Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸಿದ್ಧಪೀಠದ ಯುಗಯೋಗಿ ಶ್ರೀ ಬಾಲಗಂಗಾಧರನಾಥರು

Sunday, 17.06.2018, 3:05 AM       No Comments

ಧುನಿಕ ಸಮಾಜಕ್ಕೆ ಸ್ಪಂದಿಸಿ, ಅದರ ಉತ್ತಮಾಂಶಗಳನ್ನು ತೆಗೆದುಕೊಂಡು ಪರಂಪರೆಯಿಂದ ಬಂದಂಥ ಉತ್ತಮಾಂಶಗಳನ್ನು ಕಸಿಮಾಡಿ ನವಜೀವನಕ್ಕೆ ಆಧ್ಯಾತ್ಮಿಕ ಸಂಸ್ಪರ್ಶ ನೀಡಿದವರಲ್ಲಿ ಡಾ.ಬಾಲಗಂಗಾಧರನಾಥರು ಪ್ರಮುಖರು. ಅತ್ತ ಅಧ್ಯಾತ್ಮ ಇತ್ತ ವಿಜ್ಞಾನ; ಅತ್ತ ಸಂಸ್ಕೃತ-ಇತ್ತ ಕನ್ನಡ; ಅತ್ತ ಸಗುಣೋಪಾಸನೆ ಇತ್ತ ನಿರ್ಗಣೋಪಾಸನೆ; ಅತ್ತ ಹಳತು-ಇತ್ತ ಹೊಸತು-ಹೀಗೆ ಎಲ್ಲವನ್ನು ಸಮನ್ವಯ ಮಾಡಿಕೊಂಡ ಹರಿಕಾರರು ಇವರು. ಆದಿಚುಂಚನಗಿರಿಯ ಹೆಸರನ್ನು ವಿಶ್ವಮಟ್ಟದಲ್ಲಿ ಪ್ರಕೀರ್ತಿಗೊಳಿಸಿದ ಶ್ರೇಯಸ್ಸು ಪದ್ಮಭೂಷಣ ಪುರಸ್ಕೃತರಾದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ.

ಬೆಂಗಳೂರಿನ ಗ್ರಾಮಾಂತರ ಪ್ರದೇಶ ಬಾನಂದೂರು ಎಂಬ ಗ್ರಾಮದಲ್ಲಿ ಜನಿಸಿ; ಬೆಂಗಳೂರಿನ ತಿರುಚ್ಚಿ ಶ್ರೀಗಳಲ್ಲಿ ಅಧ್ಯಾತ್ಮ ಸಾಧನೆ ಮಾಡಿ; ಆದಿಚುಂಚನಗಿರಿಯ ಸಿದ್ಧಪೀಠ ಏರಿದ್ದು ವಿಸ್ಮಯ ಸಂಗತಿ. ಇವರು ಬರುವ ಕಾಲಕ್ಕೆ ಕ್ಷೇತ್ರ ಬಿಂದುಮಾತ್ರವಾಗಿತ್ತು; ಅದನ್ನು ‘ಸಿಂಧು’ಗೊಳಿಸಿದ ಕೀರ್ತಿ ಪೂಜ್ಯರದು. ಜನಸಂಘಟನೆ, ಪರಿಸರ ಸಂರಕ್ಷಣೆ, ದೇವಾಲಯಗಳ ರಕ್ಷಣೆ, ಸಂಸ್ಕೃತ ಪೋಷಣೆ ಮುಂತಾದವುಗಳಿಗೆ ಒತ್ತು ನೀಡಿ ಕರ್ನಾಟಕದ ಎಲ್ಲೆಡೆ ವಿದ್ಯಾಕೇಂದ್ರಗಳನ್ನು ತೆರೆದು ಅಲ್ಲಿ ವೇದ, ಆಗಮ, ಶಾಸ್ತ್ರಗಳನ್ನು ಎಲ್ಲರೂ ಕಲಿಯಲು ಅವಕಾಶಕೊಟ್ಟು ವಿದ್ಯಾಪ್ರಸಾರದ ಸತ್ಕೀರ್ತಿಗೆ ಬೆಳಕಾದ ಬ್ರಹ್ಮವಿದ್ಯಾ ಉಪಾಸಕರು.

