ಸನ್ಮಾರ್ಗ ತೋರಿದ ವಳ್ಳಲಾರ್ ಶ್ರೀರಾಮಲಿಂಗಂ

ರ್ನಾಟಕದ ಬಸವಣ್ಣನವರು 12ನೆಯ ಶತಮಾನದಲ್ಲಿ ಆಚರಿಸಿ ತೋರಿಸಿದ ತಥ್ಯವನ್ನೇ 18ನೆಯ ಶತಮಾನದಲ್ಲಿ ತಮಿಳುನಾಡಿನ ಚಿದಂಬರಂ ಸಮೀಪದ ಮರುದೂರು ಗ್ರಾಮದಲ್ಲಿ ಜನಿಸಿದ ರಾಮಲಿಂಗಂ ಸ್ವಾಮಿಗಳು ಜೀವನದುದ್ದಕ್ಕೂ ಸಾರಿದರು. ಅವರು ಸಮರಸ, ಶುದ್ಧ, ಸನ್ಮಾರ್ಗ, ಸತ್ಯ, ಜ್ಞಾನ- ಎಂಬಿವುಗಳ ಮಹತ್ವವನ್ನು ತಮಿಳುನಾಡಿನುದ್ದಕ್ಕೂ ಸಾರಿದರು. 51 ವರ್ಷ ಬದುಕಿದ್ದ ಅವರು ಕವಿಗಳಾಗಿದ್ದುದಲ್ಲದೆ, ನಿತ್ಯಬದುಕನ್ನು ಮೌಲ್ಯಯುತವಾಗಿ ಹೇಗೆ ನಡೆಸಬೇಕೆಂಬುದನ್ನು ಸ್ವಾನುಭವದಿಂದ ಜನರಿಗೆ ಸಾರಿದರು!

ಜನನ-ವಿದ್ಯಾಭ್ಯಾಸ: ರಾಮಲಿಂಗಂ ತಂದೆಯ ಹೆಸರು ರಾಮಯ್ಯ ಪಿಳ್ಳೆ ೖ.

ಕೆಲಕಾಲ ಕಂದಾಯದ ಅಧಿಕಾರಿಗಳಾಗಿದ್ದು ನಂತರ ಉಪಾಧ್ಯಾಯ ವೃತ್ತಿ ಹಿಡಿದ ಇವರು ಪರಮ ಶಿವಭಕ್ತರು. ಇವರ ಹೆಂಡತಿ ಚಿನ್ನ ಅಮ್ಮ. ಇವರಿಬ್ಬರದು ಸರಳವೂ ಪ್ರಾಮಾಣಿಕವೂ ಆದ ಜೀವನ. ರಾಮಲಿಂಗಂ ಚಿಕ್ಕಂದಿನಿಂದ ತಾಯಿ-ತಂದೆಯರನ್ನು ಮನಮುಟ್ಟಿ ಕಂಡವರೇ. ಅವರೊಮ್ಮೆ ತಂದೆಯ ಬಗೆಗೆ ಹೇಳುತ್ತ ‘ಮನೆಯ ಯಜಮಾನ ಯಾವರೀತಿ ಬದುಕಬೇಕೋ ಆರೀತಿ ಬದುಕಿದಾಗ, ಜನರ ಮಧ್ಯೆ ದೇವರಂತೆ ಕಂಗೊಳಿಸುತ್ತಾನೆ’ ಎಂದದ್ದುಂಟು! ತಾಯಿ ಬಗೆಗೆ ಮಾತಾಡುತ್ತ ‘ಯಾವ ಮಹಿಳೆ ತನ್ನ ಚಾರಿತ್ರ್ಯದಿಂದ ಶುದ್ಧಳೂ ಶಕ್ತಿವಂತಳೂ ಆಗಿರುತ್ತಾಳೋ ಅಂಥವಳ ಪಾವಿತ್ರ್ಯಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ’ ಎಂದು ಕೈವಾರಿಸಿದ್ದುಂಟು. ರಾಮಲಿಂಗಂ ಜನಿಸಿದ್ದು 1823ನೇ ಅಕ್ಟೋಬರ್ 5ರಂದು. ಇವರ ಜನ್ಮಸಂಭ್ರಮದಲ್ಲಿ ಸಂಬಂಧಿಕರೂ ಊರ ಜನರೂ ಪಾಲ್ಗೊಂಡರು. ಈತ ಶಿವಯೋಗಿ ಮಹಾತ್ಮರ ಆಶೀರ್ವಾದದಿಂದ ಜನಿಸಿದ ಮಗುವೆಂದು ಭಾವಿಸಿ ಹೆಮ್ಮೆಪಟ್ಟರು. ಇವರು ಹುಟ್ಟುವ ಮೊದಲೆ ದಂಪತಿಗೆ ಇಬ್ಬರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದರು. ಮರುದೂರು ಗ್ರಾಮ ಶಿವಭಕ್ತರಿಗೆ ಬಲು ಪ್ರಿಯವಾಗಿತ್ತು.

ಬಾಲಕ ರಾಮಲಿಂಗಂ ಸಹಜವಾಗಿ ದೈವಭಕ್ತ. ಆಟ-ಪಾಠಗಳಿಗಿಂತ, ದೈವಸ್ಮರಣೆ, ಪ್ರಜಾಸೇವೆಯಲ್ಲಿ ಮಗ್ನರಾಗುತ್ತಿದ್ದದ್ದೇ ಹೆಚ್ಚು. ಅವರ ತಂದೆ-ತಾಯಿ ಚಿದಂಬರಂ ಕ್ಷೇತ್ರದ ಭಕ್ತರು. ರಾಮಲಿಂಗಂ 5 ವರ್ಷದವರಾಗಿದ್ದಾಗ ಒಮ್ಮೆ ಚಿದಂಬರಂಗೆ ಹೋಗಿದ್ದುಂಟು. ನಂತರ 24ನೆಯ ವಯಸ್ಸಿನಲ್ಲಿ ಅಲ್ಲಿ ಕೆಲಕಾಲ ತಂಗಿದ್ದರು. ತಮ್ಮ ಕೆಲವು ಕವನಗಳಲ್ಲಿ ಚಿದಂಬರಂನ ನಟರಾಜನ ಬಗೆಗೂ ಬರೆದಿದ್ದಾರೆ, ತಮಗಾದ ಆಧ್ಯಾತ್ಮಿಕ ಭಾವವನ್ನು ವರ್ಣಿಸಿದ್ದಾರೆ. ರಾಮಲಿಂಗಂ ಹುಟ್ಟಿದ 6ನೇ ತಿಂಗಳಿಗೆ ತಂದೆ ತೀರಿಕೊಂಡರು. ಹಿರಿಯ ಅಣ್ಣ ಸಭಾಪತಿ ಪಿಳ್ಳೆ ೖ ಮತ್ತು ಪರಶುರಾಮನ್ ಇವರಿಬ್ಬರೂ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು. ತಾಯಿ ಮಗನನ್ನು ಸಮೀಪದ ಶಾಲೆಗೆ ಸೇರಿಸಿದರು. ಆದರೆ, ರಾಮಲಿಂಗಂಗೆ ಓದಿನಲ್ಲಿ ಆಸಕ್ತಿ ಬೆಳೆಯಲಿಲ್ಲ. ಹಿರಿಯ ವಿದ್ವಾಂಸ ಕಂಚಿ ಸಭಾಪತಿ ಮೊದಲಿಯಾರರ ಬಳಿ ವಿದ್ಯಾಭ್ಯಾಸಕ್ಕೆ ಬಾಲಕನನ್ನು ಬಿಟ್ಟರು. ರಾಮಲಿಂಗಂ ತಮಿಳು ಭಾಷೆ-ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದರು. ಉಳಿದ ವಿಷಯಗಳಲ್ಲಿ ಅಷ್ಟಕ್ಕಷ್ಟೆ. ಆದರೆ, ಮೌನವನ್ನು ತುಂಬ ಬಯಸುತ್ತಿದ್ದರು! ಇವರ ಆರಾಧ್ಯದೈವ

ಶ್ರೀಸುಬ್ರಹ್ಮಣೇಶ್ವರ. ಕಂದಕೊಟ್ಟಂನಲ್ಲಿದ್ದ ಶ್ರೀಮುರುಗನ್ ದೇವಸ್ಥಾನಕ್ಕೆ ಆಗಾಗ ಭೇಟಿನೀಡುತ್ತಿದ್ದರು ಮತ್ತು ಬೆಳೆಯುತ್ತ ಹೋದಂತೆ ಶ್ರೀಮುರುಗನ್ ತಮ್ಮ ಆಧ್ಯಾತ್ಮಿಕ ಗುರುವೆಂದು ಭಾವಿಸಿಕೊಂಡರು.

