದ. ಆಗ ಹುಡುಗ ‘ನನ್ನನ್ನೂ ಕರೆದುಕೊಂಡು ಹೋಗಿ’ ಎಂದ. ‘ನನಗೆ ಆ ಮಾರ್ಗವೇ ಗೊತ್ತಿಲ್ಲ’ ಎಂದು ಪ್ರತ್ಯುತ್ತರಿಸಿದ ಕೃಷ್ಣೋಜಿ. ಇಬ್ಬರು ಸ್ವಲ್ಪಹೊತ್ತು ಮಾತನಾಡುತ್ತ ಕುಳಿತರು. ನಂತರ ಕೃಷ್ಣೋಜಿ ‘ನಿನ್ನ ಗುರು ಯಾರು?’ ಎಂದ. ಅದಕ್ಕೆ ಆ ಹುಡುಗ ‘ನನಗೆ ನಾನೇ ಗುರು. ಒಳಗಿನಿಂದ ಏಳುವ ಪ್ರಶ್ನೆಗಳಿಗೆ ಒಳಗಿನಿಂದಲೇ ಉತ್ತರ ದೊರಕುತ್ತವೆ. ಇದಕ್ಕೆ ನಾನೇ ಸಾಕ್ಷಿ’ ಎಂದ. ‘ನೀನು ಎಲ್ಲಿದ್ದಿ?’ ಎಂದಾಗ ಆ ಹುಡುಗ ‘ನನ್ನ ಮನೆಗೆ ನಾನೇ ಯಜಮಾನ. ಹತ್ತು ಜವಾನರ ಕೆಲಸ ನೋಡಿಕೊಳ್ಳಲು ಮುಖ್ಯಸ್ಥನೊಬ್ಬನನ್ನು ಗೊತ್ತುಮಾಡಿಕೊಂಡಿದ್ದೇನೆ. ಅವನಿಂದ ಎಲ್ಲ ಕಾರ್ಯಗಳು ನಡೆಯುತ್ತಿವೆ’ ಎಂದು ಒಗಟಾಗಿಯೇ ಉತ್ತರಿಸಿದ. ಅದರ ಒಳಾರ್ಥ ಕೃಷ್ಣೋಜಿಗೆ ಸ್ಪುರಿಸಿತು. 5 ಜ್ಞಾನೇಂದ್ರಿಯಗಳು, 5 ಕರ್ವೇಂದ್ರಿಯಗಳು, ಇವುಗಳನ್ನು ನಿಯಂತ್ರಿಸಲು ಮನಸ್ಸು- ಈ ತತ್ತ್ವ ಕೃಷ್ಣೋಜಿಗೆ ತಿಳಿಯಿತು. ಈತ ಬರೀ ಹುಡುಗನಲ್ಲ ಎಂದರ್ಥವಾಯಿತು. ಆಗ ಕೃಷ್ಣೋಜಿ ‘ನಿನಗೆ ನಮಸ್ಕಾರ ಮಾಡಲೇ?’ ಎಂದು ಕೇಳಿದಕ್ಕೆ ಆ ಹುಡುಗ ‘ಯಾರಿಗೆ ಯಾರು ನಮಸ್ಕರಿಸೋದು? ಮರೆವು ಅರಿವಿಗೆ ನಮಸ್ಕರಿಸುತ್ತಿದೆಯಲ್ಲವೆ? ಮರೆವು ಅರಿವಿನಲ್ಲಿ ಸೇರಿಕೊಂಡಾಗ ನಾನು ನೀನಾಗುತ್ತೇನೆ. ನೀನು ನಾನು ಒಂದಾದಾಗ ಅರಿವಿನ ಆತ್ಮಜ್ಯೋತಿ ಎಲ್ಲ ಕಡೆ ಪಸರಿಸುತ್ತದೆ. ಚಿತ್ತಜ್ಯೋತಿಯು ಸಾಕ್ಷಾತ್ಕಾರ ಆಗಬೇಕು. ಆಗ ವ್ಯತ್ಯಾಸ ಇಲ್ಲವಾಗುವುದು’ ಎಂದು ಹೇಳಿ ‘ನಾನು ಈ ದೇಹದ ಸಂಬಂಧದಲ್ಲಿ ಸಿಕ್ಕಿಕೊಂಡಿದ್ದೇನೆ. ನಾನು ದೇಹದ ಋಣಮುಕ್ತನಾಗಬೇಕು. ಆಗ ‘ನಾನು’ ಎಂಬುದು ಅರಿವಾಗುತ್ತದೆ. ದೇಹದ ಗುರಿ ಏನು? ಪೊರೆಯು ಹಾವಿಗೆ ಹೇಳಿ ಹೊರಕ್ಕೆ ಬರುತ್ತದೆಯೆ? ಹೀಗಾಗಿ ವ್ಯರ್ಥ ಚಿಂತನೆಗಳಲ್ಲಿ ನಾವು ತೊಡಗಬಾರದು! ನಮ್ಮ ಋಣ ತೀರಿದಾಗ ನಮಗೆ ಮುಕ್ತಿ. ನಾವು ಮಾತಿಗಿಂತ ಮೌನದ ಕಡೆ ತಿರುಗಬೇಕು’ ಎಂದು ಹೇಳಿ ಕಣ್ಮರೆಯಾದ. ಕೃಷ್ಣೋಜಿಗೆ ಈ ಮಾತುಗಳು ಮುಂದಿನ ದಾರಿಯನ್ನು ಸ್ಪಷ್ಟಪಡಿಸಿದವು.

