ರಾಗ-ವಿರಾಗಿ ಕೊಳಹಾಳು ಶ್ರೀಕೆಂಚಾವಧೂತರು

| ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್​

ಹೊಳಲಕೆರೆ ತಾಲೂಕಿನ ಗಡಿಗ್ರಾಮ ಕೊಳಹಾಳು. ಇದು ಹಿರಿಯೂರು ತಾಲೂಕಿನ ಸೆರಗಿಗೆ ಅಂಟಿಕೊಂಡಿದೆ. ಈ ಹಳ್ಳಿಯ ಎಲ್ಲ ವ್ಯವಹಾರಗಳು ನಡೆಯುವುದು ಹಿರಿಯೂರು ತಾಲೂಕಿನಲ್ಲಿಯೇ. ಚಿತ್ರದುರ್ಗ-ಹಿರಿಯೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಮಂಗಲ ಸಿಗುತ್ತದೆ. ಈ ಗ್ರಾಮದಿಂದ ಪಶ್ಚಿಮಕ್ಕೆ 12 ಕಿ.ಮೀ. ದೂರದ ಹಸಿರುಕಣಿವೆಯ ನಡುವೆ ಈ ಹಳ್ಳಿ ಇದೆ. ಈ ಊರಿನ ಈಶಾನ್ಯಭಾಗಕ್ಕೆ ಕೆಂಚಾವಧೂತರ ಸಮಾಧಿ ಉಂಟು.

ಸಾಧಕ: ಕೆಂಚಾವಧೂತರ ಜನನ ಯಾರಿಗೂ ತಿಳಿಯದು. ಒಂದು ಅಂದಾಜಿನ ಪ್ರಕಾರ 1870ರ ಸುಮಾರಿಗೆ ಹುಟ್ಟಿರಬೇಕು. ಹುಟ್ಟು ಹೆಸರು ದೊಡ್ಡಕೆಂಚಪ್ಪ. ತಂದೆ-ತಾಯಂದಿರು ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಸಮೀಪದ ಭರಮಗಿರಿ ಎಂಬ ಊರಿನವರು. ತಂದೆ ಮಾರಪ್ಪ, ತಾಯಿ ಚನ್ನಮ್ಮ. ಇವರು ವೀರಶೈವಮತದ ಸದ್ಗ ೃಸ್ಥರು. ಸರಿಸುಮಾರು 150 ವರ್ಷಗಳ ಹಿಂದೆ ಬಂದ ಭೀಕರ ಬರಗಾಲದಲ್ಲಿ ಅವರ ಮನೆತನದಲ್ಲಿ ಬಂದ ಪಶುಪಾಲನೆಯನ್ನು ಬಿಟ್ಟು, ಮನೆದೇವರಾದ ಕಣಿವೆ ಮಾರಕ್ಕನ ಸೂಚನೆಯ ಪ್ರಕಾರ ಕೊಳಹಾಳಿಗೆ ಬಂದು ನೆಲೆಸಿದರು. ಕೆಂಚಪ್ಪನ ಜನನವಾದದ್ದು ಇಲ್ಲಿಯೇ. ಇವರಿಗೆ ಇಬ್ಬರು ಅಣ್ಣತಮ್ಮಂದಿರು- ಹೊಳೆಯಪ್ಪ ಮತ್ತು ಕರಿಯಪ್ಪ. ಕೆಂಚಪ್ಪ ತಂದೆ-ತಾಯಿಗಳಲ್ಲಿಯೂ ಗುರು-ಹಿರಿಯರಲ್ಲಿಯೂ ಶ್ರದ್ಧಾಭಕ್ತಿ ಉಳ್ಳವನು. ನಿದ್ರೆ ಮಾಡುವಾಗಲೂ ಪರಮಾತ್ಮನ ಸ್ಮರಣೆ ಮಾಡುತ್ತಿದ್ದನು. ಒಮ್ಮೆ ತಂದೆಗೆ ‘ಪರಮಾತ್ಮನನ್ನು ಕಾಣಬೇಕಾದರೆ ಏನು ಮಾಡಬೇಕು?’ ಎಂದು ಕೇಳಿದನಂತೆ. ಅದಕ್ಕವರು ‘ಅರೂಪ, ಸ್ವರೂಪ, ಗುರುರೂಪ ಎಂದು 3 ವಿಧಗಳುಂಟು. ಇವನ್ನರಿತರೆ ದೇವರ ಸಾಮೀಪ್ಯದ ಅನುಭವ ದೊರಕುತ್ತದೆ’ ಎಂದರಂತೆ. ಈತನಿಗೆ ಚಿಕ್ಕಂದಿನಲ್ಲಿ ಹಸು-ಮೇಕೆ-ಕುರಿ ಕಾಯುವುದೇ ಕಾಯಕ. ಯಾವ ಶಾಲೆಗೂ ಹೋದವನಲ್ಲ. ಅನಕ್ಷರಸ್ಥ ಎನ್ನಬೇಕೇ ಹೊರತು ಅವಿದ್ಯಾವಂತನಲ್ಲ. ಚಿಕ್ಕಂದಿನಲ್ಲೇ ಕೆಲವು ಜನ್ಮಜಾತ ಸಿದ್ಧಿಗಳು ಉಂಟಾಗಿದ್ದವು. ಮುಂಜಾನೆ ಎದ್ದು ಕೈಕಾಲು ತೊಳೆದು ಹಣೆಗೆ ವಿಭೂತಿ ಧರಿಸಿ, ತಾಯಿ-ತಂದೆಯರಿಗೆ ನಮಸ್ಕರಿಸಿ ಹೊರಡುತ್ತಿದ್ದನು.

