Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಜ್ಞಾನ-ಕರ್ಮ-ಭಕ್ತಿ ಸಮನ್ವಯದ ಅಭಿನವ ಶಂಕರ

Sunday, 25.03.2018, 3:05 AM       No Comments

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​

ಕರ್ನಾಟಕದಲ್ಲಿ ಆಚಾರ್ಯ ಶಂಕರ ಭಗವತ್ಪಾದರ ತತ್ತ್ವವನ್ನು ಅಹರ್ನಿಶಿ ಉಪಾಸನೆ ಮಾಡುತ್ತ, ಅದನ್ನು ತಮ್ಮ ಉಸಿರಿರುವವರೆಗೂ ತಪಿಸಿದವರು ಶ್ರೀಸಚ್ಚಿದಾನಂದೇಂದ್ರ ಸರಸ್ವತಿಸ್ವಾಮಿಗಳು! ಇವರು ಹೊಳೆನರಸೀಪುರವನ್ನು ತಮ್ಮ ತಪೋಭೂಮಿಯಾಗಿಯೂ ಬೆಂಗಳೂರಿನ ಅಧ್ಯಾತ್ಮ ಪ್ರಕಾಶ ಕಾರ್ಯಾಲಯವನ್ನು ಜ್ಞಾನ-ಕರ್ಮಭೂಮಿಯನ್ನಾಗಿಯೂ ಮಾಡಿಕೊಂಡು ಉಪನಿಷತ್ತು ಸಾರುವಂತೆ ‘ತದ್ಧಿತಪಸ್ತದ್ಧಿ ತಪಃ’ ಎಂದೇ ಹೆಸರಾಂತವರು. ಅವರು ಅತ್ತ 18ನೆಯ ಉತ್ತರಾರ್ಧದಲ್ಲೂ ಇತ್ತ 19ನೆಯ ಪೂವಾರ್ಧದಲ್ಲೂ 96ನೆಯ ವಯಸ್ಸಿನವರೆಗೂ ಋಷಿಜೀವನ ನಡೆಸಿದ ತಪಸ್ವಿಗಳು! ಆಚಾರ್ಯ ಶಂಕರರ ಮೂಲತತ್ತ್ವರಹಸ್ಯವನ್ನು ಹೆಕ್ಕಿ ಅದರ ಸಾರವನ್ನು ಲೋಕಕ್ಕೆ ಸಾರಿದ ಕೀರ್ತಿ ಸ್ವಾಮಿಗಳಿಗೆ ಸಲ್ಲುತ್ತದೆ.

ಜನನ-ಬಾಲ್ಯ: ಇವರು 05.01.1880ರಲ್ಲಿ ಪ್ರಮಾಥಿನಾಮ ಸಂವತ್ಸರ ಮಾರ್ಗಶೀರ್ಷಮಾಸ ಬಹುಳ ಅಷ್ಟಮಿಯಂದು ಜನ್ಮಿಸಿದರು. ಅವರು ಹೇಳಿಕೊಂಡಂತೆ ಚಿಕ್ಕಮಗಳೂರಿನ ಕೋಟೆ ಸಮೀಪದ ‘ಹೊಸಮನೆ’ಯಲ್ಲಿ ಇವರು ಜನ್ಮಿಸಿದರಂತೆ. ಆದರೆ, ಬೆಳೆದದ್ದು ಕಡೂರು ತಾಲೂಕಿನ ಯಳ್ಳಂಬಳಸೆ ಎಂಬ ಗ್ರಾಮದಲ್ಲಿ. ಇವರ ತಂದೆ ನಂಜುಂಡಪ್ಪ ಶೇಕ್​ದಾರರಾಗಿ ನಿವೃತ್ತಿಯಾದವರು. ಇವರ ಮಡದಿ ಲಕ್ಷ್ಮೀದೇವಿ. ಈಕೆ ಗೃಹಲಕ್ಷ್ಮಿ. ಇಂಥ ಸಾತ್ವಿಕ ದಂಪತಿಗಳ ಮಗನೇ ಯಲ್ಲಂಬಳಸೆ ಸುಬ್ರಹ್ಮಣ್ಯ ಶರ್ಮ/ವೈ.