ಜನನ-ಬಾಲ್ಯ: ಬಾಲಗಂಗಾಧರನಾಥ ಸ್ವಾಮಿಗಳ ಪೂರ್ವಾಶ್ರಮದ ಹೆಸರು ಗಂಗಾಧರಯ್ಯ. ಇವರ ತಂದೆ ಚಿಕ್ಕಲಿಂಗಪ್ಪ, ತಾಯಿ ಬೋರಮ್ಮ. ಇವರ ಪೂರ್ವಿಕರು ಆದಿಚುಂಚನಗಿರಿಗೆ ನಡೆದುಕೊಳ್ಳುತ್ತಿದ್ದರು. ಸುತ್ತಮುತ್ತ ಇದ್ದ ಗ್ರಾಮಗಳಿಂದ ಕಾಣಿಕೆಗಳನ್ನು ಸಂಗ್ರಹಿಸಿ ಆದಿಚುಂಚನಗಿರಿಗೆ ಕಳುಹಿಸುತ್ತಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಬಿಡದಿ ಊರಿಗೆ ಮೂರು ಕಿ.ಮೀ ದೂರದಲ್ಲಿ ಬಾನಂದೂರು. ಇದರ ದಕ್ಷಿಣಕ್ಕೆ ಬೈರೇದೇವರ ಬೆಟ್ಟ, ಪಶ್ಚಿಮಕ್ಕೆ ಕದಿರೇ ದೇವರ ಬೆಟ್ಟ, ಪೂರ್ವಕ್ಕೆ ನಾರಾಯಣಸ್ವಾಮಿ ಬೆಟ್ಟ, ಉತ್ತರಕ್ಕೆ ಸಾವನದುರ್ಗ ಇವೆ. ಪೂರ್ವಕಾಲದಿಂದಲೂ ಧಾರ್ವಿುಕಸ್ವರೂಪ ಊರಿನ ಮೇಲೆ ಪ್ರಭಾವ ಬೀರಿದೆ. ಈ ಊರಿನ ಸುಬೇದಾರ್ ಮನೆತನಕ್ಕೆ ಸೇರಿದವರು ಚಿಕ್ಕಲಿಂಗಪ್ಪ. ಇವರಿಗೆ ಮೂವರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು. ಇವರ ಮನೆತನ ಶಿವೋಪಾಸನೆಗೆ ಹೆಸರಾದದ್ದು. ಗಂಗಾಧರಯ್ಯನವರ ದೊಡ್ಡಪ್ಪ ಮಳ್ಳೆಲಿಂಗಪ್ಪ. ಇವರ ತೊಟ್ಟಿಮನೆಯಲ್ಲಿ ಭೈರವೇಶ್ವರನ ಪೂಜಾಮಂದಿರ ಇತ್ತು. ಇಂಥ ಮನೆತನದಲ್ಲಿ 18.01.1945ರ ಗುರುವಾರ ಪ್ರಾತಃಕಾಲದಲ್ಲಿ ಗಂಡುಮಗುವಿನ ಜನನ ಆಯಿತು. ಆದಿಚುಂಚನಗಿರಿ ಕ್ಷೇತ್ರದ ಗಂಗಾಧರಸ್ವಾಮಿಯ ಒಕ್ಕಲಾದುದರಿಂದ ಮಗುವಿಗೆ ಗಂಗಾಧರಯ್ಯನೆಂದು ನಾಮಕರಣ ಮಾಡಿದರು. ಗಂಗಾಧರಯ್ಯ ಬಾಲ್ಯಕಾಲದಿಂದ ಹೂಗಳನ್ನು ತಂದು ಭೈರವೇಶ್ವರ ದೇವರಿಗೆ ಅರ್ಪಿಸಿ, ನಮಿಸುತ್ತಿದ್ದರು. ಇವರ ತಂದೆ ಚಿಕ್ಕಲಿಂಗಪ್ಪ ಜಾತ್ರೆ ಸಮಯದಲ್ಲಿ ಆದಿಚುಂಚನಗಿರಿ ಶ್ರೀಗಂಗಾಧರೇಶ್ವರ ಸ್ವಾಮಿಯ ಪಲ್ಲಕ್ಕಿ ಹೊರುವ ಕಾಯಕವನ್ನು ಮಾಡುತ್ತಿದ್ದರು.