ಕೊಳಹಾಳು ಗ್ರಾಮಕ್ಕೆ ಐದಾರು ಕಿ.ಮೀ. ದೂರದಲ್ಲಿ ‘ಸಿದ್ದಪ್ಪನ ವಜ್ರ’ ಎಂಬ ತಪ್ಪಲು ಪ್ರದೇಶವಿದೆ. ಇಲ್ಲಿ ಬಸವನಹೊಳೆ, ನವಿಲುಮರಡಿ, ಮೂರುಮರಡಿ ಬಯಲು, ವಡ್ಡಿನಹೊಳೆ ಎಂಬ ಸುಂದರ ತಾಣಗಳಿವೆ. ಅಲ್ಲಿ ಕೆಂಚಪ್ಪ ಕುರಿಕಾಯುತ್ತ ಶಿವಧ್ಯಾನದಲ್ಲಿ ಮಗ್ನನಾಗಿರುತ್ತಿದ್ದ. ಸಿದ್ಧಪ್ಪನ ವಜ್ರ ಅವಧೂತರ-ಅನುಭಾವಿಗಳ ವಸತಿ ಪ್ರದೇಶ ಆಗಿರಬೇಕು. ಆ ಸಂಬಂಧವಾದ ಕುರುಹುಗಳು ಅಲ್ಲಲ್ಲಿವೆ. ಜನಸಾಮಾನ್ಯರು ಅಲ್ಲಿಗೆ ಹೋಗಲಾರರು. ಕಷ್ಟಸಾಧ್ಯ ಎನಿಸುವಂಥ ಕಾಡುಕಂಟಿಗಳ ಬೆಟ್ಟದ ತಪ್ಪಲಿನ ಪ್ರದೇಶವಿದು! ಇದು ಒಂದು ಕಾಲಕ್ಕೆ ಭಯಂಕರವಾದ ಕಾಡೇ ಆಗಿರಬೇಕೆಂದು ಸುತ್ತಲ ಹಿರಿಯರು ಹೇಳುತ್ತಿದ್ದುದುಂಟು.