ಕೃಷ್ಣೋಜಿ ಕಾಡು-ಮೇಡು-ಗುಡ್ಡಗಳಲ್ಲಿ ಅಲೆದರು, ಸಾಧುಸಂತರ ಜತೆ ತಿರುಗಾಡಿದರು. ಮಾತಿಗಿಂತ ಮೌನಕ್ಕೆ ಶರಣಾದರು. ಅವರು ಸುತ್ತಾಡದ ಜಾಗಗಳಿಲ್ಲ, ನೋಡದ ಕ್ಷೇತ್ರಗಳಿಲ್ಲ. ಒಂದೆಡೆ ಪಂಢರಿನಾಥನ ಭಜನೆ ನಡೆಯುತ್ತಿತ್ತು. ಅದು ಆನಂದವನ್ನೇನೊ ನೀಡಿತು, ಆದರೆ ಮನಸ್ಸಿಗೆ ತೃಪ್ತಿಯಾಗಲಿಲ್ಲ. ‘ಮಂತ್ರೋಪದೇಶ ಪಡೆದೆ, ನಾಮಜಪವನ್ನು ಬಿಡದೆ ಮಾಡಿದೆ. ಆದರೆ, ಭಗವದ್ದರ್ಶನ ಆಗಲಿಲ್ಲ’ ಎಂಬ ಭಾವ ಕಾಡಿತು. ಅವರು ಉತ್ತರಭಾರತದತ್ತ ಸಂಚರಿಸುತ್ತಿದ್ದಾಗ ಕಂಡ ಬ್ರಹ್ಮಪುತ್ರಾ ನದಿಯ ವೈಶಾಲ್ಯಕ್ಕೆ ಮಾರುಹೋದರು. ನದಿಗೆ ಹಾರಿ ಈಜುತ್ತ ದ್ವೀಪದಂತಿದ್ದ ಚಿಕ್ಕಸ್ಥಳ ತಲುಪಿದರು. ಏಳುದಿನ ಅಲ್ಲಿ ಅಡ್ಡಾಡಿದರು, ತಿನ್ನಲು ಬೇರೇನೂ ಸಿಗದೆ ಗೆಡ್ಡೆ-ಗೆಣಸು ತಿಂದರು. ನೆಮ್ಮದಿಯಿಲ್ಲ, ಮನೆಬಿಟ್ಟು 12 ವರ್ಷಗಳೇ ಕಳೆದಿದ್ದವು. ಜೀವನದಲ್ಲಿ ಏನು ಸಾಧಿಸಲಿಲ್ಲವೆಂಬ ವ್ಯಥೆ ತುಂಬಿತ್ತು. ಗಂಗೆಗೆ ಬಿದ್ದು ಪ್ರಾಣ ಕಳೆದುಕೊಳ್ಳುವುದೇ ಲೇಸು ಎಂದು ತೀರ್ವನಿಸಿದರು. ಆಗ ಒಂದು ಧ್ವನಿ ‘ತಾಳು.. ತಾಳು’ ಎಂದಿತು. ಸುತ್ತಮುತ್ತ ನೋಡಿದರೂ ಯಾರೂ ಕಾಣಲಿಲ್ಲ. ಭ್ರಮೆ ಅಂದುಕೊಂಡರೂ, ಯೋಗದಂಡ-ಕಮಂಡಲ ಹಿಡಿದ ಭವ್ಯಸಂನ್ಯಾಸಿಯನ್ನು ಕಂಡರು. ಅವರು ‘ನೀನು ಹುಡುಗನಾಗಿದ್ದಾಗ ಬೆಲ್ಲದ ಚೂರು ಕೊಟ್ಟದ್ದು ನಾನೇ, ನೆನಪುಂಟೋ?’ ಎಂದು ಕೇಳಿದರು! ಇವರಿಗೆ ಅಚ್ಚರಿಯಾಗಿ ಆ ಸಂನ್ಯಾಸಿಯ ಜತೆ ಹೊರಟರು. ಅವರು ಒಂದು ದೊಡ್ಡಬೆಟ್ಟದ ಬಳಿಹೋಗಿ ಯೋಗದಂಡದಿಂದ ಬಂಡೆಯೊಂದನ್ನು ಸರಿಸಿದರು. ದೀಪವಿಲ್ಲದ ಗುಹೆಯಲ್ಲಿ ದೀಪ ಬರುತ್ತಿತ್ತು. ವಿಶಿಷ್ಟ ಅನುಭೂತಿಗೆ ಕೃಷ್ಣೋಜಿ ಒಳಗಾದರು. ಕೃಷ್ಣೋಜಿಯವರನ್ನು ಹುಲಿಚರ್ಮದ ಮೇಲೆ ಪದ್ಮಾಸನದಲ್ಲಿ ಕುಳ್ಳಿರಿಸಿದ ಸಂನ್ಯಾಸಿ ಕಮಂಡಲದಿಂದ ತೀರ್ಥ ಪೋ›ಕ್ಷಿಸಿದರು. ಪ್ರಣವ ಮಂತ್ರೋಚ್ಚಾರಣೆ ಮಾಡುತ್ತ, ಯೋಗದಂಡದಿಂದ ತಲೆಮೇಲೆ ಬಡಿದರು. ಆಗ ಸ್ಥೂಲಶರೀರದಿಂದ ಸೂಕ್ಷ್ಮಶರೀರ ಹೊರಗೆ ಬಂದಿತು! ಸಂನ್ಯಾಸಿ ಸೂಕ್ಷ್ಮಶರೀರಕ್ಕೆ ಅರಿವನ್ನು ಬೋಧಿಸಿದರು. ಸ್ಥೂಲಶರೀರಕ್ಕೆ ಹಸಿವು, ಬಾಯಾರಿಕೆ, ಸುಸ್ತು, ನೋವು, ಸಾವು, ರೋಗ ಎಲ್ಲವೂ ಉಂಟು. ಆದರೆ, ಸೂಕ್ಷ್ಮಶರೀರಕ್ಕೆ ಅದರ ಸೋಂಕಿಲ್ಲ ಎಂದರು. ನಂತರ ಸ್ಥೂಲಶರೀರಕ್ಕೆ ಯೋಗದಂಡದಿಂದ ಬಡಿದರು. ಆದರೆ, ಅದು ಕೊರಡಿನಂತಿತ್ತು. ಆಮೇಲೆ ಸೂಕ್ಷ್ಮಶರೀರವನ್ನು ಯೋಗದಂಡದಿಂದ ಸೋಂಕಿಸಿದಾಗ ಅದರ ಚಲನವಲನ ನಿಂತವು. ಆಗ ಸಂನ್ಯಾಸಿ ಕೃಷ್ಣೋಜಿಗೆ ‘ಈ ಮೈಕ್ರೋಕಾಸ್ಮಿಕ್ ದೇಹವೇ ಪ್ರಾಣ. ಯಮ ಅದನ್ನು