ಆಧ್ಯಾತ್ಮಿಕನೆಲೆ: ರಾಮಯ್ಯ ಪಿಳ್ಳೆ ೖ ಅವರು ರಾಮಲಿಂಗಂ ಚಿಕ್ಕವನಿರುವಾಗಲೇ ತೀರಿಕೊಂಡಿದ್ದು ಸರಿಯಷ್ಟೇ? ಇವರ ಕುಟುಂಬ ಮರುದೂರಿನಿಂದ ಚೆನ್ನೈಗೆ (ಮದ್ರಾಸಿಗೆ) ಸ್ಥಳಾಂತರಗೊಂಡಿತು. ಚಿಕ್ಕವರಿರುವಾಗಲೇ ‘ಸಂನ್ಯಾಸ ಜೀವನ’ದ ಬಗ್ಗೆ ಒಲವು ತೋರಿಸಿದ್ದ ರಾಮಲಿಂಗಂ 12ನೆಯ ವಯಸ್ಸಿನಲ್ಲಿ ಸ್ವಾಮೀಜಿಯವರಂತೆ ವರ್ತಿಸುತ್ತಿದ್ದರು. ಆದರೆ, ಅವರ ಜೀವನದಲ್ಲಿ ನಡೆದ ಕೆಲ ಘಟನೆಗಳು ಅಭಿಪ್ರಾಯ ಬದಲಿಸಿಕೊಳ್ಳುವಂತೆ ಮಾಡಿದವು. ರಾಮಲಿಂಗಂ ಆ ವಯಸ್ಸಿಗೇ ಉತ್ತಮ ಪ್ರವಚನ ನೀಡುವಷ್ಟು ಸಮರ್ಥರಾಗಿದ್ದರು. ಪ್ರತಿತಿಂಗಳು ಸೋಮಚೆಟ್ಟಿಯಾರ್ ಎಂಬ ಶ್ರೀಮಂತನ ಮನೆಯಲ್ಲಿ ಆಧ್ಯಾತ್ಮಿಕ ಉಪನ್ಯಾಸಗಳು ನಡೆಯುತ್ತಿದ್ದವು. ಅಲ್ಲಿ ಉಪನ್ಯಾಸ ನೀಡಲು ಅವರ ಅಣ್ಣ ಸಭಾಪತಿ ಚೆಟ್ಟಿಯಾರ್ ಹೋಗುತ್ತಿದ್ದರು. ಒಮ್ಮೆ ಅವರಿಗೆ ಹೋಗಲಾಗಲಿಲ್ಲ. ಆಗ ರಾಮಲಿಂಗಂ ಉಪನ್ಯಾಸ ನೀಡಿಬಂದರು. ಇದು ಅವರ ಬದುಕಿನ ತಿರುವಿಗೆ ಪರೋಕ್ಷ ಕಾರಣವಾಯಿತು! ರಾಮಲಿಂಗಂ ಭಾಷಣವನ್ನು ಅಲ್ಲಿಯ ಶ್ರೋತೃವರ್ಗ ಕೊಂಡಾಡಿತು. ಅವರು ದೊಡ್ಡ ವ್ಯಕ್ತಿಯೆಂದೂ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದ ‘ದೊಡ್ಡಜ್ಞಾನಿ’ಯೆಂದೂ ಜನ ಕರೆಯತೊಡಗಿದರು. ಕೀರ್ತಿ ಮದ್ರಾಸಿನ ತುಂಬ ಹಬ್ಬಿತು. ಇವರು ಉಪನ್ಯಾಸಕ್ಕೆ ಹೋದಾಗ ಅಪಾರ ಉಡುಗೊರೆಗಳು ಬರುತ್ತಿದ್ದವು. ಆದರೆ ಅವನ್ನು ಹತ್ತಿರದ ಕೊಳದಲ್ಲಿ ಬಿಸಾಕುತ್ತಿದ್ದರು. ಇವರಿಗೆ ಯಾವ ವಸ್ತುವಿನ ಮೇಲೂ ಆಸಕ್ತಿ ಇರಲಿಲ್ಲ!

ಮದ್ರಾಸಿನಲ್ಲಿ ಕೆಲದಿನವಿದ್ದ ರಾಮಲಿಂಗಂ, ಚಿದಂಬರಂನ ನಟರಾಜನ ದರ್ಶನಕ್ಕೆ ಪ್ರಯಾಣ ಬೆಳೆಸಿದರು. ಆಗ ಅವರಿಗೆ 24 ವರ್ಷ. ನಟರಾಜನ ದರ್ಶನ ವಿಶೇಷ ಅನುಭವ ನೀಡಿತು. ಆಮೇಲೆ ಅನುಯಾಯಿಗಳೊಂದಿಗೆ ಪಾಂಡಿಚೇರಿಗೆ ತೆರಳಿ, ಅಲ್ಲಿನ ಶ್ರೋತೃಗಳನ್ನುದ್ದೇಶಿಸಿ ಭಾಷಣ ಮಾಡಿದರು. ಅನೇಕ ಕಡೆ ಆಧ್ಯಾತ್ಮಿಕ ವಿಚಾರಗಳ ಬಗೆಗೂ ತಿರುಜ್ಞಾನ ಸಂಬಂದರ್ ಬಗೆಗೂ ಮಾತನಾಡುತ್ತಿದ್ದರು. ಇವರು ವಿವಾಹಿತರೇ ಅಲ್ಲವೆ? ಎಂಬುದಕ್ಕೆ ವಿವಾದಗಳಿದ್ದರೂ, ವಿವಾಹ ಆಗಿತ್ತೆನ್ನುವುದನ್ನು ಒಪ್ಪುವವರು ಬಹಳಷ್ಟು ಜನ ಇದ್ದಾರೆ. ಹಿರಿಯ ಸೋದರಿ ಉಣ್ಣಾಮಲೈ ಅಮ್ಮನವರ ಮಗಳಾದ ‘ಧನಕೋಷ್ಠಿ’ ಎಂಬಾಕೆಯನ್ನು 1850ರಲ್ಲಿ ಇವರು ವಿವಾಹವಾದರಂತೆ. ಮದುವೆಯ ಮೊದಲರಾತ್ರಿ ರಾಮಲಿಂಗಂ ಹೆಂಡತಿಯನ್ನು ಎದುರಿಗೆ ಕುಳ್ಳಿರಿಸಿಕೊಂಡು ಮಾಣಿಕವಾಚಕರ್ ಕವಿಗಳ ‘ತಿರುವಾಚಕಮ್ ಕಾವ್ಯಕೃತಿಯನ್ನು ಹೇಳುತ್ತ ರಾತ್ರಿ ಕಳೆದರಂತೆ!. ಇದು ಮುಂದೆಯೂ ಪುನರಾವರ್ತನೆಯಾಯಿತು. ಇದು ಹೆಂಡತಿಯನ್ನು ಆಧ್ಯಾತ್ಮಿಕ ಅನುಭೂತಿಗೆ ಸಿದ್ಧಪಡಿಸುವ ಒಂದು ಬಗೆಯ ತಂತ್ರವಾಗಿತ್ತು. ಆಕೆಯೂ ಆಧ್ಯಾತ್ಮಿಕ ದಾರಿಯನ್ನು ತುಳಿದರು. ಆಕೆಯೊಡನೆ ಎಂದೂ ಅವರು ದೈಹಿಕ ಸಂಬಂಧ ಬೆಳೆಸಲಿಲ್ಲ.

ಸಾಧಾರಣ ಎತ್ತರದ ವಿನಯಶೀಲ ವ್ಯಕ್ತಿಯಾಗಿದ್ದ ರಾಮಲಿಂಗಂ ಪ್ರೇಮಪೂರಿತ, ಸೌಮ್ಯರೂಪಿ, ಸರಳವಾದಿ, ಸತ್ಯವಾದಿ, ಪ್ರಾಮಾಣಿಕ ಜ್ಞಾನೋದಯಿ- ಈ ಎಲ್ಲ ಮಾತುಗಳಿಗೆ ಸಂಕೇತವಾಗಿದ್ದರು. ಯಾವುದು ಸತ್ಯ? ಯಾವುದು ಧರ್ಮ? ಎಂದು ಸರಳವಾದ ಮಾತುಗಳಲ್ಲಿ ಉದಾಹರಣೆಗಳ ಮೂಲಕ ಜನರಿಗೆ ತಿಳಿಸುತ್ತಿದ್ದರು. ಅಪ್ರತಿಮ ಸಾಧಕರಾಗಿದ್ದ ಅವರು, ಮಾಂಸಾಹಾರಿಗಳನ್ನು ಶಾಖಾಹಾರಿಗಳನ್ನಾಗಿ ಬದಲಿಸಬಲ್ಲ ಶಕ್ತಿ ಪಡೆದಿದ್ದರು. ಅವರು ಕೆಲವೊಮ್ಮೆ ರಹಸ್ಯ ಸ್ಥಳಗಳಿಗೆ ಹೋಗುತ್ತಿದ್ದುದುಂಟು. ಸರಳ ಬದುಕನ್ನು ಇಷ್ಟಪಡುತ್ತಿದ್ದರು. ಅವರ ಬಳಿ ಎರಡು ಶುದ್ಧ ಬಿಳಿ ಹತ್ತಿಬಟ್ಟೆಗಳಿದ್ದವು. ಕಾಲಿಗೆ ಚಪ್ಪಲಿ ಹಾಕದೆ ನಡೆಯುತ್ತಿದ್ದರು. ಕಠಿಣ ತಪಸ್ವಿಯಂತೆ ಕಾಣುತ್ತಿದ್ದ ಅವರು ಊಟ ಮಾಡುತ್ತಿದ್ದರೊ ಇಲ್ಲವೊ ಯಾರಿಗೂ ತಿಳಿಯುತ್ತಿರಲಿಲ್ಲ. ಅವರ ಬಳಿ ಬಂದವರು ಉಪದೇಶ ಕೇಳಿ ಧನ್ಯರಾಗಿ ಭಾವಚಿತ್ರ ತೆಗೆಯಲು ವಿನಂತಿಸಿಕೊಳ್ಳುತ್ತಿದ್ದರು, ಅದಕ್ಕೆ ರಾಮಲಿಂಗಂ ಒಪ್ಪುತ್ತಿರಲಿಲ್ಲ. ಒಂದೊಮ್ಮೆ ತೆಗೆಯಲು ಯತ್ನಿಸಿದರೂ ಪೂರ್ಣಭಾವಚಿತ್ರ ಎಂದೂ ಬರುತ್ತಿರಲಿಲ್ಲ. ಅವರು ತಮ್ಮ ಹೆಸರಿನೊಂದಿಗೆ ‘ಸ್ವಾಮಿ’ ಎಂಬ ಪದವನ್ನು ಕೊನೆಯವರೆಗೂ ಬಳಸಲಿಲ್ಲ. ವಿಶ್ವಪ್ರೇಮ-ವಿಶ್ವಭ್ರಾತೃತ್ವದ ಮಹತ್ವವನ್ನು ಬಂದವರಿಗೆ ವಿವರಿಸುತ್ತಿದ್ದರು, ಅಹಂಭಾವವನ್ನು ಸರ್ವಶಕ್ತ ಭಗವಂತನಲ್ಲಿ ಅರ್ಪಿಸಬೇಕೆಂದು ಬೋಧಿಸುತ್ತಿದ್ದರು. ತಮ್ಮ ಪಥವನ್ನು ‘ಧಾರ್ವಿುಕಭಾವನೆ’ಯೆಂದು ಹೇಳದೆ, ಶುದ್ಧ-ಸಮರಸ-ಸನ್ಮಾರ್ಗವೆಂದು ಕರೆದುಕೊಂಡರು. ಜೀವಕಾರುಣ್ಯ, ಅಹಿಂಸಾ ಭಾವಗಳಿಂದ ಮಾತ್ರ ಆಧ್ಯಾತ್ಮಿಕ ಬದುಕು ಪರಿಪೂರ್ಣಗೊಳ್ಳುವುದೆಂದು ತಿಳಿಸುತ್ತಿದ್ದರು. ಇವನ್ನು ತಮ್ಮ ಬದುಕಿನಲ್ಲಿ ತೋರಿಸಿದ್ದಲ್ಲದೆ, ತಮ್ಮ ಕಾವ್ಯಗಳಲ್ಲೂ ಇದೇ ಭಾವವನ್ನು ಮಂಡಿಸುತ್ತಿದ್ದರು.