ಗಂಗಾಧರಯ್ಯನದು ಬಾಲ್ಯದಲ್ಲಿಯೇ ಗಂಭೀರ ಸ್ವಭಾವ. ತಾತ ತಿಮ್ಮೇಗೌಡರ ಸ್ವಭಾವ ಇವರಲ್ಲಿ ಎದ್ದು ಕಾಣುತ್ತಿತ್ತು. ಆಟ-ಪಾಠಗಳಿಗಿಂತ ದೈವಭಕ್ತಿ ಹೆಚ್ಚು. 5 ವರ್ಷದ ಬಾಲಕ ಗಂಗಾಧರಯ್ಯನಿಗೆ ಸರಸ್ವತೀಪೂಜೆ ಮಾಡಿಸುವ ಮೂಲಕ ವಿದ್ಯಾರಂಭವಾಯಿತು. ಬಾನಂದೂರಿನ ಪ್ರಾಥಮಿಕ ಶಾಲೆಯಲ್ಲಿ ಇವರ ವಿದ್ಯಾಭ್ಯಾಸ ಆಯಿತು. ಓದಿನಲ್ಲಿ ಮುಂದು, ಅಪಾರ ಗ್ರಹಣಶಕ್ತಿ, ಮನೆಯಲ್ಲಿ ತಾತನೇ ಇವರಿಗೆ ಪ್ರಥಮಗುರು. ಬಾಲಕ ಗಂಗಾಧರಯ್ಯ ತಾತನಿಂದ ಲೌಕಿಕದ ಚರ್ಯು ತಿಳಿಯುತ್ತಲೇ ಆಧ್ಯಾತ್ಮಿಕ, ಜ್ಯೋತಿಷ, ಹಳ್ಳಿವೈದ್ಯಗಳನ್ನು ಗ್ರಹಿಸುತ್ತಿದ್ದನು; ಲೋಕ-ಪರಲೋಕ ವಿಚಾರಗಳನ್ನು ತಾತನಿಗೆ ಪ್ರಶ್ನೆ ಮಾಡಿದ್ದುಂಟು. ಬಾನಂದೂರಿನಲ್ಲಿ ಹಿಪ್ಪೆಮರ ಇತ್ತು. ಅದರ ಕೆಳಗಡೆ ಎಲ್ಲರೂ ಆಟವಾಡುತ್ತಿದ್ದರೆ ಬಾಲಕ ಗಂಗಾಧರಯ್ಯ ತನಗೆ ತಾನೇ ಸಮಾಧಿಸ್ಥನಾಗುತ್ತಿದ್ದನು. ದೊಡ್ಡವರಾದ ಮೇಲೂ ಹಿಪ್ಪೆಮರದ ಬಳಿ ಕುಳಿತು ಧ್ಯಾನಿಸು ತ್ತಿದ್ದದ್ದುಂಟು. ಕ್ರಮೇಣ ಇದು ಅವರ ಆತ್ಮಾನ್ವೇಷಣೆಯ ಸ್ಥಳವಾಗಿ ಪರಿಣಮಿಸಿತು. ಸುತ್ತಮುತ್ತಣ ಸಹಜ ಪ್ರಕೃತಿ ವೈಭವ ಇವರ ಮನಸ್ಸನ್ನು ಧ್ಯಾನದತ್ತ ದೂಡಿತು.

ಪ್ರಾಥಮಿಕ ಶಾಲೆಯನ್ನು ಬಾನಂದೂರಿನಲ್ಲಿ ಮುಗಿಸಿ ಬಿಡದಿಯ ಮಾಧ್ಯಮಿಕ ಶಾಲೆಗೆ ಸೇರಿದ್ದಾಯಿತು. ಊರಿನಿಂದ ಬಂದು ಹೋಗುವ ಸಮಸ್ಯೆ ಎದುರಾದಾಗ ಶಾಲೆಯ ಅಧ್ಯಾಪಕರಾದ ಮರಿಗಂಗಪ್ಪ ತಮ್ಮ ಮನೆಯಲ್ಲೇ ಬಾಲಕ ಗಂಗಾಧರಯ್ಯನನ್ನು ಇರಿಸಿಕೊಂಡರು. ಮರಿಗಂಗಪ್ಪ ವೀರಶೈವರಾದರೂ ಗಂಗಾಧರಯ್ಯನ ವಿಷಯದಲ್ಲಿ ಯಾವ ಭೇದಭಾವನೆಯನ್ನೂ ಮಾಡಲಿಲ್ಲ. ಮಾಧ್ಯಮಿಕ ಎಂಟನೆಯ ತರಗತಿ ಮುಗಿದ ಮೇಲೆ ರಾಮನಗರದ ವಿವಿಧೋದ್ದೇಶ ಪ್ರೌಢಶಾಲೆಗೆ ಸೇರಿದರು. ಓದುವುದರಲ್ಲಿ ಯಾವಾಗಲೂ ಮುಂದು. ಅದರ ಜತೆಗೆ ಫುಟ್​ಬಾಲ್, ಚೆಸ್ ಆಟಗಳಲ್ಲೂ ಆಸಕ್ತಿ. ಆದರೆ, ಶಾಲೆಯ ಬಿಡುವಿನ ವೇಳೆಯಲ್ಲಿ ನಿಸರ್ಗಾನುಸಂಧಾನ ಮಾಡುತ್ತಿದ್ದರು. ಸಂಜೆಯ ಹೊತ್ತು ನಿರ್ಜನ ಪ್ರದೇಶದ ಬಂಡೆಯೊಂದರ ಮೇಲೆ ಕುಳಿತು ಧ್ಯಾನಸ್ಥರಾಗುತ್ತಿದ್ದರು. ಸದ್ಗ›ಂಥಗಳ ಅಧ್ಯಯನಾಕಾಂಕ್ಷೆ ಅವರಲ್ಲಿ ಬೆಳೆಯುತ್ತಿತ್ತು. ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ ಮೇಲೆ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಸೇರಿದರು. ಬಾಡಿಗೆಗೆ ಕೊಠಡಿಯೊಂದನ್ನು ಮಾಡಿಕೊಂಡರು. ಕೆಲದಿನಗಳ ನಂತರ ಅವರ ಮಿತ್ರರಾದ ನಂಜಯ್ಯನವರ ಮನೆಯಲ್ಲಿ ಕೆಲಕಾಲ ಉಳಿದುಕೊಂಡರು. ಸರಿಯಾದ ವಾಸಸ್ಥಳಕ್ಕಾಗಿ ಹುಡುಕಾಡುವಾಗ ‘ಚಿದ್ಗಗನಾನಂದಾಶ್ರಮ’ ಇವರಿಗೆ ಇಷ್ಟವಾಯಿತು. ಅಲ್ಲಿ ಭಾರತದ ನಾನಾ ಕಡೆಗಳಿಂದ ಸಾಧುಗಳು ಬರುತ್ತಿದ್ದರು. ಅಲ್ಲಿ ಭಗವದ್ಗೀತೆ, ಉಪನಿಷತ್ತುಗಳ ಪ್ರವಚನ ಸದಾ ನಡೆಯುತ್ತಿತ್ತು.