ತೆಗೆದುಕೊಂಡು ಹೋಗುತ್ತಾನೆ. ನೀನು ಮಾಡಿದ ಒಳ್ಳೆಯ ಕೆಲಸಗಳು, ಕೆಟ್ಟ ಕೆಲಸಗಳು ಇವನ್ನು ಅನಾಸಕ್ತಿಯಿಂದ ಮಾಡುವುದು ನಿಷ್ಕಾಮ. ಕೆಲಸಗಳಿಗೆ ತಕ್ಕಂತೆ ಭವಿಷ್ಯವುಂಟು. ನಿನ್ನಲ್ಲಿ ಕೂಡಿಹಾಕಿಕೊಂಡಿರುವುದು ಕರ್ಮಗಳ ಸಂಚಯ. ಇದು ಹಿಂದಿನ ಜನ್ಮದ ಪ್ರಾರಬ್ಧ. ಮುಂದೆ ಮಾಡಲಿರುವ ಕಾರ್ಯಗಳು ಆಗಮ. ಅದರಿಂದ ಭವಿಷ್ಯ ನಿರ್ವಣ’ ಎಂದು ಹೇಳಿದರು. ಸೂಕ್ಷ್ಮಶರೀರ ಸ್ಥಿರವಾಗಿತ್ತು. ನಂತರ ಕೃಷ್ಣೋಜಿಯವರಲ್ಲಿ ‘ಆತ್ಮಶಕ್ತಿ’ಯನ್ನು ತುಂಬಿದರು. ‘ನೀನಿಲ್ಲದೆ ಪರಮಾತ್ಮನಿಲ್ಲ, ಮಣ್ಣು ಇಲ್ಲದೆ ಮಡಕೆ ಇಲ್ಲ’ ಎಂದು ಹೇಳಿ ಸ್ಥೂಲಶರೀರಕ್ಕೆ ಸೂಕ್ಷ್ಮಶರೀರದೊಳಗೆ ಹೋಗಲು ಸೂಚಿಸಿದರು. ಅದು ಹೋಗಿ ಸೇರಿಕೊಂಡಿತು. ನಂತರ ಜಿಂಕೆಚರ್ಮದ ಮೇಲೆ ಕೂರಿಸಿ ಮೂಲಮಂತ್ರೋಪದೇಶ ನೀಡಿ ‘ನೀನು ಇಂದಿನಿಂದ ‘ಶಾಂತಾನಂದ’ನಾದೆ. ಸಮಾಜದ ಬಳಿಗೆ ಹೋಗು, ಆಶ್ರಮವೊಂದನ್ನು ಸ್ಥಾಪಿಸು. ಜನಸೇವೆ ಮಾಡು. ನಿನ್ನ ಗುರಿಗಳು ಸದಾ ನಿಃಸ್ವಾರ್ಥವಾಗಿರಬೇಕು’ ಎಂದು ಉಪದೇಶಿಸಿದರು. ಅಲ್ಲಿಂದ 5 ಕಿ.ಮೀ. ದೂರದಲ್ಲಿದ್ದ ಆಶ್ರಮಕ್ಕೆ ಹೋಗಿ ರೋಗವನ್ನು ಗುಣಪಡಿಸುವ ವಿದ್ಯೆಯನ್ನು ಕಲಿತರು. ಗುರುಗಳಿಂದ ಕಲಿತ ಬ್ರಹ್ಮಜ್ಞಾನ ಸಮಸ್ತ ಅಜ್ಞಾನವನ್ನು ದೂರೀಕರಿಸಿತು.