ಕೃತಿಗಳು: ರಾಮಲಿಂಗಂ ರಚಿಸಿರುವ ‘ತಿರು-ಅರುಳ್-ಪಾ’, ಭವ್ಯ-ದಿವ್ಯ ಆದರ್ಶಗಳನ್ನು ನಿರೂಪಿಸುವ ಒಂದು ಆಧ್ಯಾತ್ಮಿಕ ಉನ್ನತ ಕೃತಿ. ಮನುಕುಲದ ಬಗೆಗಿನ ಅನಂತ ಪ್ರೇಮವನ್ನು ಅದು ನಿರೂಪಿಸುತ್ತದೆ. ಆಧ್ಯಾತ್ಮಿಕ ಜೀವಿಯ ಬೌದ್ಧಿಕ ಶಕ್ತಿಯನ್ನು ಎತ್ತರಕ್ಕೊಯ್ಯುವ, ಸತ್ಯಜ್ಯೋತಿಯ ಕಿರಣಗಳು ಪ್ರಕಾಶಿಸುವಂತೆ ಮಾಡುವ ಕೃತಿಯಾಗಿದೆ. ಇದನ್ನು ಓದುತ್ತಿದ್ದರೆ, ಇಲ್ಲವೆ ಕೇಳುತ್ತಿದ್ದರೆ, ಒಮ್ಮಿಂದೊಮ್ಮಿಗೆ ಬಿಸಿಲಿಗೆ ಮಂಜು ಕರಗುವಂತೆ ಕೇಳುವಾತನ ‘ಅಹಂ’ ಕರಗಿಬಿಡುತ್ತದೆ. ಈ ಕೃತಿಯನ್ನು ಸಮಾಜದ ವರ್ಗವೊಂದು ವಿರೋಧಿಸಿತ್ತು. ಆದರೆ, ಅದರಲ್ಲಿನ ಉನ್ನತಭಾವಗಳನ್ನು ಮಾತ್ರ ಜನ ಕಂಡಿದ್ದರು. ಭಕ್ತಿಗೀತೆಗಳನ್ನು ಒಳಗೊಂಡ ‘ತಿರುಮುರೈ’ ಕೃತಿ ಪ್ರಕಟವಾದಾಗ, ಈ ಹೆಸರಿನ ಬಗೆಗೆ ಕೆಲವರು ತಗಾದೆ ತೆಗೆದರು. ತಮಿಳು ಶೈವಕೃತಿಗಳಲ್ಲಿ ‘ಪಣ್ಣಿಮ ತಿರುಮುರೈ’ ಎಂಬ ಕೃತಿಯಿದ್ದು, ಶೀರ್ಷಿಕೆಯ ಬಳಕೆಗೆ ವಿರೋಧ ವ್ಯಕ್ತಪಡಿಸಿದರು. ಶೈವಪಂಡಿತರೊಬ್ಬರು ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೇ ಹೂಡಿದರು. ವಿಚಾರಣೆಯ ವೇಳೆ ಪ್ರತಿವಾದಿ ರಾಮಲಿಂಗಂ ಸರಳತೆಯಿಂದಲೇ ನ್ಯಾಯಾಧೀಶರ ಗಮನ ಸೆಳೆದರು. ರಾಮಲಿಂಗಂ ನ್ಯಾಯಾಲಯಕ್ಕೆ ಬಂದೊಡನೆ ಪ್ರತಿಯೊಬ್ಬರೂ ಎದ್ದುನಿಂತು ಗೌರವ ಸೂಚಿಸಿದರು. ನ್ಯಾಯಾಧೀಶರು ಇದನ್ನು ಗಮನಿಸಿ ‘ರಾಮಲಿಂಗಂ ನ್ಯಾಯಾಲಯ ಪ್ರವೇಶವಾದಾಗ, ಅವರ ವಿರುದ್ಧ ಫಿರ್ಯಾದು ಸಲ್ಲಿಸಿದ ನೀವು ಎಲ್ಲರೊಂದಿಗೆ ಎದ್ದು ಏಕೆ ಗೌರವ ಸೂಚಿಸಿದಿರಿ?’ ಎಂದು ಕೇಳಿದರು. ಇದಕ್ಕೆ ಸರಿಯಾದ ಉತ್ತರ ಬರದೆಹೋದಾಗ ನ್ಯಾಯಾಧೀಶರು ಫಿರ್ಯಾದನ್ನು ವಜಾಗೊಳಿಸಿದರು.

ಸರಳ ತಮಿಳಿನಲ್ಲಿದ್ದ ಅವರ ‘ಜೀವಕಾರುಣ್ಯ ಒಳಕ್ಕುಂ’ ಎಂಬ ಗದ್ಯರೂಪದ ಕೃತಿ ವಿಶ್ವಭ್ರಾತೃತ್ವ, ಅನುಕಂಪ ಮತ್ತು ಮಾನವೋದ್ದೇಶದ ನೆಲೆಗಳನ್ನು ನಿರೂಪಿಸುತ್ತದೆ. ವ್ಯಕ್ತಿಜೀವನ ನಿರ್ದಿಷ್ಟಕ್ರಮದಲ್ಲಿ ನಡೆದರೆ ಮೃತ್ಯುರಹಿತವಾದ ಅನಂತ, ಆನಂದವನ್ನು ಕಾಣಬಹುದು; ಸನ್ಮಾರ್ಗದ ನಿಯಮಗಳನ್ನು ಪಾಲಿಸಿದರೆ ಮೃತ್ಯುವನ್ನು ಗೆಲ್ಲಬಹುದೆಂದು ಪ್ರತಿಪಾದಿಸಿದ್ದರು.