ಗುರುಬೋಧೆ: ಕೆಂಚಪ್ಪ ಗುಹೆಯಲ್ಲಿ ಧ್ಯಾನಸ್ಥನಾಗಿ ಹಟಯೋಗ ಸಾಧನೆ ಮಾಡುತ್ತಿದ್ದುದುಂಟು. ಹಂಪಿಕ್ಷೇತ್ರದ ಬಳಿಯ ಕಾಳಘಟ್ಟ ಎಂಬಲ್ಲಿ ತಪಸ್ಸು ಮಾಡಿಕೊಂಡಿರುತ್ತಿದ್ದ ಹಟಯೋಗಸಿದ್ಧರಾದ ರುದ್ರಮುನಿ ಎಂಬ ಅವಧೂತರು ಇದ್ದರು. ಇವರು ‘ಸಿದ್ಧಪ್ಪನ ವಜ್ರ’ದ ಬಳಿಗೆ ಬಂದು ಕೆಂಚಪ್ಪನಿಗೆ ‘ಅನುಗ್ರಹ’ ಮಾಡಿದರು. ರುದ್ರಮುನಿ ಒಬ್ಬ ಅಪೂರ್ವ ಸಾಧಕರು. ಬಾಹ್ಯಪ್ರಪಂಚ ಒಡನಾಟ ಬೇಸರವಾದಾಗ ಗಾಂಜಾ-ಅಫೀಮು ಸೇವಿಸದೆ, ಜೋಳಿಗೆಯಲ್ಲಿ ಇಟ್ಟುಕೊಂಡಿರುತ್ತಿದ್ದ ‘ಮಿಡಿನಾಗರ’ ತೆಗೆದು ನಾಲಿಗೆಗೆ ಕಚ್ಚಿಸಿಕೊಂಡು, ಆ ಘೊರವಿಷದ ಮತ್ತಿನಲ್ಲಿ ಗಂಟೆಗಟ್ಟಲೆ ಸಮಾಧಿಸ್ಥರಾಗಿ ಇರುತ್ತಿದ್ದರಂತೆ! ಕೆಂಚಪ್ಪನವರಿಗೆ ರುದ್ರಮುನಿ ದೇಶಿಕರು ಬಹುಸಮರ್ಥವಾಗಿ ಲೌಕಿಕ-ಪಾರಮಾರ್ಥಿಕ ವಿದ್ಯೆ ಕಲಿಸಿದ್ದುಂಟು. ಇದು ಅವರ ಸಾಧನೆಗೆ ಮೆರುಗಿತ್ತು ಮುಂದೆ ಜನರಿಂದ ಕೆಂಚಾವಧೂತರೆಂದು ಪ್ರಸಿದ್ಧಿ ಪಡೆದರು.

ಕೆಂಚಾವಧೂತರು ಪ್ರತಿನಿತ್ಯ ದನ-ಕುರಿಗಳನ್ನು ಬೆಟ್ಟದ ತಪ್ಪಲಿಗೆ ಹೊಡೆದುಕೊಂಡು ಹೋಗುತ್ತಿದ್ದುದು ಸರಿಯಷ್ಟೆ. ಅಲ್ಲಿ ಹುಲಿ-ತೋಳಗಳು ದನ-ಕುರಿಗಳನ್ನು ತಿನ್ನಲು ಬಂದಾಗ ಕೆಂಚಾವಧೂತರ ಒಪ್ಪಿಗೆಗಾಗಿ ಕಾಯುತ್ತಿದ್ದುದುಂಟು! ಅವರು ಒಂದೊಮ್ಮೆ ಒಪ್ಪಿಗೆ ಕೊಡದಿದ್ದರೆ ಸುಮ್ಮನೆ ಹೋಗುತ್ತಿದ್ದವಂತೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಬಿಟ್ಟರೆ ಹೆಚ್ಚಿನ ಪವಾಡಗಳನ್ನು ಕೆಂಚಾವಧೂತರು ಮಾಡಿದ್ದಾರೆ. ಕುಂಬಾರುಹುಳು ಕೆಸರಿನಲ್ಲಿದ್ದರು ಅಂಟಿಯೂ ಅಂಟದಂತೆ ಇರುವಂತೆಯೇ ಇವರೂ ಸಂಸಾರದಲ್ಲಿ ಇದ್ದರು. ಅವಧೂತ ಪರಂಪರೆಯ ಸಾಧಕರಾಗಿದ್ದರು. ಆದರೆ, ಸಂನ್ಯಾಸಿಯಂತೆ ಬದುಕಿದವರು. ಇವರ ಹೆಂಡತಿಯ ಹೆಸರು ಹುಚ್ಚಮ್ಮ. ಇವರಿಗೆ ಐವರು ಗಂಡುಮಕ್ಕಳು- ರುದ್ರಪ್ಪ, ಗೂಳಪ್ಪ, ತಿಪ್ಪಣ್ಣ, ಮಾರಪ್ಪ, ಲಿಂಗಪ್ಪ. ಇಬ್ಬರು ಹೆಣ್ಣುಮಕ್ಕಳು- ಭೈರಮ್ಮ ಮತ್ತು ಕೆಂಚಮ್ಮ. ಭೈರಮ್ಮನನ್ನು ಸೋದರಳಿಯನಿಗೆ ಲಗ್ನ ಮಾಡಿ ಮನೆಯಲ್ಲೇ ಇಟ್ಟುಕೊಂಡಿದ್ದರು. ಕೆಂಚಮ್ಮನನನ್ನು ಗೂಳಿ ಹೊಸಹಳ್ಳಿ ಮಧುರೆ ಅಜ್ಜಪ್ಪನವರಿಗೆ ಧಾರೆಯೆರೆದು ಕೊಟ್ಟಿದ್ದರು. ಉಳಿದ ಗಂಡುಮಕ್ಕಳನ್ನು ಹತ್ತಿರದ ಸಂಬಂಧಿಕರಲ್ಲಿ ಮದುವೆ ಮಾಡಿದರು. ಕೊಳಹಾಳಿನಲ್ಲಿ ಇವರ ಮೊಮ್ಮಕ್ಕಳು, ಮರಿಮಕ್ಕಳು ಇದ್ದಾರೆ. ಇವರ ಮೊಮ್ಮಗ ಕೆಂಚಪ್ಪ ತಾತನ ಸತ್ಯಸಂಗತಿಗಳನ್ನು ಜನರಿಗೆ, ಬಂದವರಿಗೆ ಉತ್ಪ್ರೇಕ್ಷೆಯಿಲ್ಲದೆ ಹೇಳುತ್ತಿದ್ದುದುಂಟು.