ಭವರೋಗ ವೈದ್ಯ: ಗುರುಗಳ ಆದೇಶದಂತೆ ಶಾಂತಾನಂದ ಸ್ವಾಮಿಗಳು ಊರಿಗೆ ಹಿಂದಿರುಗಿ ಆಶ್ರಮ ನಿರ್ವಿುಸಿ ಜನಸೇವೆ ಮಾಡತೊಡಗಿದರು. ‘ನನ್ನ 65 ವರ್ಷಗಳಲ್ಲಿ 30 ವರ್ಷಗಳನ್ನು ಕಾಡುಗಳಲ್ಲಿ, ಮಿಕ್ಕ 35 ವರ್ಷಗಳನ್ನು ಹಳ್ಳಿ-ನಗರಗಳಲ್ಲಿ ಕಳೆದೆ. ಸದಾಕಾಲ ಎಲ್ಲರ ಮನೆಗಳನ್ನು ಗುಡಿಸುತ್ತ, ಅವರ ಆಧ್ಯಾತ್ಮಿಕ ಮನೆಗಳನ್ನು ಕಟ್ಟಲು ಯತ್ನಿಸಿದೆ. ಪ್ರತಿಯೊಬ್ಬರೂ ಜೀವನ್ಮುಕ್ತರಾಗಬೇಕೆಂಬ ಆಸೆ ಹೊಂದಿದ್ದೆ. ಅದು ಸ್ವಲ್ಪಮಟ್ಟಿಗೆ ಸಫಲವಾಯಿತು’ ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಅವರನ್ನು ಯಾರಾದರೂ ಜಾತಿ-ಮತ ಇತ್ಯಾದಿ ಅನಗತ್ಯ ಪ್ರಶ್ನೆ ಕೇಳಿದರೆ ಎಂದೂ ಉತ್ತರಿಸುತ್ತಿರಲಿಲ್ಲ. ಹುಟ್ಟಿನಿಂದ ಕನ್ನಡಿಗರೇ ಆಗಿದ್ದ ಅವರು 12 ಭಾಷೆಗಳಲ್ಲಿ ಮಾತನಾಡುತ್ತಿದ್ದರು. ಗುರುಗಳ ಆದೇಶದಂತೆ ಶಾಂತಾನಂದರು 3 ಕರ್ತವ್ಯಗಳನ್ನು ತಪ್ಪದೆ ಆಚರಿಸುತ್ತಿದ್ದರು. ಮೊದಲನೆಯದು ಆಶ್ರಮಕ್ಕೆ ಬಂದ ಭಕ್ತರನ್ನು ಸತ್ಸಂಗಕ್ಕೆ ಸೇರಿಸಿಕೊಳ್ಳುವುದು. ಎರಡನೆಯದು ಆಶ್ರಮವನ್ನು ಅಚ್ಚುಕಟ್ಟಾಗಿ ಪರಿಶುದ್ಧವಾಗಿ ಇರಿಸುವುದು. ಮೂರನೆಯದು ಆಶ್ರಮದಲ್ಲಿ ಕಷಾಯ-ಲೇಹ್ಯಗಳನ್ನು ಸದಾ ಇಟ್ಟುಕೊಂಡು ರೋಗಿಗಳಿಗೆ ನೀಡುವುದು. ಈ ಮೂರೂ ಕರ್ತವ್ಯಗಳನ್ನು 47 ವರ್ಷಗಳವರೆಗೂ ಮಾಡಿದರು, ‘ಭವರೋಗ ವೈದ್ಯ’ರೆಂದು ಪ್ರಥಿತರಾದರು. ಅವರ ಪ್ರವಚನಗಳು ಸರಳವಾಗಿಯೂ ಮನಮುಟ್ಟುವಂತೆಯೂ ಇರುತ್ತಿದ್ದುವು. ಆತ್ಮ-ಅನಾತ್ಮ ಭೇದವನ್ನು ಉದಾಹರಣೆ ಮೂಲಕ ಸ್ಪಷ್ಟವಾಗಿ ನಿರೂಪಿಸುತ್ತಿದ್ದರು. ಅವರ ಹೃದಯ ಅಕ್ಷಯಪಾತ್ರೆ; ಭಾವನೆಗಳು ತಾಯಿಯ ಮಮತೆಯಂತೆ ಇರುತ್ತಿದ್ದವು.

ಅವಧೂತಪ್ರವರರಾಗಿ, ಭವರೋಗವೈದ್ಯರಾಗಿ ಜನರ ನಡುವೆ ಇದ್ದು ‘ಅನಾಸಕ್ತಿಯೋಗ’ವನ್ನು ಧಾರಣೆ ಮಾಡಿಕೊಂಡಿದ್ದ ಶಾಂತಾನಂದರು 77ನೇ ವಯಸ್ಸಿನಲ್ಲಿ, 1983ರ ಫೆಬ್ರವರಿ 18ರಂದು ಬ್ರಹ್ಮಲೀನರಾದರು. ಸಂನ್ಯಾಸವಿಧಿಯಂತೆ ಅವರ ಸಮಾಧಿಯನ್ನು ಮಾಡಲಾಯಿತು. ಅವರು ನಿರ್ವಿುಸಿದ ಆಶ್ರಮ ಸಾಧನಾಸಕ್ತರಿಗೆ, ನಿಸ್ವಾರ್ಥಜೀವಿಗಳಿಗೆ ತವರುಮನೆ ಎನಿಸಿದೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)