ವಳ್ಳಲಾರ್ ರಾಮಲಿಂಗಸ್ವಾಮಿಗಳು ವಿಶ್ವಾನುಕಂಪದ ನೈತಿಕತೆ ಮತ್ತು ನಿಯಮಗಳನ್ನು ವಿವರಿಸಲು 1867ರ ಮೇ 23ರಂದು ತಮಿಳುನಾಡಿನ ವಡಲೂರಿನಲ್ಲಿ ‘ಸತ್ಯಧರ್ಮಶಾಲೆ’ಯನ್ನು ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಬರಗಾಲ ಕಾಣಿಸಿಕೊಂಡಾಗ, ಜನ ಹಸಿವಿನಿಂದ ಮುಕ್ತರಾಗಬೇಕೆಂದು ಬಯಸಿ ಧರ್ಮಶಾಲೆಯೊಂದನ್ನು ತೆರೆದರು. ಬಡವರಿಗೆ, ಕಾಯಿಲೆ ಬಿದ್ದವರಿಗೆ, ಅಶಕ್ತರಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಿದರು. ಈ ಕಾರ್ಯಕ್ಕಾಗಿ ಊರಿನ ಜನ ನೂರು ಎಕರೆ ಜಮೀನು ನೀಡಿದರು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಅನ್ನದಾನದ ಕಾರ್ಯಕ್ರಮ ಅಲ್ಲಿ ವ್ಯವಸ್ಥೆಗೊಂಡಿತು. ಹೀಗೆ ಅನ್ನದಾನದ ವ್ಯವಸ್ಥೆ ಪ್ರಾರಂಭಿಸಿದ ಮೊದಲ ಸಂತರು ವಳ್ಳಲಾರ್ ರಾಮಲಿಂಗಂ ಮಹಾಸ್ವಾಮಿಗಳು.

ರಾಮಲಿಂಗಂ ಸ್ವಾಮಿಗಳು 1882ರಲ್ಲಿ ವಡಲೂರಿನಲ್ಲಿ ‘ಸತ್ಯಜ್ಞಾನಸಭೆ’ಯನ್ನು ಸ್ಥಾಪಿಸಿದರು. ನಂತರ ಇದನ್ನು ‘ಉತ್ತರಜ್ಞಾನ ಚಿದಂಬರಂ’ ಎಂದು ಕರೆದರು. ತಿಲ್ಲೈಯಲ್ಲಿನ ಚಿದಂಬರಂ ಕ್ಷೇತ್ರ ‘ಪೂರ್ವಜ್ಞಾನ ಚಿದಂಬರಂ’ ಎಂದೇ ಅವರ ಭಾವನೆಯಾಗಿತ್ತು. ಜಾತಿ, ಮತ, ಧರ್ಮ ಯಾವುದನ್ನೂ ಪರಿಗಣಿಸದೆ ಭ್ರಾತೃತ್ವದ ದೃಷ್ಟಿಯಿಂದ ಇದನ್ನು ಸ್ಥಾಪಿಸಿದರು. ಸಭಾಂಗಣದ ಕೊಠಡಿಯಲ್ಲಿ ದೀಪವಿಟ್ಟು (‘ಅರುಳ್ ಪರಂಜ್ಯೋತಿ’) ಇದು ದೇವರ ಪ್ರತೀಕವೆಂದು ಹೇಳುತ್ತಿದ್ದರು. ಈ ಜ್ಯೋತಿಯನ್ನು ಭ್ರೂಮಧ್ಯಭಾಗದಲ್ಲಿ ಕಾಣಲು ಯತ್ನಿಸಬೇಕೆಂದು ಸಾಧಕರಿಗೆ ಹೇಳಿದರು. ಅವರು ಅದನ್ನು ಆಧ್ಯಾತ್ಮಿಕ ಬಲದಿಂದಲೇ ಸಾಧಿಸಿದ್ದರು. ಇಲ್ಲಿಯೇ ‘ಆತ್ಮದರ್ಶನ’ ಸಾಧ್ಯ, ಇದಕ್ಕೆ ಏಳು ಪರದೆಗಳು ಅಡ್ಡಿ ಇವೆಯೆಂದು ತಿಳಿಸಿದ್ದರು. ಅಷ್ಟಕೋನಾಕೃತಿಯಲ್ಲಿ ನಿರ್ವಿುಸಲಾಗಿರುವ ಜ್ಞಾನಸಭೆಯ ಕಟ್ಟಡ ವಿಶಿಷ್ಟ ಧ್ಯಾನಮಂದಿರವಾಗಿ ಈಗಲೂ ಆಧ್ಯಾತ್ಮಿಕರನ್ನು ತನ್ನತ್ತ ಸೆಳೆಯುತ್ತಿದೆ.