ಗಂಗಾಧರಯ್ಯನವರ ಮನಸ್ಸು ಸದಾ ಪಾರಮಾರ್ಥಿಕ ಚಿಂತನೆಯತ್ತ ಸೆಳೆಯುತ್ತಲೇ ಇರುತ್ತಿತ್ತು. ಊರಿಗೆ ಬಂದಾಗ ಎಲ್ಲರೊಡನೆ ಬೆರೆತರೂ ಅಲೌಕಿಕ ಸ್ವಭಾವ ಸಹಜವಾಗಿಯೇ ಇರುತ್ತಿತ್ತು. ವ್ಯವಸಾಯದ ಕೆಲಸಗಳಲ್ಲಿ ತೊಡಗುತ್ತಿದ್ದುದುಂಟು. ಇಂಥದೇ ಆಹಾರವನ್ನು ಅವರು ಎಂದೂ ಅಪೇಕ್ಷಿಸಿದವರಲ್ಲ. ಆದರೆ, ತೊಗರಿಬೇಳೆ-ಸೊಪ್ಪಿನಿಂದ ಮಾಡಿದ ಉಪ್ಪುಸಾರು ಮತ್ತು ಮುದ್ದೆ ಊಟ ಬಲು ಪ್ರಿಯವಾಗಿರುತ್ತಿತ್ತು. ಊರಿನ ಹಿಪ್ಪೆಮರದ ಬಳಿ ಕುಳಿತಾಗ ಅನೇಕ ವಿಷಯಗಳು ಚರ್ಚೆಗೆ ಬರುತ್ತಿದ್ದುವು. ಆಗ ಗಂಗಾಧರಯ್ಯನವರು ಸಮಂಜಸವಾದ ಉತ್ತರಗಳನ್ನು ಆಸಕ್ತರಿಗೆ ನೀಡುತ್ತಿದ್ದರು.

ಸಂನ್ಯಾಸಾಶ್ರಮ: ಗಂಗಾಧರಯ್ಯನವರು ಅಧ್ಯಾತ್ಮ, ಧ್ಯಾನ ಈ ವಿಚಾರವಾಗಿಯೇ ಸದಾ ತಪಿಸುತ್ತಿದ್ದರು. ಲೌಕಿಕದ ಯಾವ ವಾಸನೆಗಳೂ ಅವರನ್ನು ಸೆಳೆಯುತ್ತಿರಲಿಲ್ಲ. ಆಗಾಗ್ಗೆ ಕನಸಿನಲ್ಲಿ ಸಂತರು ಕರೆಯುತ್ತಿದ್ದದ್ದುಂಟು. ಒಂದೆರಡು ಬಾರಿ ಆದಿಚುಂಚನಗಿರಿಗೆ ಹೋದಾಗ ಅನನ್ಯ ಅನುಭವ ಆಗಿದ್ದುಂಟು. ಪೂಜ್ಯ ಶ್ರೀರಾಮಾನಂದನಾಥರು ಕ್ಷೇತ್ರದ ಎಪ್ಪತ್ತನೆಯ ಜಗದ್ಗುರುಗಳು. ಅವರ ಆರೋಗ್ಯ ಸರಿಯಿರಲಿಲ್ಲ. ಪೀಠಕ್ಕೆ ಯೋಗ್ಯರಾದವರನ್ನು ನೇಮಕ ಮಾಡಬೇಕೆಂಬ ಹಂಬಲ ಸಮಾಜದ ಮುಖಂಡರಲ್ಲಿತ್ತು. ಗಂಗಾಧರಯ್ಯನವರ ಸ್ನೇಹಿತರಾದ ನಂಜಪ್ಪ ಮತ್ತು ಕಾಡಯ್ಯ ಅವರಿಗೆ ಈ ವಿಷಯ ತಿಳಿಯಿತು. ವೀರಣ್ಣಗೌಡರ ಬಳಿಗೆ ಗಂಗಾಧರಯ್ಯರನ್ನು ಕರೆದೊಯ್ದರು. ಪೀಠದ ವಟುವಾಗಲು ಗಂಗಾಧರಯ್ಯ ಸಿದ್ಧರೆಂದು ತಿಳಿಸಿದರು. ವೀರಣ್ಣಗೌಡರು ಅನೇಕ ರೀತಿಯಿಂದ ಪರಿಶೀಲಿಸಿದರು. ತಂದೆ-ತಾಯಿ ಒಪ್ಪಿದರೆ ಆಗಬಹುದೆಂದರು. ಅನಂತರ ವೀರಣ್ಣಗೌಡರು ಗಂಗಾಧರಯ್ಯನವರನ್ನು ಶ್ರೀಕ್ಷೇತ್ರಕ್ಕೆ ಕರೆದೊಯ್ದರು. ಯಶೋಧರಮ್ಮ ಅವರು ಒಬ್ಬರನ್ನು ಕರೆತಂದಿದ್ದರು. ಸಮಾಜದ ಮುಖಂಡರೆಲ್ಲ ಸಭೆ ಸೇರಿ 1968ರಲ್ಲಿ ಕೆ.ಆರ್.