ಸುಬ್ಬರಾಯ. ಹುಟ್ಟಿದಂದಿನಿಂದ ಅನಾರೋಗ್ಯ. ತಾಯಿಯ ಅಕ್ಕರೆಯ ಪಾಲನೆ ರಾಯರನ್ನು ಬದುಕಿಸಿತು! ಹತ್ತನೆಯ ವರ್ಷಕ್ಕೆ ಉಪನಯನ. ಸಂಧ್ಯಾವಂದನೆಯ ಮೂಲಕ ಒಳಗೆ ಅರಿವಿನ ಬೆಳಕು ಕಂಡೂ ಕಾಣದಂತೆ ಉದಿಸಿತು. ಆ ಊರಿನಲ್ಲಿದ್ದ ಶ್ರೀಚರಂತಮಠ ಎಂಬುವರ ‘ಕೂಲಿಮಠ’ದಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ನಡೆಯಿತು. ಅದು 1 ವರ್ಷ ಮಾತ್ರ! ನಂತರ ಸರ್ಕಾರಿಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಯಿತು. ಈ ನಡುವೆ ಅಣ್ಣ ಓದಿಸಲು ಮೂಡಿಗೆರೆಗೆ ಕರೆದೊಯ್ದರು. ಅಲ್ಲಿಯ ಪ್ರಕೃತಿಸಂಭ್ರಮ ಇವರನ್ನು ಆಕರ್ಷಿಸಿತು. ಓದುವುದರ ಕಡೆ ಲಕ್ಷ್ಯ ಇಲ್ಲವಾಯಿತು. ಇದರ ಜತೆಗೆ ಕಾಯಿಲೆ. ಒಮ್ಮೆ ತಾಯಿ ಲಕ್ಷ್ಮೀದೇವಿ ಬಂದು, ಮಗನ ಸ್ಥಿತಿಯನ್ನು ನೋಡಲಾರದೆ ತಮ್ಮೂರಿಗೆ ಕರೆದೊಯ್ದರು. 1891ರಲ್ಲಿ ಭಾವನವರು ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರು.

ಚಿಕ್ಕಮಗಳೂರಿನಲ್ಲಿ ಒಂದನೆಯ ತರಗತಿಗೆ ಸೇರಿ ಸಂಸ್ಕೃತ-ಕನ್ನಡ-ಗಣಿತ ವಿಷಯಗಳಲ್ಲಿ ಆಸಕ್ತಿ ಮೂಡಿತು. ಅನಾರೋಗ್ಯದ ಕಾರಣ ಚಿಕ್ಕಮಗಳೂರು ಬಿಟ್ಟು 1893-95ರವರೆಗೆ ತರೀಕೆರೆಯಲ್ಲಿ ವಿದ್ಯಾಭ್ಯಾಸ ಆಯಿತು. ಅಲ್ಲಿ ದೊಡ್ಡಣ್ಣ-ಅತ್ತಿಗೆಯರ ಪ್ರೀತಿ-ವಾತ್ಸಲ್ಯ ಓದಿಗೆ ಅಮೃತಸಿಂಚನವನ್ನೇ ನೀಡಿತು. 1894ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆ ಕಟ್ಟಿ ಪಾಸಾದದ್ದು ಊರಿಗೆ ಸಂಭ್ರಮವನ್ನೇ ತಂದಿತು. ಇದೇ ವರ್ಷ ಅರಸೀಕೆರೆಯ ಮೈಲಾರ ಜೋಯಿಸರ ಮಗಳ ಜತೆ ಸುಬ್ಬರಾಯನ ಮದುವೆ ಜರುಗಿತು. 