ಅದ್ವೈತಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ಕೆಂಚಾವಧೂತರ ನಡವಳಿಕೆಗಳು ಮೇಲ್ನೋಟಕ್ಕೆ ಲೋಕವಿರುದ್ಧ ಎನಿಸಿದರೂ ಆಂತರ್ಯದಲ್ಲಿ ಅದಮ್ಯ ಲೋಕಪ್ರೇಮವೇ ತುಂಬಿರುತ್ತಿತ್ತು. ಅಸಂಖ್ಯಾತ ಶಿಷ್ಯರೂ ಭಕ್ತರೂ ಹಿಂಬಾಲಿಸುತ್ತಿದ್ದರು. ಕೆಲವೊಮ್ಮೆ ನಿಷ್ಕಾರಣವಾಗಿ ದ್ವೇಷಿಸುವವರೂ ಇರುತ್ತಿದ್ದರು. ಇಂಥ ಕೆಲವರು ಒಟ್ಟಿಗೆ ಸೇರಿ ಕೆಂಚಪ್ಪನವರು ಸಂಪ್ರದಾಯಕ್ಕೆ ವಿರುದ್ಧವಾದ ಕೆಲಸ ಮಾಡುತ್ತ, ಸಮಾಜದ ಐಕ್ಯತೆಗೆ ಭಂಗ ತರುತ್ತಿದ್ದಾರೆಂದು ಆರೋಪಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರಂತೆ. ಇವರಿಗೆ ನ್ಯಾಯಾಲಯದಿಂದ ನೋಟಿಸು ಬಂದಿತು. ಅವರು ಕೋರ್ಟಿಗೆ ಹಾಜರಾಗಿ ಮ್ಯಾಜಿಸ್ಟ್ರೇಟ್ ಅವರಿಗೆ ಪತ್ರವೊಂದನ್ನು ನೀಡಿದರಂತೆ. ಆ ಪತ್ರ ಬಲು ವಿಲಕ್ಷಣವಾಗಿತ್ತು. ಆ ಪತ್ರದ ಒಕ್ಕಣೆಯೇ ಹೀಗಿತ್ತು:

ಓಂ ಶ್ರೀ ಗುರುವೇನ್ನಮಃ

ಜ್ಞಾನಾರ್ಜಿ

ದೇಶವಿಲ್ಲದ ಜಿಲ್ಲೆ, ಗ್ರಾಮವಿಲ್ಲದ ತಾಲ್ಲೂಕು

ರೂಪು ನಾಮವಿಲ್ಲದ ಜಗದ್ಭರಿತ

ಮಹಾರಾಜರಿಗೆ ಶಾಲಿವಾಹನ ಶಕೆ 21600ಕ್ಕೆ

ಸರಿಯಾದ ಮಹಾ ತಾರೀಖು 216ರಲ್ಲೂ

ಮಾನವಿಲ್ಲದ…

ಇದು ಹೀಗೆ ಮುಂದುವರಿದು, ಇದಕ್ಕೆ ಸಾಕ್ಷಿಗಳು- ದೇಹವಿಲ್ಲದವನು, ರೂಪು ಇಲ್ಲದವನು, ನಾಮವಿಲ್ಲದವನು, ನಿಂತರೆ ನೆರಳಿಲ್ಲದವನು, ಎಂದು ಉಲ್ಲೇಖಿಸಿರುವ ಪತ್ರವನ್ನು ಮ್ಯಾಜಿಸ್ಟ್ರೇಟ್ ನೋಡಿ ಕೆಂಚಾವಧೂತರ ವ್ಯಕ್ತಿತ್ವ ತಿಳಿದ ಮೇಲೆ ನ್ಯಾಯಾಲಯ ಕೇಸನ್ನು ವಜಾ ಮಾಡಿತಂತೆ.