ಪೇಟೆ ಗೋವಿಂದಯ್ಯನವರನ್ನು ಚಂದ್ರಶೇಖರನಾಥರೆಂದೂ, ಬಾನಂದೂರಿನ ಗಂಗಾಧರಯ್ಯ ಅವರನ್ನು ಬಾಲಗಂಗಾಧರನಾಥರೆಂದೂ, ಚನ್ನರಾಯಪಟ್ಟಣದ ಬಿದರೆಯಿಂದ ಬಂದಿದ್ದ ಒಬ್ಬರನ್ನು ವಿಜಯೇಂದ್ರನಾಥರೆಂದೂ ಹೆಸರಿಸಿ ಸಂನ್ಯಾಸದೀಕ್ಷೆಯನ್ನು ನೀಡಿದರು. ಈ ನಡುವೆ ಕೆಂಗೇರಿಯ ಕೈಲಾಸಾಶ್ರಮದ ತಿರುಚ್ಚಿ ಮಹಾಸ್ವಾಮಿಗಳ ಬಳಿ ಅಧ್ಯಾತ್ಮಸಾಧನೆಗಾಗಿ ಕೆಲವರ್ಷ ಸ್ವಾಮಿಗಳು ಇದ್ದರು. ಅವರ ಶಿಷ್ಯಪ್ರೀತಿಗೆ ಇವರು ಒಳಗಾದರು. ಆಶ್ರಮದಲ್ಲಿರುವಾಗ ಸಂಸ್ಕೃತ ಕಾಲೇಜಿಗೆ ಸೇರಿ ಅದ್ವೈತವೇದಾಂತದ ವಿಶೇಷಾಧ್ಯಯನದಲ್ಲಿ ತೊಡಗಿದರು.

ಬಾಲಗಂಗಾಧರನಾಥರು ವಿದ್ಯಾಭ್ಯಾಸ ಮುಗಿಸಿಕೊಂಡು ಶ್ರೀಕ್ಷೇತ್ರಕ್ಕೆ ಬಂದರಷ್ಟೆ. ವಹಿಸಿದ ಕೆಲಸವನ್ನು ನಿಸ್ಪೃತೆಯಿಂದ ಮಾಡುತ್ತಿದ್ದರು. ಹಿರಿಯ ಗುರುಗಳು ವಯೋವೃದ್ಧರಾಗಿದ್ದರು. ಅವರು ಬಾಲಗಂಗಾಧರನಾಥರ ಕೈಹಿಡಿದುಕೊಂಡೇ ಶಿವೈಕ್ಯರಾದರು. ಶ್ರೀ ಬಾಲಗಂಗಾಧರನಾಥ ಸ್ವಾಮಿಗಳಲ್ಲಿರುವ ಸೇವಾಬುದ್ಧಿ, ಜ್ಞಾನ, ವೈರಾಗ್ಯ, ಕಾಯಕನಿಷ್ಠೆ, ಸಂಘಟನಾ ಶಕ್ತಿಗಳನ್ನು ಗಮನಿಸಿ ಸಿದ್ಧಸಿಂಹಾಸನಕ್ಕೆ ಅವರೇ ಅರ್ಹರೆಂದು ಹಿರಿಯ ಶ್ರೀಗಳು ಉಯಿಲಿನಲ್ಲಿ ಬರೆದಿದ್ದರು. ಬಾಲಗಂಗಾಧರನಾಥರು 24.09.1974 ರಂದು 71ನೆಯ ಪೀಠಾಧಿಕಾರಿಗಳಾಗಿ ಜ್ವಾಲಾಪೀಠದ ಸಿದ್ಧಸಿಂಹಾಸನವನ್ನು ಏರಿದರು. ಆದಿಚುಂಚನಗಿರಿಕ್ಷೇತ್ರದ ಭಾಗ್ಯದ ಬಾಗಿಲು ತೆರೆಯಿತು. ಇವರು ಸ್ವಾಮಿಗಳಾದಾಗ ಶ್ರೀಮಠವು ಬಡತನದ ಬವಣೆಯಲ್ಲಿತ್ತು. ಕ್ಷೇತ್ರಕ್ಕೆ ಭಕ್ತರು ಬರುತ್ತಿದ್ದರು. ಅನ್ನದಾನ ಆಗಬೇಕಿತ್ತು. ಹೀಗೆ ಅನೇಕ ಸಮಸ್ಯೆಗಳು ಇದ್ದವು. ಸ್ವಾಮಿಗಳು ಕ್ಷೇತ್ರದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸಿದರು. ಸಮಸ್ತ ಸಮುದಾಯದವರ ಶ್ರೀಕ್ಷೇತ್ರವಾಗಿ ರೂಪಿಸ ತೊಡಗಿದರು. ಪ್ರತಿಯೊಬ್ಬರೂ ಸಂಸ್ಕೃತ ವೇದ-ಆಗಮ ಕಲಿಯಬೇಕೆಂದು ಶ್ರೀಗಳು ಹಂಬಲಿಸಿದರು. ಸಂಸ್ಕೃತ ಕಾಲೇಜಿನಲ್ಲಿ ನೂರಾರು ವಿದ್ವಾಂಸರು ಶಾಸ್ತ್ರಗಳ ಅಧ್ಯಯನವನ್ನು ಮಾಡಿದರು.