1895ರಲ್ಲಿ ನಾಲ್ಕನೆಯ ತರಗತಿ ಉತ್ತೀರ್ಣನಾಗಿ 1897ರಲ್ಲಿ ಚಿಕ್ಕಮಗಳೂರಿಗೆ ಬಂದು 1899ರವರೆಗೆ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದಾಯಿತು. ಪ್ಲೀಡರ್ ಹರಿಯಪ್ಪನವರ ನೆರವು. ಈ ನಡುವೆ ಪ್ಲೀಡರ್ ಹರಿಯಪ್ಪನವರ ಮನೆಯಿಂದ ಹೆಡ್​ವಾಸ್ಟರ್ ವಿ. ಸುಬ್ರಹ್ಮಣ್ಯ ಅಯ್ಯರ್ ಮನೆಗೆ ಬಂದದ್ದು ಭೌತಿಕ ಸೌಖ್ಯದ ಜತೆಗೆ ಬೌದ್ಧಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೂ ಕಾರಣವಾಯಿತು. ಸುಬ್ರಹ್ಮಣ್ಯ ಅಯ್ಯರ್ ಮನೆಗೆ ಅನೇಕ ವಿದ್ವಾಂಸರು ಬರುತ್ತಿದ್ದರು. ಅಲ್ಲಿ ಸಾಂಖ್ಯ, ವೇದಾಂತ ಎಂಬ ಮಾತುಗಳು ತತ್ತ್ವಶಾಸ್ತ್ರದ ಚರ್ಚೆಗಳು, ಸುಬ್ಬರಾಯನ ಕಿವಿಯ ಮೇಲೆ ಬೀಳಲು ಸಾಧ್ಯವಾಯಿತು. ವಿಜ್ಞಾನದ ಜತೆಗೆ ವೇದಾಂತದ ಅಭಿರುಚಿಯೂ ಬೆಳೆಯಿತು. ಪ್ರತಿನಿತ್ಯದ ಸಂಧ್ಯಾವಂದನೆಯಿಂದ ಏಕಾಗ್ರತೆ ಹೆಚ್ಚಾಯಿತು, ಪ್ರಾಣಾಯಾಮದಿಂದ ಆರೋಗ್ಯ ಸುಧಾರಿಸಿತು. 1899ರಲ್ಲಿ ಹಾಸನದಲ್ಲಿ ಮೆಟ್ರಿಕ್ಯುಲೇಷನ್ ಪಾಸಾಯಿತು. ವಿ. ಸುಬ್ರಹ್ಮಣ್ಯ ಅಯ್ಯರ್ ನೆರವಿನಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಎಫ್.ಎ. ಕ್ಲಾಸಿಗೆ ಸೇರಿದರು. ಇತ್ತ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತಾಭ್ಯಾಸ.

ಸರ್ಕಾರಿ ಉದ್ಯೋಗ: ಯುವಕ ಸುಬ್ಬರಾವ್ ಪಂಚೀಕರಣ, ವೇದಾಂತಸಾರ ಮುಂತಾದ ಅನೇಕ ಗ್ರಂಥಗಳ ವ್ಯಾಸಂಗಕ್ಕೆ ತೊಡಗಿದರು. ಈ ನಡುವೆ 12 ರೂಪಾಯಿಗಳ ತಲುಬಿನ ಮೇಲೆ ಕಡೂರಿನಲ್ಲಿ ಓವರ್​ಸೀಯರ್ ಕೆಲಸಕ್ಕೆ ಡೆಪ್ಯುಟಿ ಕಮಿಷನರಿಂದ ನಿರೂಪ ಬಂದಿತು. 1902ರಲ್ಲಿ ಕಡೂರಿನಲ್ಲಿ ದಕ್ಷತೆಯಿಂದ ಕೆಲಸ ಮಾಡಿದರು. ನಂತರ ಕೆಲಸಕ್ಕೆ ರಜೆ ಹಾಕಿ ಬೆಂಗಳೂರಿಗೆ ಹೊರಟರು. ಎಫ್.ಎ. ಸೀನಿಯರ್ ತರಗತಿಗೆ ಸೇರಿದರು. ಅಲ್ಲಿ ಕೃಷ್ಣಸ್ವಾಮಿ ಅಯ್ಯರ್ ಔದಾರ್ಯದಿಂದ ವಿದ್ಯಾಭ್ಯಾಸಕ್ಕೆ ಅನುಕೂಲವಾಯಿತು. ನಂತರ ಕಡೂರಿಗೆ ಮರಳಿ ಕೆಲಸಕ್ಕೆ ಸೇರಿಕೊಂಡರು.

ಸುಬ್ಬರಾಯರು ಖಾಸಗಿ ಸಂಸ್ಕೃತ ಮೇಷ್ಟರಾಗಿಯೂ ಪ್ರಸಿದ್ಧಿ ಪಡೆದಿದ್ದರು. ಜಗಳೂರಿನ ಸ್ಕೂಲಿಗೆ ಇವರು ಶಿಕ್ಷಕರಾಗಿ ನಿಯುಕ್ತರಾದರು. ನಂತರ ಹೊಳಲ್ಕೆರೆಗೆ ವರ್ಗವಾಯಿತು. ಮುಂದೆ ನಾಲ್ಕೆ ೖದು ತಿಂಗಳಿಗೆ 12 ರೂ. ಸಂಬಳದ ಮೇಲೆ ಮೊಳಕಾಲ್ಮೂರಿಗೆ ವರ್ಗವಾಯಿತು. ಇವರು ಗರ್ಭಿಣಿ ಹೆಂಡತಿಯೊಡನೆ ತೆರಳಿದರು. ವಿದ್ಯಾಭ್ಯಾಸದ ಇಲಾಖೆಯಲ್ಲಿ ಕಾಯಂ ನೌಕರನ ಸ್ಥಾನ ಪಡೆದರು. ಮೊಳಕಾಲ್ಮೂರಿನಲ್ಲಿ ಥಿಯಾಸಫಿಕಲ್ ಸೊಸೈಟಿಯ ಕಾರ್ಯದರ್ಶಿಗಳಾಗಿದ್ದ ವೆಂಕಟರಾಯರ ಸ್ನೇಹ ಒದಗಿತು. ಅವರೊಡನೆ ಉಪನಿಷತ್ತಿನ ಅಧ್ಯಯನಕ್ಕೆ ತೊಡಗಿದರು. ಅಲ್ಲಿರುವಾಗಲೇ ಹೊಳಲ್ಕೆರೆ ಎ.ವಿ. ಸ್ಕೂಲಿಗೆ ಮುಖ್ಯೋಪಾಧ್ಯಾಯರಾಗಿ ವರ್ಗವಾಯಿತು. ಅಲ್ಲಾದ ಜೀವಣ್ಣದೀಕ್ಷಿತರ ಪರಿಚಯ ಅಧ್ಯಾತ್ಮ ವ್ಯಾಸಂಗಕ್ಕೆ ಪರಿಪುಷ್ಟಿ ನೀಡಿತು. ಶಂಕರ ಭಗವತ್ಪಾದರ ಗೀತಾಭಾಷ್ಯ ಮತ್ತು ಇತರ ಪ್ರಕರಣ ಗ್ರಂಥಗಳ ಅಧ್ಯಯನ ಚೆನ್ನಾಗಿಯೇ ಆಯಿತು. ಆಗ್ಗೆ ಕಡೂರಿನಲ್ಲಿ ಹೊಸಕೆರೆ ಚಿದಂಬರಯ್ಯ ಇದ್ದರು. ಇಬ್ಬರೂ ಆಗಾಗ್ಗೆ ಕೂಡುವುದು ನಡೆದೇ ಇತ್ತು!

ಸಾಧನೆಯ ಹಾದಿ: ಸುಬ್ಬರಾಯರು ದಾವಣಗೆರೆಗೆ ಬಂದಾಗ ಹರಿಹರದ ಸುಬ್ಬರಾಯರ ಪರಿಚಯ ಗಾಢವಾಗಿ ಆಯಿತು. ಅವರ ಮೂಲಕ ಕುರ್ತಕೋಟಿ ಮಹಾಭಾಗವತರ ದರ್ಶನಕ್ಕೆ ಅವಕಾಶ ಸಿಕ್ಕಿತು. ಕುರ್ತಕೋಟಿ ಭಾಗವತರು ಹರಿಹರಕ್ಕೆ ಬಂದಾಗ ಸಾಕ್ಷಾತ್ತು ಪರಿಚಯವೂ ಆಯಿತು. ಅವರ ಪ್ರಖರ ವಿದ್ವತ್ತಿಗೆ, ಸಾಧನೆಗೆ ರಾಯರು ಮಣಿದರು. ಸುಬ್ಬರಾಯರಿಗೆ ‘ಭಾಷ್ಯಶಾಂತಿ’ ಮಾಡಿಸಿಕೊಳ್ಳಬೇಕೆಂಬ ಉತ್ಕಟೇಚ್ಛೆ ಬೆಳೆಯುತ್ತಿತ್ತು. ಕಾಲಡಿಯಲ್ಲಿ ಶಂಕರಾಚಾರ್ಯ ಪ್ರತಿಷ್ಠೆಗೆ ವ್ಯವಸ್ಥೆ ಆಗುತ್ತಿದ್ದು, ಅಲ್ಲಿಯೇ ‘ಭಾಷ್ಯಶಾಂತಿ’ಗೆ ಸಂಕಲ್ಪ ಮಾಡಿಕೊಂಡರು. ಹರಿಹರಕ್ಕೆ ಅನೇಕ ವಿದ್ವಾಂಸರು ಬರುತ್ತಿದ್ದದ್ದುಂಟು. ಬೆಟಗೇರಿ ಕೃಷ್ಣಶಾಸ್ತ್ರಿ ಎಂಬುವರ ಪರಿಚಯ ಸುಬ್ಬರಾಯರ ಬದುಕಿಗೆ ಬೆಳಕನ್ನೇ ನೀಡಿತು. ಅವರ ಸೂಚನೆಯ ಮೇರೆಗೆ ಭಾಷ್ಯಶಾಂತಿ ಪಡೆಯಲು ಕಾಲಡಿಗೆ ಹೊರಟರು. ಅಲ್ಲಿ ಶೃಂಗೇರಿ ಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳಿಂದ 1909ರಲ್ಲಿ ಭಾಷ್ಯಶಾಂತಿ ಆಯಿತು. ಇದು ಸುಬ್ಬರಾಯರಿಗೆ ಸಂದ ಆಧ್ಯಾತ್ಮಿಕ ಅಮೋಘ ಫಲ. ಬಳಿಕ ಸುಬ್ಬರಾಯರು ಕ್ರಮಬದ್ಧವಾಗಿ ಭಾಷ್ಯಪಾಠವನ್ನು ಮಹಾವಿದ್ವಾಂಸರಾದ ಹಾನಗಲ್ಲು ವಿರೂಪಾಕ್ಷಶಾಸ್ತ್ರಿಗಳಿಂದ ಹೇಳಿಸಿಕೊಂಡರು. ಇವರೊಡನೆ ಹೊಸಕೆರೆ ಚಿದಂಬರಯ್ಯನವರು ಜತೆಗೂಡಿದರು. ಶೃಂಗೇರಿ ಮಹಾಸ್ವಾಮಿಗಳಿಂದ ಶಿವಪಂಚಾಕ್ಷರಿ ಮಂತ್ರೋಪದೇಶವೂ ಆಯಿತು. ರಾಯರು ಶೃಂಗೇರಿ ಶ್ರೀಗಳಿಂದಲೂ ಶಾಸ್ತ್ರಿಗಳಿಂದಲೂ ಅಧ್ಯಾತ್ಮಲೋಕದ ಹೆದ್ದಾರಿಗೆ ರಹದಾರಿ ಪಡೆದರು. ಈ ನಡುವೆ ದಾವಣಗೆರೆಗೆ ಗೋಂದಾವಳಿ ಮಹಾರಾಜರು ಬಂದಾಗ ಅವರ ಅನುಗ್ರಹಕ್ಕೂ ಪಾತ್ರರಾದರು. ಸುಬ್ಬರಾಯರು ಶಿಕ್ಷಕವೃತ್ತಿಯಲ್ಲಿರುವಾಗಲೇ ಆ ವೃತ್ತಿಗೆ ಘನತೆ ತಂದುಕೊಡುತ್ತಲೇ ವೇದಾಂತದ ವ್ಯಾಸಂಗವನ್ನು ಮುಂದುವರಿಸಿದರು. ಸದಾ ಶಂಕರ ಭಗವತ್ಪಾದರ ಭಾಷ್ಯಗಳ ಅಧ್ಯಯನಕ್ಕೆ ಮನಕೀಲಿಸಿದರು. ಬೆಂಗಳೂರಿನ ಎ.ವಿ. ಪೋರ್ಟ್ ಹೈಸ್ಕೂಲಿಗೆ 1917ರಲ್ಲಿ ವರ್ಗವಾಗಿ ಬಂದಾಗ ಕೆ.ಎ. ಕೃಷ್ಣಸ್ವಾಮಿ ಅಯ್ಯರ್ ಎಂಬುವರ ಸಂಪರ್ಕದಲ್ಲಿ ಅವರ ವ್ಯಾಸಂಗ ಇನ್ನೂ ತೀವ್ರಸ್ಥಿತಿಗೆ ತಲುಪಿತು. ಅವರು ಬರೆದ ‘ಫಂಡಮೆಂಟಲ್ ಆಫ್ ವೇದಾಂತ’ ಎಂಬ ಪುಸ್ತಕ ಇವರಿಗೆ ಹೊಸದೊಂದು ದಾರಿಯನ್ನೇ ತೋರಿಸಿತು. ಈ ನಡುವೆ ‘ಮೂಲಾವಿದ್ಯೆ’ ಕುರಿತು ಚಿಂತಿಸತೊಡಗಿದರು. ಈಗಿನ ವೇದಾಂತಿಗಳು ಅದು ಅಧ್ಯಾಸಕ್ಕೆ ಕಾರಣವೆಂದೂ ಜ್ಞಾನಿಗಳಲ್ಲಿ ಅದರ ಒಂದಂಶ ಇರುವುದೆಂದೂ ಹೇಳುತ್ತಿರುವ ಸಂಗತಿಯ ಮೂಲೋತ್ಪಾಟನೆ ಮಾಡಲು ಅಧ್ಯಯನಕ್ಕೆ ತೊಡಗಿದರು. ಒಂದು ದಿನ ವಿರೂಪಾಕ್ಷಶಾಸ್ತ್ರಿಗಳ ಜತೆ ಪ್ರಸ್ತಾಪ ಮಾಡಿದಾಗ ‘ಅವಿದ್ಯಾಲೇಶ’ ಉಂಟೆಂದು ಹೇಳಿದರು. ರಾಯರಿಗೆ ಗಾಬರಿಯೇ ಆಯಿತು. ಇದರ ತಥ್ಯಕ್ಕಾಗಿ ಬೃಹದಾರಣ್ಯಕ ಭಾಷ್ಯವನ್ನು ಮನಮುಟ್ಟಿ ಓದಿದಾಗ ಇದಕ್ಕೆಲ್ಲ ಮುಂದಿನ ವ್ಯಾಖ್ಯಾನಕಾರರು ಮಾಡಿದ ಉಪಪತ್ತಿಯೆಂದು ತಿಳಿದುಬಂದಿತು. ಈ ಹಿನ್ನೆಲೆಯಲ್ಲಿ ‘ಮೂಲಾವಿದ್ಯಾನಿರಾಸಃ’ ಎಂಬ ಗ್ರಂಥವನ್ನು ಬರೆಯತೊಡಗಿದರು.

ಅಧ್ಯಾತ್ಮಪ್ರಕಾಶ: ಸುಬ್ಬರಾಯರಿಗೆ ವೇದಾಂತ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರಿಕೆ ತರಬೇಕೆಂಬ ಹಂಬಲ ಮನಸ್ಸಿನಲ್ಲೇನೊ ಇತ್ತು. ಸೂರಪ್ಪನವರು ಬೆಂಬಲವನ್ನು ಸೂಚಿಸಿದ್ದರು. ಆದರೆ, ಅವರು ಮರಣಿಸಿದರು. ಉಳಿದ ಗೆಳೆಯರು ಮತ್ತು ಶಿಷ್ಯರ ಜತೆ ಸೇರಿ ‘ಅಧ್ಯಾತ್ಮ ಪ್ರಕಾಶ’ ಎಂಬ ಪತ್ರಿಕೆಯನ್ನು ಹೊರತಂದರು. ಆರ್ಥಿಕ ಅಡಚಣೆ ಇದ್ದರೂ ಬಿಡಲಿಲ್ಲ. 1923ರಲ್ಲಿ ಮೊದಲ ಸಂಚಿಕೆ ಹೊರಬಂದಿತು. ನಂತರ 3ನೆಯ ಸಂಚಿಕೆ ಬಂದು ತುಸುಕಾಲ ನಿಂತುಹೋಯಿತು. 1920ರಲ್ಲಿ ಅಧ್ಯಾತ್ಮಪ್ರಕಾಶ ಮುದ್ರಣಾಲಯ ಅಸ್ತಿತ್ವಕ್ಕೆ ಬಂದಿತು. ಮಗ ನರಸಪ್ಪನಿಗೆ ಅದರ ಜವಾಬ್ದಾರಿ ವಹಿಸಿದರು. ‘ಗುರುಭಕ್ತಿಸಾರ’ ಮೊದಲ ಪ್ರಕಟಿತ ಪುಸ್ತಕ ಹೊರಬಂದಿತು. ಶ್ರೀಮದ್ಭಗವದ್ಗೀತಾಭಾಷ್ಯ, ಕಾಠಕೋಪನಿಷತ್ ಭಾಷ್ಯಗ್ರಂಥಗಳು ಸಕ್ರಮವಾಗಿ ಪ್ರಕಟಗೊಂಡವು. 1933 ರಿಂದ 1937ರ ವರೆಗೆ ಅಧ್ಯಾತ್ಮಪ್ರಕಾಶ ಕಾರ್ಯಾಲಯ ಮುನ್ನಡೆಯಿತು. 1938ರಲ್ಲಿ

ಹೊಳೆನರಸೀಪುರವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಅಲ್ಲಿ ವಿಶೇಷ ಉಪನ್ಯಾಸ, ಗ್ರಂಥ ಪ್ರಕಟಣೆ, ಅಧ್ಯಾತ್ಮಪ್ರಕಾಶ ಪತ್ರಿಕೆ ಸ್ಥಾಪನೆಗೊಂಡು ಮುಂದು ವರಿಯಿತು. ಹೊಳೆನರಸೀಪುರದಲ್ಲಿ ಅಧ್ಯಾತ್ಮ ಕಾರ್ಯಾಲಯ ಸ್ಥಾಪನೆಗೆ ಸ್ಥಳ ನೀಡಿ ದವರು ಅರಕಲಗೂಡು ಶ್ರೀಕಂಠಯ್ಯ. 1943ನೆಯ ಇಸವಿ ಹೊತ್ತಿಗೆ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭ ಆಯಿತು. ಅಧ್ಯಾತ್ಮಬಂಧುಗಳ ನೆರವು ಸಕಾಲಕ್ಕೆ ಒದಗಿತು.

ಆಶ್ರಮ ಸ್ವೀಕಾರ: ರಾಯರು ಅಧ್ಯಾತ್ಮದಲ್ಲಿ ಬಹಳದೂರ ಸಾಗಿದ್ದರೂ ಸಂಸಾರ ಮತ್ತು ಕಾರ್ಯಾಲಯಗಳನ್ನು ಸ್ಥಿರಗೊಳಿಸುವ ಪ್ರಯತ್ನದಲ್ಲಿಯೇ ಇದ್ದರು. 1935ರಲ್ಲಿ ಅವನೀಮಠದ ಪೀಠಾಧಿಪತಿಯಾಗುವ ಅವಕಾಶ ಕೂಡಿಬಂದಿತ್ತು. ಆದರೆ, ಮಠವೊಂದಕ್ಕೆ ಪೀಠಾಧಿಪತಿ ಆಗುವ ಆಕಾಂಕ್ಷೆ ಇರಲಿಲ್ಲ. ಮುಂದೆ, ತುರೀಯಾಶ್ರಮ ಸ್ವೀಕಾರವನ್ನು 1948ರ ಮೇ 9 ಮತ್ತು 10ರಂದು ನಿಗದಿಗೊಳಿಸಲಾಯಿತು. ಅದು ಜ್ಯೇಷ್ಠ ಶುದ್ಧ ತದಿಗೆ ದಿನ. ಮತ್ತೂರು ಕಡೆಯಿಂದ ಶ್ರೀಬೋಧಾನಂದ್ರೇಂದ್ರ ಸರಸ್ವತಿ ಸ್ವಾಮಿಗಳು ಮಹಾವಾಕ್ಯೋಪದೇಶ ಮಾಡಿ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಎಂಬ ಯೋಗಪಟ್ಟವನ್ನು ನೀಡಿದರು. ಅನಂತರ ಉತ್ತರ ಪಶ್ಚಿಮ ಭಾರತ ಪ್ರವಾಸವನ್ನು ಕೈಗೊಂಡರು. ಅಲ್ಲಲ್ಲಿ ವೇದಾಂತಗೋಷ್ಠಿಗಳನ್ನು ನಡೆಸಿದರು. ಅಧ್ಯಾತ್ಮವಿದ್ಯಾಲಯ 1955-60ರಲ್ಲಿ ಸ್ಥಾಪನೆ ಆಯಿತು. 1961-1967ರ ವರೆಗೆ ವಿಶ್ವಭಾರತ ಪ್ರವಾಸ ಮಾಡುತ್ತ ಹರೇರಾಮ ಮಂತ್ರ ಜಪಾನುಷ್ಠಾನದಲ್ಲಿ ನಿರತರಾದರು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಉಪನಿಷತ್ ಭಾಷ್ಯಗಳ ಅನುವಾದ ಪ್ರಕಟಣೆಗೆ ಉದಾರವಾಗಿ ಧನ ಸಹಾಯ ಮಾಡಿದರು. ಅನಾರೋಗ್ಯ ಬಾಧಿಸುತ್ತಿದ್ದರೂ ಪ್ರವಚನ ಅಭ್ಯಾಸ-ತಪೋನುಷ್ಠಾನಗಳನ್ನು ನಿಲ್ಲಿಸಲಿಲ್ಲ.

ಸ್ವಾಮಿಗಳು ಕೊನೆಕೊನೆಗೆ ಚಾಪೆಯ ಮೇಲೆ ಗುಬ್ಬಚ್ಚಿಯಂತೆ ಮಲಗಿರುತ್ತಿದ್ದರು. ಒಂದೆರಡು ಚಮಚ ಹಾಲನ್ನು ಗುಟುಕರಿಸುತ್ತಿದ್ದರು. 05.08.1975ರ ರಾಕ್ಷಸನಾಮ ಸಂವತ್ಸರ ಆಷಾಢ ಬಹುಳ ತ್ರಯೋದಶಿ ಬೆಳಿಗ್ಗೆ 10ಗಂಟೆ 05 ನಿಮಿಷಕ್ಕೆ ಪಾರ್ಥಿವ ಶರೀರವನ್ನು ತ್ಯಜಿಸಿ ಬ್ರಹ್ಮೀಭೂತರಾದರು. ಡಿ.ವಿ.ಜಿ. ಅವರು ತಮ್ಮ ಮನೆಯ ಮುಂದೆ ನಿಂತು ಸ್ವಾಮಿಗಳ ಅಂತಿಮದರ್ಶನವನ್ನು ಪಡೆದರು. ಅವರು ಸ್ವಾಮಿಗಳನ್ನು ಕುರಿತು, ‘ನಾನು ತಂದೆಯನ್ನು ಕಳೆದುಕೊಂಡಾಗ ಅಳಲಿಲ್ಲ. ಆದರೆ, ಸ್ವಾಮಿಗಳನ್ನು ಕಳೆದುಕೊಂಡಾಗ ತುಂಬಾ ಅತ್ತುಬಿಟ್ಟೆ. ನನ್ನ ಮನಸ್ಸು ಶೂನ್ಯವಾಯಿತು’ ಎಂದು ಹೇಳಿದರಂತೆ. ಆದಿನ ಕಾರ್ಯಾಲಯದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟು ರಾತ್ರಿ 8 ಗಂಟೆಗೆ ಹೊಳೆನರಸೀಪುರಕ್ಕೆ ತೆಗೆದುಕೊಂಡು ಹೋಗಿ ಶಾಸ್ತ್ರೋಕ್ತವಿಧಿಯಂತೆ 06.08.1975ರ ಬೆಳಿಗ್ಗೆ 10 ಗಂಟೆಗೆ ಸಮಾಧಿಯನ್ನು ಮಾಡಲಾಯಿತು.

ಸ್ವಾಮಿಗಳು ಜೀವನದುದ್ದಕ್ಕೂ ಶಾಂಕರಸಿದ್ಧಾಂತದ ಪ್ರಚಾರದ ಕಡೆಗೂ ಅಶಾಂಕರ ಪ್ರಕ್ರಿಯೆಯಲ್ಲಿಯ ದೋಷಗಳನ್ನು ಹಾಗೂ ಶಾಂಕರ ಪ್ರಕ್ರಿಯೆಯನ್ನು ವಿವರಿಸಲೆಂದೇ ಬಂದಂಥ ವ್ಯಾಖ್ಯಾನ ಪ್ರಸ್ಥಾನಗಳಲ್ಲಿರುವ ಪ್ರಕ್ರಿಯಾ ದೋಷಗಳ ಕಡೆಗೂ ಬೆರಳಿಟ್ಟು ನಿರ್ಭೀತಿಯಿಂದ ತೋರಿಸಿದರು. ಈ ವಿಷಯವಾಗಿ ಕನ್ನಡ-ಸಂಸ್ಕೃತ-ಇಂಗ್ಲಿಷಿನಲ್ಲಿ ಇನ್ನೂರಕ್ಕೂ ಹೆಚ್ಚು ಗ್ರಂಥಗಳನ್ನು ಬರೆದರು. ಅವರು 96 ವರ್ಷ ಸಾತ್ವಿಕಬಾಳುವೆ ಮಾಡಿ ಅಭಿನವ ಶಂಕರರೆಂದೇ ಭಾರತಾದ್ಯಂತ ಖ್ಯಾತರಾದರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top