ಮಹಿಮೆ: ಕೆಂಚಾವಧೂತರು ಅಸಾಮಾನ್ಯ ಯೋಗಿಗಳು ಎಂಬುದಕ್ಕೆ ಹಲವಾರು ದೃಷ್ಟಾಂತಗಳು ನಡೆದಿವೆ. ಕೋರ್ಟಿನಿಂದ ಖುಲಾಸೆ ಆದ ಮೇಲೆ ಇವರಿಗೆ ಕೆಲವರು ಏನಾದರೂ ಮಾಡಿ ಕೊಲ್ಲಬೇಕೆಂಬ ಸಂಚನ್ನು ಹೂಡಿದರು. ಕಜ್ಜಾಯದಲ್ಲಿ ವಿಷ ಬೆರೆಸಿ ತಿನ್ನಿಸಿದ ಪ್ರಸಂಗವೂ ಒದಗಿತು. ಕೆಂಚಾವಧೂತರಿಗೆ ಈ ಮರ್ಮ ಗೊತ್ತಾಗಿ, ‘ನಾನೀಗ ತಿನ್ನುತ್ತೇನೆ. ಪರಿಣಾಮ ವಿಪರೀತವಾಗುತ್ತದೆ. ನೀವು ನನ್ನನ್ನು ದೂರಬೇಡಿ’ ಎಂದು ಹೇಳುತ್ತಲೇ ಬಾಯಿಗಿಟ್ಟುಕೊಂಡರಂತೆ. ಇದನ್ನು ತಂದುಕೊಟ್ಟ ಪಂಡಿತನು ನೆಲಕ್ಕೆ ಬಿದ್ದು ರಕ್ತವಾಂತಿ ಮಾಡಿಕೊಂಡು ಒದ್ದಾಡತೊಡಗಿದನು. ಆಗ ಕೆಂಚಾವಧೂತರು ಕರುಣೆಯಿಂದ ಮನ್ನಿಸಿ ವಿಷದ ಕಜ್ಜಾಯವನ್ನು ಹೊರಕ್ಕೆ ಉಗುಳಿಸಿಬಿಟ್ಟರಂತೆ. ಆ ಪಂಡಿತನಿಗೆ ಬಾಧೆ ನಿವಾರಣೆಯಾಯಿತು. ಇಂಥ ಹಲವು ಪವಾಡಗಳಿವೆ.

ರುದ್ರಮುನಿಗಳು ಹಂಪಿಯ ‘ಕಾಳಘಟ್ಟ’ದಲ್ಲಿ ಇದ್ದದ್ದು ಸರಿಯಷ್ಟೆ. ಅವರೂ ಮಹಾನ್​ಯೊಗಿಗಳೇ. ಅವರ ಬಳಿ ಸ್ವರಚಿತ ಗ್ರಂಥಸಾಹಿತ್ಯ ಮತ್ತು ಅಧ್ಯಾತ್ಮಸಂಬಂಧಿ ಹೊತ್ತಗೆಗಳು ಇದ್ದವು. ರುದ್ರಮುನಿಗಳ ದೇಹಾಂತ್ಯ ಸಮೀಪಿಸಿತು. ಆಗ ಶಿಷ್ಯರನ್ನು ಕರೆದು ಬಿಳಿಜೋಳವನ್ನು ಕೈಯಲ್ಲಿ ಕೊಟ್ಟು ‘ಯಾರು ಇದನ್ನು ನನ್ನ ಗದ್ದುಗೆಯ ಮೇಲೆ ಎರಚಿದಾಗ ಸಿಡಿದು ಅರಳುತ್ತವೋ ಅವರಿಗೆ ನನ್ನ ಬಳಿಯಿರುವ ಗ್ರಂಥಗಳೆಲ್ಲವನ್ನು ಕೊಡಬೇಕು’ ಎಂದರಂತೆ! ಅದೇ ರೀತಿ ರುದ್ರಮುನಿಗಳ ದೇಹಾಂತ್ಯವಾಯಿತು. ಸುದ್ದಿ ಕೆಂಚಾವಧೂತರಿಗೆ ತಿಳಿದು ರುದ್ರಮುನಿಗಳ ಸಮಾಧಿ ಬಳಿ ಹೋದರು. ಅಲ್ಲಿ ರುದ್ರಮುನಿಗಳು ಅಭ್ಯಾಸಮಾಡುತ್ತಿದ್ದ ಎಲ್ಲ ಗ್ರಂಥಗಳು ಇದ್ದುವು. ಇವರು ಬಿಳಿಜೋಳವನ್ನು ಮುಷ್ಟಿಯ ತುಂಬ ಹಿಡಿದು ಸಮಾಧಿಯ ಮೇಲೆ ಎರಚಿದರು. ಅವು ನೂರಾರಾಗಿ ಸಿಡಿದು ಅರಳಾದವಂತೆ. ಇವರು ಬರುವ ಮೊದಲು ಉಳಿದ ಶಿಷ್ಯರು ಜೋಳ ಎರಚಿದರೂ ಅರಳಾಗಿರಲಿಲ್ಲವಂತೆ. ಆದರೆ, ಸಮಾಧಿ ಹೊಂದಿದ 2 ದಿನ ನಂತರ ಬಂದು ಜೋಳ ಎರಚಿ, ಪವಾಡ ಆದಮೇಲೆ ರುದ್ರಮುನಿಗಳ ಎಲ್ಲ ಗ್ರಂಥಗಳನ್ನು ಕೆಂಚಾವಧೂತರು ಕೊಳಹಾಳಿಗೆ ತಂದರಂತೆ. ಈಗಲೂ ಅವು ಅವರ ವಂಶೀಕರ ಮನೆಯಲ್ಲಿವೆ. ಅವನ್ನು ಪ್ರತಿವರ್ಷ ದಸರಾ ಸಮಯದಲ್ಲಿ ತೆಗೆದು ಸರಸ್ವತೀಪೂಜೆ ಮಾಡುವುದುಂಟು. ಈ ಗ್ರಂಥಗಳಲ್ಲಿ ಶ್ರೀದೇವಿಮಹಾತ್ಮೆ್ಯ, ಅನುಭವಾಮೃತ, ಜ್ಞಾನಸಿಂಧು, ನಿಜಗುಣರ ಹಳೆಯ ಮುದ್ರಣ ಅಥವಾ ಕೈಬರಹದ ಪ್ರತಿಗಳಿರುವಂತೆ ತೋರುತ್ತದೆ.

ಕೆಂಚಾವಧೂತರ ಪವಾಡದ ಕತೆಗಳು ನೂರಾರು. ಕೊಳಹಾಳು ಸಮೀಪದ ತೇಕಲವಟ್ಟಿ ಗ್ರಾಮಕ್ಕೆ ಭೀಕರ ಕ್ಷಾಮ ಅಡರಿತು. ಕೆಂಚಾವಧೂತರು ಅಲ್ಲಿಗೆ ಹೋದಾಗ, ತುಂಡುರೊಟ್ಟಿ ಸಿಗದಂಥ ಪರಿಸ್ಥಿತಿ ಕಂಡಿತು. ಅವರು ಹರಿಜನ ಕೇರಿಗೆ ಹೋದಾಗ ಹೆಣ್ಣುಮಗಳೊಬ್ಬಳು ಸಿಕ್ಕ ಪಾವಿನಷ್ಟು ಜೋಳದಲ್ಲಿ ಮೂರುರೊಟ್ಟಿ ಮಾಡಿದ್ದಳು. ಕೆಂಚಾವಧೂತರು ಕೇಳಿದ್ದಕ್ಕೆ ಮೂರು ರೊಟ್ಟಿಯನ್ನು ಅವರ ಕೈಗಿಟ್ಟು ನಮಸ್ಕರಿಸಿದಳು. ಕೆಂಚಾವಧೂತರು ರೊಟ್ಟಿಯನ್ನು ಚೂರುಚೂರು ಮಾಡಿ ಊರಿಗೆಲ್ಲ ಹಂಚಿಬಿಟ್ಟರು. ಆದರೆ, ಅವರ ಕೈಯಲ್ಲಿದ್ದ ರೊಟ್ಟಿ ಮುಗಿಯಲಿಲ್ಲ. ಈ ಪವಾಡಗಳು ಮಾನುಷಕೇಂದ್ರಿತವಲ್ಲ; ಯೋಗಕೇಂದ್ರಿತವಾದುದು.