ವಿದೇಶ ಪ್ರವಾಸ: ಶ್ರೀಗಳವರ ತಪಸ್ಸು-ಸಾಧನೆಗಳ ವಾರ್ತೆ ವಿದೇಶದಲ್ಲಿ ನೆಲೆಸಿದ್ದ ಭಕ್ತರಿಗೂ ತಲುಪಿತು. ಜರ್ಮನಿ, ಇಂಗ್ಲೆಂಡ್, ಅಮೆರಿಕ, ಸಿಂಗಾಪುರ, ಮಲಯ ಮುಂತಾದ ದೇಶಗಳಿಂದ ಪೂಜ್ಯರಿಗೆ ಕರೆಬಂದಿತು. 29.07.1983 ರ ಶುಕ್ರವಾರ ಬೆಂಗಳೂರಿನಿಂದ ಮುಂಬಯಿಗೆ ಬಂದು ಅಲ್ಲಿಂದ ಲಂಡನ್​ಗೆ ಪ್ರಯಾಣ ಮಾಡಿದರು. ಅಲ್ಲಿಂದ ನ್ಯೂರ್ಯಾಗೆ ವಿಮಾನದಲ್ಲಿ ತಲುಪಿದರು. ಇವರು ಹೋದಕಡೆಯೆಲ್ಲಾ ಅದ್ದೂರಿ ಸ್ವಾಗತ ಮತ್ತು ಭಕ್ತಿಸಮರ್ಪಣೆ ನಡೆದುವು. ಅನಂತರ ಚಿಕಾಗೋ, ಮಿಚಿಗನ್, ಲಾಸ್​ವೆಗಾಸ್, ಟೆಕ್ಸಾಸ್, ಪಿಟ್ಸ್​ಬರ್ಗ್, ನ್ಯೂಯಾರ್ಕ್ ಮುಂತಾದ ನಗರಗಳನ್ನೂ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿದರು. ಭಕ್ತರ ಜತೆ ಇದ್ದು ಧರ್ಮ-ಸಂಸ್ಕೃತಿಗಳ ಸ್ವರೂಪವನ್ನು ಅವರಿಗೆ ತಿಳಿಸಿಕೊಟ್ಟರು. ಭಾರತಕ್ಕೆ ಹಿಂತಿರುಗುವಾಗ ಭಕ್ತರ ಕಣ್ಣಲ್ಲಿ ನೀರು. ಅಗಲಿಕೆಯ ವೇದನೆ!

ಅನಂತರ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಶ್ರೀಗಳು ಗಮನಕೊಟ್ಟರು. ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಶಾಖಾಮಠಗಳನ್ನು ಸ್ಥಾಪಿಸಿದರು. ತಮ್ಮಲ್ಲಿ ಸಂನ್ಯಾಸದೀಕ್ಷೆ ಪಡೆದವರನ್ನು ಸ್ವಾಮೀಜಿಗಳನ್ನಾಗಿ ನೇಮಿಸಿದರು. ಪ್ರಾಥಮಿಕ ಶಾಲೆಯಿಂದ ಕಾಲೇಜಿನ ವರೆಗೆ ವಿದ್ಯಾರ್ಥಿಗಳು ಬಂದು ಕಲಿಯಲು ಅವಕಾಶ ಮಾಡಿಕೊಟ್ಟರು. ಬಡಮಕ್ಕಳಿಗೆ ಉಚಿತ ಊಟ-ಬಟ್ಟೆ-ವಸತಿ ಕಲ್ಪಿಸುವ ಬೃಹದ್​ಯೊಜನೆಯನ್ನು ಹಾಕಿಕೊಂಡರು. ಸಿರಿವಂತ ಭಕ್ತರು ನೀಡಿದ ಹಣವನ್ನು ಜನಸಾಮಾನ್ಯರ ಅಭಿವೃದ್ಧಿಗಾಗಿ ಬಳಸಿದರು. ಪ್ರತಿ ತಾಲ್ಲೂಕಿನಲ್ಲೂ ಶಾಲೆಗಳು ಪ್ರಾರಂಭವಾದುವು. ಕೈಕಸುಬು ಮಾಡುವವರಿಗೆ ಡಿಪ್ಲೊಮಾ ತರಗತಿಗಳನ್ನು ತೆರೆದರು. ಹೆಣ್ಣುಮಕ್ಕಳಿಗಾಗಿ ತರಬೇತಿ ಶಾಲೆಗಳನ್ನು ತೆರೆದು ಸ್ತ್ರೀಸಬಲೀಕರಣದ ಕಡೆ ಕೈಜೋಡಿಸಿದರು.

ಮತ್ತೊಮ್ಮೆ ಅಮೆರಿಕೆಗೆ ಬರಲು ಭಕ್ತರು ಆಗ್ರಹ ಪಡಿಸತೊಡಗಿದರು. ಶ್ರೀಗಳು 1985 ರಲ್ಲಿ ಭಕ್ತರಿಗಾಗಿ ಪ್ರವಾಸವನ್ನು ಕೈಗೊಂಡರು. ಶ್ರೀಗಳ ಎರಡನೆಯ ವಿದೇಶ ಪ್ರವಾಸ ಕ್ಷೇತ್ರಕ್ಕೆ ಸಂಪನ್ಮೂಲ ಒದಗಲು ಕಾರಣವಾಯಿತು. ಶ್ರೀಗಳು ಹಮ್ಮಿಕೊಂಡ ಅನೇಕ ಯೋಜನೆಗಳಿಗೆ ನೂರಾರು ದಾನಿಗಳು ಪ್ರಾಯೋಜಕರಾಗಿ ಬಂದರು. ಬೆಂಗಳೂರಿನ ವಿಜಯನಗರದಲ್ಲಿ ಭಾರತೀಯ ಆಯುರ್ವೆದ ಕಾಲೇಜು ಪ್ರಾರಂಭಗೊಂಡಿತು. ಶ್ರೀಕ್ಷೇತ್ರದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಕಾಲೇಜುಗಳು ಅಸ್ತಿತ್ವಕ್ಕೆ ಬಂದುವು. ಶ್ರೀಕಾಲಭೈರವೇಶ್ವರ ಸಂಸ್ಕೃತ ಕಾಲೇಜು ಅನುದಾನಸಹಿತ ಪ್ರಾರಂಭ ಆಯಿತು. ಇಲ್ಲಿ ಪ್ರತಿಯೊಬ್ಬರಿಗೂ ಸಂಸ್ಕೃತ ಕಲಿಯಲು ಅವಕಾಶ ಮಾಡಿಕೊಡಲಾಯಿತು. ಶ್ರೀಗಳು ಭಾರತಾದ್ಯಂತ ಪ್ರವಾಸ ಮಾಡಿದರು. ಕಾಶಿ ಮುಂತಾದ ಕಡೆ ಶಾಖಾಮಠಗಳನ್ನು ತೆರೆದರು. ಕರ್ನಾಟಕದ ಭಕ್ತರು ಬಂದಾಗ ಅವರು ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದರು. 1986ರಲ್ಲಿ ಮತ್ತೊಮ್ಮೆ ವಿದೇಶ ಪ್ರಯಾಣ ಆಕಸ್ಮಿಕವಾಗಿ ಒದಗಿಬಂದಿತು. ಅಲ್ಲಿಯ ತಾಂತ್ರಿಕ ಮತ್ತು ಔದ್ಯೋಗಿಕ ಪ್ರಗತಿಯನ್ನು ಕಂಡ ಶ್ರೀಗಳು ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯವನ್ನಾಗಿ ಮಾಡುವ ಕನಸನ್ನು ಇಟ್ಟುಕೊಂಡರು. ಪರಿಸರಕ್ಕೆ ಪ್ರಾಮುಖ್ಯತೆ ಕೊಟ್ಟು ಪ್ರತಿವರ್ಷ ಲಕ್ಷಾಂತರ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಕರ್ನಾಟಕದಲ್ಲಿ ಪ್ರತಿವರ್ಷ ಇಂತಿಷ್ಟು ಗಿಡಗಳನ್ನು ನೆಡುವ ಪದ್ಧತಿ ಸಾರ್ವಜನಿಕವಾಗಿ ಆಚರಣೆಗೆ ಬಂದದ್ದು ಇವರ ಕಾಲದಲ್ಲೇ.

ಶ್ರೀಗಳು ಅನೇಕ ರಾಜ್ಯಗಳಿಗೆ ಭೇಟಿಕೊಟ್ಟು ಅಲ್ಲಿಯ ಧಾರ್ವಿುಕ ಮುಖಂಡರೊಂದಿಗೆ ಧರ್ಮಸಮನ್ವಯ, ಮತಸಮನ್ವಯಗಳನ್ನು ರೂಪಿಸಿದರು. ಅಲ್ಲಲ್ಲಿ ಕಚ್ಚಾಡುತ್ತಿದ್ದವರನ್ನು ಕೂಡಿಸಿ ಒಲಿಸಿದರು. ಅನೇಕ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿದರು. ಕುಂಬಳಗೋಡಿನಲ್ಲಿರುವ ಬಿ.ಜಿ.ಎಸ್. ವೈದ್ಯಕೀಯ ಕಾಲೇಜು ದೇಶದಲ್ಲೇ ಪ್ರಥಮದರ್ಜೆಗೆ ಸೇರಿದ್ದು. ಅಂತಾರಾಷ್ಟ್ರೀಯ ಬಿ.ಜಿ.ಎಸ್. ಪಬ್ಲಿಕ್​ಶಾಲೆ ತೆರೆದು ನಮ್ಮ ನಾಡಿನ, ದೇಶದ ಸಂಸ್ಕೃತಿಯನ್ನು ಶೈಕ್ಷಣಿಕವಾಗಿ ಅಲ್ಲಿ ರೂಪಿಸಿದರು. ದೇಹಾಯಾಸವನ್ನು ಪರಿಗಣಿಸದೆ ಸಮಾಜಸೇವೆ, ಶಿಕ್ಷಣೋನ್ನತಿ, ಸಂಸ್ಕೃತಿ ಪ್ರಸಾರ, ಧಾರ್ವಿುಕ ಚಟುವಟಿಕೆಗಳಲ್ಲಿ ಸದಾ ನಿರತರಾದರು. ಬಡವರಿಗಾಗಿ, ಅನಾಥರಿಗಾಗಿ, ಅಂಗವಿಕಲರಿಗಾಗಿ, ಪರಿತ್ಯಕ್ತ ಹೆಣ್ಣು ಮಕ್ಕಳಿಗಾಗಿ ನೂರಾರು ವಿದ್ಯಾಶಾಖೆಗಳನ್ನು ಎಲ್ಲೆಲ್ಲೂ ತೆರೆದರು. ಆದಿಚುಂಚನಗಿರಿ ಕ್ಷೇತ್ರದಲ್ಲಿದ್ದ ಹಳೆಯ ದೇವಾಲಯಗಳಿಗೆ ಹೊಸರೂಪ ನೀಡಲು ಬೃಹದ್ ದೇವಾಲಯ ಸಮುಚ್ಚಯವನ್ನು ನಿರ್ಮಾಣ ಮಾಡಿಸಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಶ್ರೀಗಳು ಕೈಜೋಡಿಸಿದರು. ಶ್ರೀಗಳು ಕ್ಷೇತ್ರದ ಅಭಿವೃದ್ಧಿ ಮತ್ತು ಕರ್ನಾಟಕ ಅಭಿವೃದ್ಧಿ ಪಥದ ಕನಸನ್ನು ಕಂಡರು. ಶ್ರೀಕ್ಷೇತ್ರದಲ್ಲಿ ವಾರ್ಷಿಕ ಪಟ್ಟಾಭಿಷೇಕೋತ್ಸವ, ಗುರುಪೂರ್ಣಿಮೆ, ಸಂಸ್ಕೃತ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಹುಟ್ಟು ಹಾಕಿದರು. ‘ಚುಂಚಶ್ರೀ’ ಪ್ರಶಸ್ತಿಯನ್ನು ಪ್ರತಿವರ್ಷ ಸಾಧಕರಿಗೆ ನೀಡಿದರು. ರಾಜ್ಯ ಮತ್ತು ರಾಷ್ಟ್ರದ ಅತ್ಯುನ್ನತ ಗೌರವಗಳು ಶ್ರೀಗಳನ್ನು ಅರಸಿಕೊಂಡು ಬಂದುವು. ಅವರು ಯುಗಯೋಗಿಯಾಗಿ, ಕಾಯಕಜೀವಿಯಾಗಿ 14.01.2014 ರಂದು ಇಹವನ್ನು ತ್ಯಜಿಸಿ ಭೈರವೈಕ್ಯರಾದರು. ಇವರಿಂದ ವಿದ್ಯಾಕ್ಷೇತ್ರ, ಧರ್ಮಕ್ಷೇತ್ರ ಮತ್ತು ಜೀವನಕ್ಷೇತ್ರಗಳು ಅಭಿವೃದ್ಧಿ ಹೊಂದಿದವು. ಆದಿಚುಂಚನಗಿರಿ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡಿದ್ದಲ್ಲದೆ; ಅದನ್ನು ಅಧ್ಯಾತ್ಮಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಶ್ರೀಗಳದ್ದು. ಸನಾತನ ಧರ್ಮದ ಸಂಕೇತವಾಗಿ ಶ್ರೀಕ್ಷೇತ್ರ ಬೆಳೆದು ಬೆಳಕಾಗಿದೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top