ನಿರ್ವಿಕಲ್ಪ ಸಮಾಧಿ: ಪ್ರಾಮಾಣಿಕ ಸಮಾಜಸುಧಾರಕರಂತೆ ಜೀವಿಸಿದ ರಾಮಲಿಂಗಂ, ಜಡ್ಡುಗಟ್ಟಿದ ಸಂಪ್ರದಾಯದ ವಿರುದ್ಧ ಮಾತನಾಡಿದರು, ಮಾನವವಿರೋಧಿ ನೀತಿಗಳ ವಿರುದ್ಧ ಹೋರಾಡಿದರು. ಅವರ ಹೋರಾಟಕ್ಕೆ ಶುದ್ಧ ಆಧ್ಯಾತ್ಮಿಕ ತಳಹದಿಯಿತ್ತು. 1870ರಿಂದ ಸಣ್ಣ ಗುಡಿಸಲಿನಲ್ಲಿ ವಾಸಮಾಡತೊಡಗಿದರು. ಅದು ಜನರಿಗೆ ‘ಸಿದ್ಧಿಸ್ಥಳ’ವಾಗಿತ್ತು. ಇದು ವಡಲೂರಿನ ಸಮೀಪದ ‘ಮೆಟ್ಟಿಕುಪ್ಪಂ’ನಲ್ಲಿದೆ. ಅವರನ್ನು ಕಾಣಲು ಅಲ್ಲಿಗೆ ಪಂಡಿತರು, ಶೈವಸಂತರು, ಉನ್ನತಾಧಿಕಾರಿಗಳು ಬರುತ್ತಿದ್ದರು. ಅವರು ಅಲ್ಲಿರುವಾಗಲೇ, ತಮ್ಮೊಂದಿಗಿದ್ದ ದೇವಶಿಖಾಮಣಿ ಯೋಗಿಗಳಿಗೆ ತಾವು 51ನೆಯ ವರ್ಷದಲ್ಲಿ ಕಣ್ಮರೆಯಾಗುವುದಾಗಿ ಹೇಳಿದ್ದರಂತೆ! 1874 ಜನವರಿ 30ರಂದು ದೇಹವನ್ನು ಅನಂತದಲ್ಲಿ ಲೀನಗೊಳಿಸಲು ನಿಶ್ಚಯಿಸಿಕೊಂಡ ಅವರು, ಅನುಯಾಯಿಗಳಿಗೆ ವಿಶೇಷ ಕೊಠಡಿಯೊಂದನ್ನು ತೋರಿಸಿದರು. ಅಲ್ಲಿ ದೀಪ ಹಚ್ಚಲಾಯಿತು. ರಾಮಲಿಂಗಂ ಸ್ವಾಮಿಗಳು ಹೋದಮೇಲೆ ಕಿಟಕಿ-ಬಾಗಿಲು ಮುಚ್ಚಿ ಮುದ್ರೆ ಹಾಕಲಾಯಿತು. ಅಂದು ಮಧ್ಯರಾತ್ರಿ ‘ಶುದ್ಧ ನಿರ್ವಿಕಲ್ಪ ಸಮಾಧಿ’ಗೆ ಏರಿದರು. ಕೆಲ ತಿಂಗಳ ಬಳಿಕ ಅಧಿಕಾರಿಗಳು ಬಾಗಿಲು ತೆರೆದು ನೋಡಿದರೆ ಅಲ್ಲೇನೂ ಇರಲಿಲ್ಲ. ವಳ್ಳಲಾರ್ ರಾಮಲಿಂಗಂ ಸಿದ್ಧಿಗೆ ಏರಿದ್ದರು!

ರಾಮಲಿಂಗಂ ಸ್ವಾಮಿಗಳು ಕೇರಳದ ನಾರಾಯಣ ಗುರುಗಳಂತೆ ತಮಿಳುನಾಡಿನ ಆಧ್ಯಾತ್ಮಿಕ ಉತ್ಕ್ರಾಂತಿಗೆ ಕಾರಣರಾದರು. ಸಾಧಕರಾಗಿ, ಸಮಾಜಸುಧಾರಕರಾಗಿ, ಕವಿಯಾಗಿ, ಹೊಸತತ್ತ್ವದ ಹರಿಕಾರರಾಗಿ ಜನಮಾನಸದಲ್ಲಿ ಉಳಿದುಕೊಂಡರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)