ಅವಧೂತ: ಇವರಿಗೆ ‘ಕೆಂಚಾವಧೂತ’ ಎಂದು ಕರೆದು ಆಶೀರ್ವದಿಸಿದವರು ಚಿತ್ರದುರ್ಗ ಬೃಹನ್ಮಠದ ಮುರುಘರಾಜೇಂದ್ರ ಸ್ವಾಮಿಗಳೆಂದು ಪ್ರತೀತಿ. ಪ್ರತಿ ಶಿವರಾತ್ರಿ ಕಾಲದಲ್ಲಿ ಹೊಲದಲ್ಲಿ ಮಾಗಿ ಮಾಡಲು ರೈತರು ಕಬ್ಬಿಣದ ನೇಗಿಲು ಹೊಡೆಯುವುದು ವಾಡಿಕೆ. ಕೆಂಚಪ್ಪ ಹೊಲದಲ್ಲಿ ನೇಗಿಲು ಹೊಡೆಯುತ್ತಿದ್ದರು. ಅದೇ ಹೊತ್ತಿನಲ್ಲಿ ಮುರುಘರಾಜೇಂದ್ರರು ಕೆನ್ನೆಡಲು ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗುವವರಿದ್ದರು. ಆಗ ಸ್ವಾಮಿಗಳು ಕೆಂಚಪ್ಪನ ದೈವೀಶಕ್ತಿಯನ್ನು ಪ್ರಕಟಪಡಿಸಲು ತಮ್ಮ ಪಲ್ಲಕ್ಕಿ ಹೊತ್ತಿದ್ದ ಮುಂದಿನ ಜನಗಳನ್ನು ಬಿಡಿಸಿದರು. ಆಗ ಪಲ್ಲಕ್ಕಿಯು ಹಿಂದಿನ ಜನ ಹೊತ್ತಿದ್ದರಲ್ಲಿಯೇ ಸಾಗುತ್ತಿತ್ತು. ಇದನ್ನು ಕಂಡ ಕೆಂಚಪ್ಪ ನೇಗಿಲಿಗೆ ಹೂಡಿದ್ದ ಮುಂದಿನ ಎತ್ತುಗಳನ್ನು ಬಿಡಿಸಿದರು. ನೇಗಿಲು ನಿಲ್ಲದೆ ಮುಂದೆ ಸಾಗುತ್ತಿತ್ತು. ಆಗ ಸ್ವಾಮಿಗಳು ಪಲ್ಲಕ್ಕಿಯಿಂದ ಇಳಿದು, ಕೆಂಚಪ್ಪನನ್ನು ಕರೆಸಿ ‘ಅಧ್ಯಾತ್ಮ ವಿಚಾರವನ್ನು ಚೆನ್ನಾಗಿ ತಿಳಿದಿದ್ದೀಯೆ’ ಎಂದು ಹೇಳಿ ‘ಶ್ರೀಕೆಂಚಾವಧೂತ’ ಎಂದು ಕರೆದು ಆಶೀರ್ವದಿಸಿದರು. ನಂತರ ಜನರು ಅವರನ್ನು ಕೆಂಚಾವಧೂತರೆಂದು ಕರೆಯಲಾರಂಭಿಸಿದರು.

ಕೆಂಚಾವಧೂತರು ದೇಹ ಬಿಟ್ಟಿದ್ದು ಯಾವಾಗ ಎಂಬುದಕ್ಕೆ ದಾಖಲೆಗಳಿಲ್ಲ. ಅದು ಸುಮಾರು 1930ರ ಹೊತ್ತಿಗೆ ಇರಬೇಕು. ಅವರ ಮೊಮ್ಮಗ ಕೆಂಚಪ್ಪ 15ರ ಪ್ರಾಯದಲ್ಲಿದ್ದಾಗ ಕೆಂಚಾವಧೂತರು ದೇಹ ಬಿಟ್ಟಿರುವುದು ಈ ಆಂತರಿಕ ಸಾಕ್ಷ್ಯಕ್ಕೆ ಕಾರಣ.

ಕೊಳಹಾಳು ಗ್ರಾಮದಲ್ಲಿ ಪ್ರತಿವರ್ಷ ಹಂಪೆ ಹುಣ್ಣಿಮೆಯಂದು ಕೆಂಚಾವಧೂತರ ರಥೋತ್ಸವ ನಡೆಯುತ್ತದೆ. ಶಿವರಾತ್ರಿ ದಿನಗಳಂದು ಶ್ರೀ ದೇವೀಮಹಾತ್ಮೆ ಪಾರಾಯಣ ಮಾಡುತ್ತಾರೆ. ಕೆಂಚಾವಧೂತರ ಗದ್ದುಗೆಯ ಮೇಲೆ ಭಕ್ತಾದಿಗಳು ಎಲೆ, ಅಡಿಕೆ, ಹೊಗೆಸೊಪ್ಪು, ಸುಣ್ಣ ಇವನ್ನು ಓದಿಸುವುದುಂಟು. ಇವನ್ನು ಗದ್ದುಗೆಗೆ ಅರ್ಪಿಸಿ 9 ಪ್ರದಕ್ಷಿಣೆ ಬಂದರೆ ಗುಣವಾಗದಿರುವ ಕಾಯಿಲೆ ವಾಸಿಯಾಗುವುದುಂಟು! ಇದು ಭಕ್ತರ ನಂಬಿಕೆ!

ಕೆಂಚಾವಧೂತರು ಹಾಡುಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸಾಂಕೇತಿಕ ಅರ್ಥದ ಪದರುಗಳುಂಟು. ಅವರ ಮಾತುಗಳು ಹೀಗಿವೆ ‘ಬೋಧ ಬ್ರಹ್ಮಜ್ಞಾನದೊಳಗಣ ಸಾಧನೆಯ ಸವಿಯಮ್ಮ ಮೇರುಪರ್ವತ ಶಿಖರ ಮಧ್ಯದಲಿ | ಭೋರೆಂದು ಮೊಳಗುವ ಭೇರಿ ಘಂಟೆಯ ನಾದದೊಳು ಮುಳುಗೀ | ಸಾರ ಸಪ್ತಾಂಬುಧಿಯ ತೀರವ ಸೇರಿ ವಿನಯದಿ ಸ್ನಾನ ಮಾಡುತ | ಪಾರ ಬ್ರಹ್ಮಜ್ಞಾನದೊಳಗಿನ ಸಾರವನು ಸವಿಯಮ್ಮ ತಂಗೀ|’ ಎಂದು ನಾಲ್ಕು ಚರಣಗಳಲ್ಲಿ ಬೆಳೆಯುತ್ತದೆ. ಇಲ್ಲಿಯ ಸಾಲುಗಳಲ್ಲಿ ಸಾಧಕನೊಬ್ಬನಲ್ಲಿ ಹಂತಹಂತವಾಗಿ ಉಂಟಾಗುವ ‘ಬ್ರಹ್ಮಭಾವ’ದ ಅನುಭವಗಳನ್ನು ಕೆಂಚಾವಧೂತರು ಹೇಳಿದ್ದಾರೆ. ಇಂಥ ಹಾಡುಗಳನ್ನು ಹೇಳಬೇಕಾದರೆ ಬ್ರಹ್ಮಾನುಭೂತಿಯ ಪರಾಕಾಷ್ಠೆ ಅವರಲ್ಲಿದ್ದಿರಬೇಕು.

ಕೆಂಚಾವಧೂತರು ಸಾಮಾನ್ಯ ಮನೆತನದಲ್ಲಿ ಜನಿಸಿ ಅಧ್ಯಾತ್ಮಸಿದ್ಧಿ ಪಡೆದು, ರಾಗದಿಂದ ವಿರಾಗದ ಶ್ರುತಿ ನುಡಿಸಿ ಅವಧೂತ ಸ್ಥಾನಕ್ಕೆ ಏರಿದವರು. ಅಧ್ಯಾತ್ಮಸಖ್ಯದ ಎತ್ತರಕ್ಕೆ ಏರಿ ‘ಕ್ಷಮೆಯೇ ಅಭಿಷೇಕ, ವಿವೇಕವೇ ವಸ್ತ್ರ, ಸತ್ಯವಚನವೇ ಆಭರಣ, ವೈರಾಗ್ಯವೇ ಪುಷ್ಪ, ಶ್ರದ್ಧೆಯೇ ಧೂಪ, ಜ್ಞಾನವೇ ದೀಪ, ಅಹಂಕಾರ ನಿವೇದನೆಯೇ ನೈವೇದ್ಯ, ಮೌನವೇ ಗಂಟೆ, ತ್ಯಾಗವೇ ಪ್ರದಕ್ಷಿಣೆ, ದೈವೀಶ್ರದ್ಧೆಯೇ ನಮಸ್ಕಾರ’ ಹೀಗೆಂದು ಲೋಕಕ್ಕೆ ಸಾರ್ವಕಾಲಿಕ ತತ್ತ್ವವನ್ನು ಸಾರಿದ ಯೋಗಿಗಳಲ್ಲಿ ಒಬ್ಬರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *