More

    ಭವದ ಬೆಳಗು: ಮಾಯಾಮಿಥ್ಯಾತ್ವ ಸ್ವರೂಪ

    ಭವದ ಬೆಳಗು: ಮಾಯಾಮಿಥ್ಯಾತ್ವ ಸ್ವರೂಪಬ್ರಹ್ಮನನ್ನು ಅರಿಯಬೇಕಾದರೆ ಅವಿದ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕಷ್ಟೆ. ಇದು ಸಾಧಕರಿಗೆ ತುಂಬ ಅವಶ್ಯ. ಸ್ವಸ್ವರೂಪಜ್ಞಾನ ಪ್ರಾಪ್ತವಾಗಬೇಕಾದರೆ, ಮಿಥ್ಯೆಯ ಸ್ವರೂಪವನ್ನು ತಿಳಿಯುವುದು ಅವಶ್ಯ. ಅವಿದ್ಯೆ, ಮಾಯೆ ಎಂಬುದೆಲ್ಲ ಒಂದೇ ನಾಣ್ಯದ ಎರಡು ಮುಖಗಳು. ಮಾಯೆಯ ಕಾರಣದಿಂದಾಗಿ ಮಹತ್​ಪೂರ್ಣವಾದ ಆದಿತತ್ತ್ವದ ಪ್ರಸಾರದಿಂದ ಬ್ರಹ್ಮಾಂಡಗಳು ಹುಟ್ಟಿ ತೋರುತ್ತಿರುತ್ತವೆ. ಇದು ಹೇಳುವುದಕ್ಕೂ ಅಶಕ್ಯ. ವರ್ಣಿಸುವುದಕ್ಕೂ ಅಶಕ್ಯ. ಇಷ್ಟು ಮಾತ್ರವಲ್ಲ, ಅಗಾಧವಾದ ತೇಜಸ್ಸಿನಿಂದ ಹಬ್ಬಿ ಹರಡುತ್ತಿರುವುದು ಹೊಸ ರೀತಿಯಾಗಿದೆ – ಎಂಬ ಸಂಶಯ ಶುಕನ ಮನಸ್ಸಿನಲ್ಲಿ ಹುಟ್ಟಿತು. ಆಗ ವ್ಯಾಸರು ಇದಕ್ಕೆ ಸರಿಯಾದ ಉತ್ತರವನ್ನು ನೀಡಿದರು. ಈ ಸಂಗತಿಯನ್ನು ಸಹಜಾನಂದ ಗುರುಗಳು ಮಹಲಿಂಗರಂಗನಿಗೆ ಅರುಹಿದರು: ಇಲ್ಲಿ ಮಹಲಿಂಗರಂಗನು ಹೇಳುವ ಮಾತು ಹೀಗಿದೆ:

    ಮಂಜ ಮೊಟ್ಟೆಯ ಕಟ್ಟುತದರೊಳು 

    ಪಂಜಿನುರಿಯನು ಪಿಡಿದ ತೆರದಲಿ,

    ಸಂಜೆಗತ್ತಲೆಯೆನಿಪ ವಸನವನುಡಿಗೆಗಳವಡಿಸಿ |

    ರಂಜಿಸುವ ರವಿಯಂತೆ ತೇಜಃ

    ಪುಂಜಮಾಗಿಹ ಬೊಮ್ಮ ಮಾಯಾ

    ಪಂಜರದೊಳಡಗಿರ್ಪದಿದು ಬೆರಗಾದುದೆನಗೆಂದ || (1.5)

    ಈ ಪದ್ಯದ ಸ್ಥೂಲವಾದ ಅರ್ಥವನ್ನು ಮೊದಲು ತಿಳಿಯೋಣ. ‘‘ತೇಜಸ್ಸಿನಿಂದ ಕೂಡಿರುವ ಈ ಬ್ರಹ್ಮನು ಮಂಜಿನ ಮೊಟ್ಟೆಯನ್ನು ಕಟ್ಟಿ ಅದರಲ್ಲಿ ಉರಿಯನ್ನು ಹಿಡಿದ ರೀತಿಯಲ್ಲಿ ಇದ್ದಾನೆ. ಅವನು ಸಂಜೆಗತ್ತಲೆ ಎಂಬ ಬಟ್ಟೆಯನ್ನು ತೊಡಿಸಿ ಸಂತಸಪಡುವ ಸೂರ್ಯನಂತೆ ಇದ್ದಾನೆ. ಇಂಥ ಬ್ರಹ್ಮ ಮಾಯಾಪಂಜರದಲ್ಲಿ ಅಡಗಿರುವುದು ನನಗೆ ಅತ್ಯಂತ ಆಶ್ಚರ್ಯಕರವಾಗಿ ತೋರುತ್ತದೆ’’ ಎಂಬುದು ಈ ಪದ್ಯದ ಅರ್ಥ. ಇಲ್ಲಿ ಶುಕನ ಉದ್ಗಾರ ಸಹಜವಾಗಿದೆ. ಈ ಪದ್ಯದಲ್ಲಿ ಎರಡು ಸಾಮತಿಗಳಿವೆ. ‘‘ಮಂಜ ಮೊಟ್ಟೆಯ ಕಟ್ಟುತ ಅದರೊಳು ಪಂಜಿನ ಉರಿಯನು ಪಿಡಿದ ತೆರದಲಿ’’ ಎಂಬುದು ಒಂದಾದರೆ ‘‘ಸಂಜೆಗತ್ತಲೆ ಎನಿಪ ವಸನವನು ಉಡಿಗೆಗೆ ಅಳವಡಿಸಿ ರಂಜಿಸುವ ರವಿಯಂತೆ’’ ಎಂಬುದು ಇನ್ನೊಂದು. ಇವೆರಡು ಸಾಮತಿಗಳು ಅತ್ಯಂತ ಅಪೂರ್ವವಾದವುಗಳು. ಇಂಥ ಗೂಢ ಸಾಮತಿಗಳನ್ನು ಬೇರೆ ಕವಿಗಳು ಕಲ್ಪಿಸುವುದಕ್ಕೂ ಅಸಾಧ್ಯ! ಮಂಜಿನ ಉಂಡೆಯಲ್ಲಿ ಉರಿಯುತ್ತಿರುವ ದೊಂದಿ ಇಡುವುದು ವಿಲಕ್ಷಣವಾದುದೇ ಸೈ. ಮಂಜು ಎಂಬುದು ಇಲ್ಲಿ ಮಾಯೆ. ಇನ್ನು ‘ಉರಿ’ ಎಂಬುದು ಬ್ರಹ್ಮ! ಅದರಂತೆಯೇ, ಸಂಜೆಗತ್ತಲು ಮಾಯೆಯಾದರೆ; ರವಿ ಎಂಬುದು ಬ್ರಹ್ಮ! ಇವೆರಡು ಸಾಮತಿಗಳಲ್ಲಿ ಅಡಗಿರುವ ಅಪೂರ್ವವಾದ ಅಲಂಕಾರಧ್ವನಿ ಊಹಾತೀತವಾದುದು!

    ಸಾಧಕರಿಗೆ ಯಾವುದು ಮಾಯೆ? ಯಾವುದು ಬ್ರಹ್ಮ? ಎಂಬಂಥ ಪ್ರಶ್ನೆಗಳು ಬಾಧಿಸುವುದೇನೊ ಸರಿ! ಇದು ಶುಕನ ಪ್ರಶ್ನೆಯೂ ಹೌದು! ಇದು ಅದ್ವೈತಸಿದ್ಧಾಂತದ ಮೂಲ ಸಂದೇಹವೂ ಹೌದು. ಆಗ ವ್ಯಾಸರು ಸಹಜಾನಂದರ ಮೂಲಕ ಹೇಳುವ ಮಾತಿದು.

    ಬ್ರಹ್ಮ ಮಾಯೆಗಳೆರಡು ತಮ್ಮೊಳ

    ಗೊಮ್ಮೆಯೂ ಬೇರೆನಿಸದಾವಗ

    ನೆಮ್ಮಿಕೊಂಡಿಹವವರ ಪರಿಯನು ತಿಳುಹಬೇಕೆನಲು |

    ಬ್ರಹ್ಮವೆತ್ತಲೊ! ಮಾಯೆಯೆತ್ತಲೊ!

    ಚರ್ಮದೃಷ್ಟಿಗೆ ಮಾಯೆ ತಥ್ಯವು;

    ನಿರ್ಮಲಾತ್ಮ ಜ್ಞಾನದೃಷ್ಟಿಗೆ ಮಿಥ್ಯೆ ನೋಡೆಂದೆ || (1.6)

    ಮೊದಲು ಈ ಪದ್ಯದ ಸ್ಥೂಲಾರ್ಥವನ್ನು ತಿಳಿಯೋಣ: ‘‘ಬ್ರಹ್ಮ-ಮಾಯೆ ಇವೆರಡು ತಮ್ಮಲ್ಲಿ ಒಮ್ಮೆಯಾದರೂ ಬೇರೆಬೇರೆಯಾಗಿರುವುದಿಲ್ಲ. ಅವು ಒಂದನ್ನೊಂದು ಸದಾ ಆಶ್ರಯಿಸಿಕೊಂಡೇ ಇರುತ್ತವೆ. ಇದರ ರಹಸ್ಯವೇನು ಗೊತ್ತೆ? ವಿಚಾರವಿಲ್ಲದ ದೃಷ್ಟಿಗೆ ಮಾಯೆಯೆಂಬುದು ನಿಜ. ಆದರೆ, ನಿರ್ಮಲವಾದ ಆತ್ಮಜ್ಞಾನವನ್ನು ಪಡೆದವರ ವಿಚಾರದೃಷ್ಟಿಗೆ ಇದು ಸುಳ್ಳು.’’ ಈ ಪದ್ಯದ ಪೂರ್ವಾರ್ಧವು ಶುಕನ ಪ್ರಶ್ನೆಯನ್ನು ಆಶ್ರಯಿಸಿಕೊಂಡು ವ್ಯಾಸರು ವಾಕ್ಯವನ್ನು ಉದ್ಧಾರಗೊಳಿಸಿಕೊಂಡಿದ್ದಾರೆ. ಅವರು ಪದ್ಯದ ಉತ್ತರಾರ್ಧದಲ್ಲಿ ಆ ಮಾತಿಗೆ ಉತ್ತರವನ್ನು ನೀಡುತ್ತಿದ್ದಾರೆ.

    ಸಾಧಕನು ಚರ್ಮದೃಷ್ಟಿಯಿಂದ ಮಾಯೆಯ ಸ್ವರೂಪವನ್ನು ತಿಳಿಯಲು ಹವಣಿಸುತ್ತಿದ್ದಾನೆ. ಇದು ಬಾಹ್ಯಚಕ್ಷುವಿನಿಂದ ತಿಳಿಯಲು ಸಾಧ್ಯವಿಲ್ಲ. ನಮ್ಮ ಹೊರಗಿನ ಕಣ್ಣು ಇಂದ್ರಿಯಗಳ ಸಂದಿಗ್ಧದಲ್ಲಿ ಸಿಕ್ಕಿಹಾಕಿಕೊಂಡಿದೆ.

    ಅದು ಬಾಹ್ಯವನ್ನು ಮಾತ್ರ ನೋಡಬಲ್ಲುದು. ಬಾಹ್ಯಚಕ್ಷು ಶರೀರಧರ್ಮದ ಒಂದು ಸಾಧನ ಮಾತ್ರ. ಇಂದ್ರಿಯಗಳ ಪರಿಮಿತ ಪ್ರಪಂಚದಿಂದ ‘ಮಾಯೆ’ ಎಂಬುದು ಸತ್ಯವೆಂದೇ ನಮಗೆ ಭಾಸವಾಗುತ್ತದೆ. ಆದರೆ, ನಿರ್ಮಲವಾದ ಆತ್ಮಜ್ಞಾನಿಗೆ ಮಾತ್ರ ಮಾಯೆಯು ಸುಳ್ಳೆಂದೇ ಅರಿವಾಗುತ್ತದೆ. ನಮ್ಮ ಇಂದ್ರಿಯಗಳು ಸತ್ಯ-ಸುಳ್ಳುಗಳನ್ನು ತಿಳಿಯಲು ಸಾಧ್ಯವಾಗಿಲ್ಲ. ಆದರೆ, ಆತ್ಮಜ್ಞಾನ ಪಡೆದವನು ಮಾತ್ರ ಮಾಯೆ-ಬ್ರಹ್ಮ ಇವುಗಳ ಸತ್ಯ-ತಥ್ಯಗಳನ್ನು ತಿಳಿಯಬಲ್ಲ.

    ಸತ್ಯವನ್ನಾಗಲಿ, ಸತ್​ಜ್ಞಾನವಾಗಲಿ, ಅರಿವನ್ನಾಗಲಿ ಸರಿಯಾಗಿ ತಿಳಿಯುವುದು ಎಂದೂ ಅಸಾಧ್ಯವೇ. ಇದು ತಿಳಿಯಬೇಕಾದರೆ ದೈವದ ಅನುಗ್ರಹವೋ ಗುರುವಿನ ಕೃಪೆಯೋ ಬೇಕಾಗುತ್ತದೆ.

    (ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts